ಇಂದು ಗಂಗಿಭಾವಿ ಜಾತ್ರೆ, ಸಂಕ್ರಾಂತಿ ಉತ್ಸವ
ಶಿಗ್ಗಾಂವಿ: ತಾಲೂಕಿನ ಸುಕ್ಷೇತ್ರ ಗಂಗಿಭಾವಿಯಲ್ಲಿ ಮಕರ ಸಂಕ್ರಮಣ ನಿಮಿತ್ತ ಜ. 14 ಹಾಗೂ 15ರಂದು ಜಾತ್ರೆ ನಡೆಯಲಿದೆ. ರಾಮಲಿಂಗೇಶ್ವರ ಹಾಗೂ ಗಂಗಾಮಾತೆಯ ದರ್ಶನವನ್ನು ಏಕಕಾಲಕ್ಕೆ ಕರುಣಿಸುವ ಗಂಗಿಭಾವಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ. ಇಲ್ಲಿನ ವಿಶಾಲವಾದ ಕೆರೆ ತೀರ್ಥಸಾಗರದ ನೋಟವೂ ರಮಣೀಯ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿದ ಲಿಂ. ಜಗದ್ಗುರು ಶ್ರೀ ವೀರಗಂಗಾಧರ ಮಹಾಸ್ವಾಮಿಗಳು ಹಾಗೂ ಶ್ರೀ ರೇಣುಕಾಚಾರ್ಯರ ದೇವಸ್ಥಾನವನ್ನೂ ಹೊಂದಿದೆ. ಜ. 14ರಂದು ಬೆಳಗ್ಗೆ ಶ್ರೀ ಉಮಾ-ರಾಮಲಿಂಗೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾರುದ್ರಾಭಿಷೇಕ ಜರಗುವುದು. ಮಧ್ಯಾಹ್ನ 1 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ. ಸಂಜೆ 4ಕ್ಕೆ ಶ್ರೀ ರಾಮಲಿಂಗೇಶ್ವರ ಉತ್ಸವ ಮೂರ್ತಿ ಮೆರವಣಿಗೆ ಹೊಸೂರ ಗ್ರಾಮದ ಬಸವಣ್ಣ ದೇವರ ಪಾದಗಟ್ಟಿಯಿಂದ ಗಂಗಿಭಾವಿ ತನಕ ಜರುಗಲಿದೆ. ಜ. 15ರಂದು ಪಂಚಾಮೃತ ಆಭಿಷೇಕ, ಮಹಾರುದ್ರಾಭಿಷೇಕವಿದೆ. ಮಧ್ಯಾಹ್ನ ರಾಮಲಿಂಗೇಶ್ವರ ದೇವರ ಕಡುಬಿನ ಕಾಳಗ ಜರುಗುವುದು. ಜ. 15 ಹಾಗೂ 16ರಂದು ಬಯಲು ಕುಸ್ತಿ ಆಯೋಜಿಸಲಾಗಿದೆ ಎಂದು ರಾಮಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಳಿನ ಬಣವೆಗೆ ಬೆಂಕಿ: ರು. 5 ಲಕ್ಷಕ್ಕೂ ಹೆಚ್ಚು ಹಾನಿ
ಶಿಗ್ಗಾಂವಿ: ಕಾಳಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ರು. 5 ಲಕ್ಷಕ್ಕೂ ಹೆಚ್ಚು ಹಾನಿಯಾದ ಘಟನೆ ತಾಲೂಕಿನ ಚಿಕ್ಕಮಲ್ಲೂರ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ 3.45ರ ಸುಮಾರಿಗೆ ಜರುಗಿದೆ. ಘಟನೆಯಲ್ಲಿ ಐವರು ರೈತರ ಕಣಗಳು ಸುಟ್ಟು ಕರಕಲಾಗಿವೆ. ಚಿಕ್ಕಮಲ್ಲೂರ ಗ್ರಾಮದ ಜಗದೀಶ ಲಾವಪ್ಪ ದೊಡ್ಡಮನಿ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಶೇಂಗಾ ಹಾಗೂ ಹೊಟ್ಟು, ಮೂರು ಟ್ರ್ಯಾಕ್ಟರ್ನಷ್ಟು ಸೋಯಾಬೀನ್ ಸುಟ್ಟಿವೆ. ನಿಂಗಪ್ಪ ಲಾವಪ್ಪ ದೊಡ್ಡಮನಿ ಮೂರು ಎಕರೆಯಲ್ಲಿ ಬೆಳೆದಿದ್ದ ಸಾವಿ ಹುಲ್ಲಿನ ಬಣವೆ, ಉಮೇಶ ಗು. ದೊಡ್ಡಮನಿ ಅವರ ಸಾವಿ ಹಾಗೂ ಗೋವಿನಜೋಳ ಹಾಳಾಗಿವೆ. ಗುರುನಾಥ ಶಿದ್ದಪ್ಪ ದೊಡ್ಡಮನಿ ಅವರ ತೊಗರಿ ಬಣವೆ, ಶಿವಪುತ್ರಪ್ಪ ಗುರುಶಾಂತಪ್ಪ ದೊಡ್ಡಮನಿ ಅವರಿಗೆ ಸೇರಿದ 3 ಟ್ರ್ಯಾಕ್ಟರ್ ತೊಗರಿಯ ಬಣವೆ ಭಸ್ಮವಾಗಿವೆ. ಅಗ್ನಿಶಾಮಕ ದಳ ಎಲ್. ಕೃಷ್ಣಯ್ಯ ನೇತೃತ್ವದಲ್ಲಿ ತ್ವರಿತ ಕಾರ್ಯಾಚರಣೆ ಕೈಗೊಂಡು, ಬೇರೆ ಬಣವೆಗಳಿಗೆ ಬೆಂಕಿ ಹರಡುವುದನ್ನು ತಡೆಗಟ್ಟಿತು. ಸಿಬ್ಬಂದಿ ವಿ.ಸಿ. ರಾಠೋಡ, ಎಂ.ಎಂ. ಅಂಗಡಿ, ಜಿ.ಎಂ. ಗೌಡರ, ಎ.ಸಿ. ಪೂಜಾರ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.