ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹುಲಗನಹಳ್ಳಿ ದತ್ತು ಸ್ವೀಕಾರ

Lingaraj Badiger
Updated On : 13 Jan 2014, 12:44 pm

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 12
ಕಳ್ಳಭಟ್ಟಿ ಸಾರಾಯಿ ತಯಾರಿಗೆ ಕುಖ್ಯಾತವಾಗಿದ್ದ ಹುಲಗಿನಹಳ್ಳಿ ಗ್ರಾಮವನ್ನು ಸ್ವಾಮೀ ವಿವೇಕಾನಂದರ 151ನೇ ಜನ್ಮ ದಿನದಂದು ಹಾನಗಲ್ಲ ಠಾಣೆ ಪೊಲೀಸರು ದತ್ತು ಸ್ವೀಕರಿಸಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಶೈಕ್ಷಣಿಕ ಹಾಗೂ ಸ್ವಾವಲಂಬಿ ಗ್ರಾಮವಾಗಿ ಪರಿವರ್ತಿಸಲು ಸಂಕಲ್ಪ ತೊಡಲಾಗಿದೆ.
ಕೇವಲ 70 ಮನೆಗಳಿರುವ ಪುಟ್ಟ ಗ್ರಾಮ ಹುಲಗಿನಹಳ್ಳಿಯಲ್ಲಿ ವಿದ್ಯಾವಂತರ ಸಂಖ್ಯೆಯೂ ವಿರಳ. ಆದರೆ, ಇಲ್ಲಿಂದ ಪರವೂರಿಗೆ ಹೋದವರೇ ಹೆಚ್ಚು. ನಗರಗಳಲ್ಲಿ ನೆಲೆಸಿದವರು ಉತ್ತಮ ಸ್ಥಿತಿಗೇರಿದ್ದಾರೆ. ಆದರೆ, ಹಳ್ಳಿಯಲ್ಲೇ ಉಳಿದವರು ಕಳ್ಳಭಟ್ಟಿ ತಯಾರಿಸುವುದನ್ನು ಗಮನಿಸಿದ ಪಿಎಸ್‌ಐ ಮಹದೇವ ಯಲಿಗಾರ ಕಳ್ಳಭಟ್ಟಿ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಹುಲಗಿನಹಳ್ಳಿಯನ್ನು ಸಾರಾಯಿಮುಕ್ತ ಮಾಡುವ ಸಂಕಲ್ಪದಿಂದ ಪೊಲೀಸರು ಗ್ರಾಮವನ್ನು ದತ್ತು ಸ್ವೀಕರಿಸಿದ್ದಾರೆ. ಸುಮಂಗಲೆಯರು ಭಾನುವಾರ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರಾಯಿ ಮುಕ್ತ ಗ್ರಾಮ ಮಾಡುವ ತಮ್ಮ ನಿಲುವನ್ನು ಪ್ರಕಟಿಸಿದರು.
ಗ್ರಾಮದ ಹಿರಿಯ ಜೀವ ಗೌರಮ್ಮ ಮಾತನಾಡಿ, ಹಳ್ಳಿಯ ಮಹಿಳೆಯರಿಗೆ ದುಡಿಯಲು ಬೇರೆ ಕೆಲಸದ ವ್ಯವಸ್ಥೆ ಮಾಡಿದರೆ ಕಳ್ಳಭಟ್ಟಿ ತಯಾರಿ ತ್ಯಜಿಸಲು ಸುಲಭ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಬೇಕು. ಕಲಿತವರಿಗೆ ಉದ್ಯೋಗ ಸಿಗಬೇಕು. ಆದರೆ, ಆಶ್ವಾಸನೆ ಕೊಟ್ಟ ರಾಜಕಾರಣಿಗಳು ಹೊರಳಿ ಬಂದಿಲ್ಲ. ವಯಸ್ಸಾದವರಿಗೆ ವೃದ್ಧಾಪ್ಯ ವೇತನ ಕೊಡಿ ಎಂದು ಹೇಳಿದರು.
ಕಳ್ಳಭಟ್ಟಿ ದಂಧೆ ಬಂದ್ ಮಾಡಿದರೆ ಸರ್ಕಾರದ ಎಲ್ಲ ಸೌಲಭ್ಯ ಕೊಡಿಸಲು ಸಿದ್ಧ. ಇಲ್ಲಿನ ಚಟುವಟಿಕೆ ಗಮನಿಸಲು ಪೊಲೀಸರ ತಂಡ ಇಡಲಾಗಿದೆ ಎಂದು ಪಿಎಸ್‌ಐ ಯಲಿಗಾರ ಹೇಳಿದರು.
ಹಾನಗಲ್ಲ ಪುರಸಭೆ ಸದಸ್ಯ ಕಲ್ಯಾಣಕುಮಾರ ಶೆಟ್ಟರ, ರವಿ ಪುರೋಹಿತ, ಪ್ರಶಾಂತ ಮುಚ್ಚಂಡಿ, ರಾಜು ಹೈಬತ್ತಿ, ಕೃಷ್ಣ ಪೂಜಾರ, ಮಹೇಶ ಕಾಗಿನೆಲ್ಲಿ, ಈಶ್ವರ ನಿಂಗೋಜಿ, ಚೇತನ್ ಬೆಂಡಿಗೇರಿ, ಪರಶುರಾಮ ಖಂಡೂನರ, ಪ್ರವೀಣ ಸುಲಾಖೆ, ಸಂಜಯ ಬೇದ್ರೆ, ವಿನಾಯಕ ಬಂಕನಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement