ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೇಪಥ್ಯಕ್ಕೆ ಸರಿಯುತ್ತಿರುವ ವೃತ್ತಿ ರಂಗಭೂಮಿ

Lingaraj Badiger
Updated On : 13 Jan 2014, 12:47 pm

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 12
ಚಿತ್ರರಂಗಕ್ಕೆ ಡಾ೤ ರಾಜ್‌ಕುಮಾರ್, ಬಾಲಕೃಷ್ಣ, ನರಸಿಂಹರಾಜು, ಕಲ್ಪನಾ, ಉಮೇಶ್, ಸುಧೀರ್, ಜಯಶ್ರೀ ಮುಂತಾದವರನ್ನು ಕೊಡುಗೆ ನೀಡಿದ ರಂಗಭೂಮಿ ಜೀವನ ಹಾಗೂ ಭಾಷೆಯನ್ನು ಪ್ರೇಕ್ಷಕನ ಹೃದಯಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರೂ ದೊಡ್ಡ ವಸ್ತುವನ್ನು ಸಣ್ಣದಾಗಿ ತೋರಿಸುವ ಟೀವಿಯ ಪ್ರಭಾವದಿಂದ ವೃತ್ತಿ ರಂಗಭೂಮಿ ನೇಪಥ್ಯಕ್ಕೆ ಸರಿಯುತ್ತಿದೆ.
ಇಂಥ ಕಳವಳ ಇಟ್ಟುಕೊಂಡೇ ಮಾತನಾಡಿದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷೆ, ಚಲನಚಿತ್ರ ನಟ ದಿ. ಸುಧೀರ್ ಅವರ ಪತ್ನಿ ಮಾಲತಿ ಅವರ ಚಿಂತನೆಗಳು ವೃತ್ತಿ ರಂಗಭೂಮಿಯನ್ನು ಮತ್ತೆ ಮುಖ್ಯವಾಹಿನಿಗೆ ತರಲು ನೆರವಾಗಬಲ್ಲವು. ಬ್ಯಾಡಗಿಗೆ ಭಾನುವಾರ ಆಗಮಿಸಿದ್ದ ವೇಳೆ ಅವರಾಡಿದ ಮಾತುಗಳಲ್ಲಿ ಕೆಲವು ಇಲ್ಲಿವೆ:
ವೃತ್ತಿ ರಂಗಭೂಮಿ ಸಮಾಜಕ್ಕೆ ಮಾರ್ಗದರ್ಶಿ ಸಂದೇಶ ನೀಡುತ್ತಾ ಬಂದಿದೆ. ನೈಜ ಚಿತ್ರಣಕ್ಕೆ ಒತ್ತು ನೀಡುವ ನಾಟಕಗಳು ಕಲಾವಿದನ ಮೂಲಕ ಮನ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿವೆ. ಸತ್ಯ ಹರಿಶ್ಚಂದ್ರ ನಾಟಕ ಗಾಂಧೀಜಿಗೆ ಪ್ರೇರಣೆಯಾಯಿತು ಎಂದರೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ ಎಂದರು.
ನಾಟಕಗಳ ದರ್ಬಾರ್
ಐದಾರು ದಶಕಗಳ ಹಿಂದಿನ ಮಾತು. ಸುಬ್ಬಯ್ಯನಾಯ್ಡು ಕಂಪನಿ, ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ ಅವರ ಕೆಬಿಆರ್ ಡ್ರಾಮಾ, ಏಣಗಿ ಬಾಳಪ್ಪನವರ ಕಲಾವೈಭವ, ಪಂ. ಪಂಚಾಕ್ಷರಿ ಗವಾಯಿಗಳ ಕುಮಾರೇಶ್ವರ ಕೃಪಾಪೋಷಿತ ನಾಟ್ಯಸಂಘ, ಮಾ. ಹಿರಣ್ಣಯ್ಯ, ಬಿ.ಆರ್. ಅರಷಿಣಗೋಡಿಯವರ ಹುಚ್ಚೇಶ್ವರ ನಾಟ್ಯಸಂಘ ಸೇರಿ 60ಕ್ಕೂ ಹೆಚ್ಚು ನಾಟಕ ಕಂಪನಿಗಳು ಪ್ರಚಲಿತವಿದ್ದವು. ಈಗ ಉಳಿದವು ಕೇವಲ 20 ಎಂದು ಬೇಸರಿಸಿದರು.
ಚಿತ್ರರಂಗಕ್ಕೆ ಆಧಾರ
ಅಂದು ವೃತ್ತಿ ರಂಗಭೂಮಿ ಸಿನಿಮಾ ರಂಗಕ್ಕೆ ಮೂಲ ಬಂಡವಾಳ. ನಾಟಕ ಕಂಪನಿಗಳಿಲ್ಲದೆ ಚಲನಚಿತ್ರಗಳು ಸಾಗುವ ಸ್ಥಿತಿಯಲ್ಲಿ ಇರಲಿಲ್ಲ. ಅಷ್ಟೊಂದು ಪ್ರಭಾವಿ ಮಾಧ್ಯಮವಾಗಿದ್ದ ರಂಗಭೂಮಿ ಟೀವಿಯಿಂದಾಗಿ ಅವನತಿಯ ಹಾದಿ ಹಿಡಿದಿದೆ. ನೂತನ ತಾಂತ್ರಿಕತೆ ಪ್ರೇಕ್ಷಕರನ್ನು ನಾಟಕದಿಂದ ದೂರ ಸರಿಯುವಂತೆ ಮಾಡಿದೆ. ಧಾರಾವಾಹಿಗಳಿಗೆ ಮುಗಿಬಿದ್ದ ಪ್ರೇಕ್ಷಕರನ್ನು ಮತ್ತೆ ನಾಟಕಗಳತ್ತ ಸೆಳೆಯಲು ಹರಸಾಹಸ ಮಾಡಬೇಕಾಗಿದೆ ಎಂದರು.
ಕಲಾತ್ಮಕ ನಾಟಕ ಮಾಯ
ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಕಲಾತ್ಮಕ ನಾಟಕಗಳನ್ನು ಜನರಿಗೆ ನೀಡುತ್ತಿದ್ದ ವೃತ್ತಿ ರಂಗಭೂಮಿ, ಪೈಪೋಟಿ ಹೆಚ್ಚಾದ ಕಾರಣ ಕಥಾವಸ್ತುವಿಗೆ ಅವಶ್ಯವಿಲ್ಲದಿದ್ದರೂ ದ್ವಂದಾರ್ಥ ಸಂಭಾಷಣೆ ಮತ್ತು ಅಶ್ಲೀಲ ನೃತ್ಯ ಪ್ರದರ್ಶನಗಳನ್ನು ನಾಟಕಗಳಲ್ಲಿ ಅಳವಡಿಸಬೇಕಾಯಿತು. ಕುಟುಂಬ ಸದಸ್ಯರೊಂದಿಗೆ ನಾಟಕ ನೋಡಲು ಬರುತ್ತಿದ್ದ ಪ್ರೇಕ್ಷಕರು ಮಾಯವಾಗಿ ಕಂಪನಿಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದವು. ಆರ್ಥಿಕ ಭದ್ರತೆಯಿಲ್ಲದೆ ಕಲಾವಿದರು, ನಾಟಕ ರಚನೆಕಾರರು ರಂಗಭೂಮಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ವಿಷಾದಿಸಿದರು, ಮಾಲತಿ.
ಸಹಾಯಧನದ ಕೊರತೆ
ಹವ್ಯಾಸಿ ರಂಗಭೂಮಿಗೆ ಎಗ್ಗಿಲ್ಲದೆ ವೆಚ್ಚ ಮಾಡುತ್ತಿರುವ ಸರ್ಕಾರ ವೃತ್ತಿ ರಂಗಭೂಮಿಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. 25 ವರ್ಷದ ಕಂಪನಿಗೆ ರು. 2.50 ಲಕ್ಷ, 15 ವರ್ಷದ ಕಂಪನಿಗೆ ರು. 2 ಹಾಗೂ 10 ವರ್ಷದ ಕಂಪನಿಗೆ ರು. 1.5 ಲಕ್ಷ ಧನಸಹಾಯ ನೀಡುತ್ತಿತ್ತು. ತಾವು ಅಧ್ಯಕ್ಷರಾದ ಬಳಿಕ ಈ ಅನುದಾನವನ್ನು ಕ್ರಮವಾಗಿ ರು. 6, 4 ಹಾಗೂ 2 ಲಕ್ಷಕ್ಕೆ ಏರಿಸಿದ್ದೇನೆ. 55 ವರ್ಷ ಮೀರಿದ ಕಲಾವಿದರಿಗೆ ಸರ್ಕಾರ ಕೇವಲ ರು. 1 ಸಾವಿರ ಮಾಸಾಶನ ನೀಡುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವೇ? ಮಾಸಾಶನವನ್ನು ರು. 5 ಸಾವಿರಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.
ಸುಧೀರ್ ನೆನಪಿಗೆ ನಾಟಕ
ಸುಮಾರು 286 ಚಿತ್ರಗಳಲ್ಲಿ ನಟಿಸಿದ ಸುಧೀರ್ ಒಬ್ಬ ಅದ್ಭುತ ಕಲಾವಿದ. ಅವರ ನೆನಪನ್ನು ಉಳಿಸಲು ನಾಟಕ ಕಂಪನಿ ನಡೆಸುತ್ತಿದ್ದೇನೆ. ಅವರು ನಟಿಸಿದ 'ವೀರ ಸಿಂಧೂರ ಲಕ್ಷ್ಮಣ' ಮತ್ತು 'ಗೌಡ್ರ ಗದ್ಲ' ನಾಟಕಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ನಮ್ಮಿಬ್ಬರನ್ನು ಒಂದುಗೂಡಿಸಿದ ನಾಟಕ ಕಂಪನಿ ನಾನು ಜೀವಂತ ಇರುವವರೆಗೂ ನಿಲ್ಲಬಾರದು ಎಂಬ ಛಲವಿದೆ ಎನ್ನುವಾಗ ಅವರ ಕಣ್ಣುಗಳು ಮಂಜಾದವು. ಪುತ್ರರಾದ ನಂದಕಿಶೋರ್ ಮತ್ತು ತರುಣ್ ಸಿನಿಮಾದಲ್ಲಿ ನಿರ್ದೇಶಕರಾಗಿ ಒಳ್ಳೆಯ ಹೆಸರು ಪಡೆದಿದ್ದಾರೆ. ಮಿನುಗುತಾರೆ ಮಿತ್ರ ಮಂಡಳಿಯಿಂದಲೇ ರಂಗಭೂಮಿಗೆ ಪರಿಚಿತಳಾದ ನನಗೆ ನಟಿ ಕಲ್ಪನಾ ಪ್ರೇರಣೆ ಎಂದರು.
ಕಂಪನಿ ಮತ್ತು ಕಲಾವಿದ ನಾಣ್ಯದ ಎರಡು ಮುಖಗಳಿದ್ದಂತೆ. ಆರ್ಥಿಕ ಸಂಕಷ್ಟದಿಂದ ಮಾಲೀಕರ ಜತೆಗೆ ನಾಟಕ ರಚನೆಕಾರರು ಮತ್ತು ಕಲಾವಿದರು ಬೀದಿಗೆ ಬಂದಿದ್ದಾರೆ. ವೃತ್ತಿ ರಂಗಭೂಮಿ ಬದುಕುಳಿಯಬೇಕಾದಲ್ಲಿ ಅವುಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ. ತಾಲೂಕಿಗೊಂದು ನಾಟಕಶಾಲೆ ಮತ್ತು ರಂಗಮಂದಿರ ನಿರ್ಮಾಣವಾಗಬೇಕು. ಶಾಲೆಗಳಲ್ಲಿ ನಾಟಕದ ಅಭ್ಯಾಸ ನಡೆಯಬೇಕು. ನಾಟಕ ಕಂಪನಿಗಳು ರಂಗಮಂದಿರದಲ್ಲಿ ಯಾವುದೇ ವೆಚ್ಚವಿಲ್ಲದೆ ನಾಟಕ ನಡೆಸಿದಲ್ಲಿ ಮಾತ್ರ ವೃತ್ತಿ ರಂಗಭೂಮಿ ಬದುಕುಳಿಯಲು ಸಾಧ್ಯವೆಂದರು.
- ಶಿವಾನಂದ ಮಲ್ಲನಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement