ಕನ್ನಡಕ್ಕಾಗಿ ಸೈಕಲ್ ತುಳಿವ ಯುವಕ
ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ. ಜ. 13
ಕನ್ನಡ ನಾಡಿನ ಸಾಹಿತ್ಯ, ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಹೊಂದಿ ಕನ್ನಡಕ್ಕಾಗಿ ಶ್ರಮಿಸುತ್ತಿರುವವರು ಹಲವರಿದ್ದಾರೆ. ಅವರಲ್ಲಿ ಹಾವೇರಿಯ ಯುವಕ ಗೋಪಾಲ ಬಿಂಜಡಗಿಯೂ ಒಬ್ಬರು. ಈತನ ಕಾರ್ಯವೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಹಾವೇರಿ ಸಮೀಪದ ನಾಗೇಂದ್ರಮಟ್ಟಿಯ ಯುವಕ ಗೋಪಾಲ ಪುಟ್ಟಪ್ಪ ಬಿಂಜಡಗಿ ಎನ್ನುವ ಕನ್ನಡಾಭಿಮಾನಿಯು ಕನ್ನಡ ನಾಡಿನ ಪ್ರತಿಯೊಂದು ಜಿಲ್ಲೆಗೆ ತೆರಳಿ, ಅಲ್ಲಿನ ಪ್ರಖ್ಯಾತ ಸಾಹಿತಿಗಳನ್ನು ಭೇಟಿ ಮಾಡಿ, ಕನ್ನಡ ನಾಡಿನ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಉತ್ಸಾಹದಿಂದ ಸೈಕಲ್ ಮೇಲೆಯೇ ಪ್ರವಾಸ ಆರಂಭಿಸಿದ್ದಾನೆ. ಈತನು ಸೋಮವಾರ ಲಕ್ಷ್ಮೇಶ್ವರದ ಮೂಲಕ ಗದಗ ಜಿಲ್ಲೆ ಪ್ರವೇಶಿಸಿದ್ದು ಯುವಕನ ಕಾರ್ಯಕ್ಕೆ ಜನತೆ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.
ಕನ್ನಡ ಧ್ವಜವೇ ಉಡುಪು: ಈತನ ಇನ್ನೊಂದು ವಿಶೇಷವೆಂದರೆ ಕನ್ನಡದ ಧ್ವಜಕ್ಕೆ ಬಳಸುವ ಬಟ್ಟೆಯನ್ನೇ ತನ್ನ ಉಡುಪನ್ನಾಗಿ ಮಾಡಿಕೊಂಡು, ತನ್ನ ಸೈಕಲ್ ಸುತ್ತ ಕನ್ನಡ ಧ್ವಜಗಳನ್ನು ಕಟ್ಟಿಕೊಂಡು ಕನ್ನಡದ ಕಂಪನ್ನು ಬೀರುತ್ತ ರಾಜ್ಯ ಸುತ್ತುತ್ತಿದ್ದಾನೆ. ಅಲ್ಲದೆ ಕನ್ನಡಿಗರಲ್ಲಿ ಕನ್ನಡತನವನ್ನು ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿದ್ದಾನೆ. ಹಾವೇರಿಯಿಂದ ಈಚೆಗೆ ಪ್ರಾರಂಭಿಸಿರುವ ತನ್ನ ಯಾತ್ರೆಗೆ ಯಾವುದೇ ಪ್ರಚಾರ ಹಾಗೂ ಆರ್ಥಿಕ ಸಹಾಯ ಬಯಸದೇ ಕೇವಲ ಕನ್ನಡಾಭಿಮಾನವನ್ನು ಮಾತ್ರ ತನ್ನ ಹೃದಯಲ್ಲಿ ಮೂಡಿಸಿಕೊಂಡು ರಾಜ್ಯದ ತುದಿ ಬೀದರ, ಬಿಜಾಪುರ, ಬೆಳಗಾವಿ, ಕಾರವಾರ, ರಾಯಚೂರ, ಬಳ್ಳಾರಿ, ಕೊಡುಗು, ಮೈಸೂರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಕನಿಷ್ಠ 3 ತಿಂಗಳಲ್ಲಿ ಸಂಚಾರ ಮಾಡಿ ಕೊನೆಯದಾಗಿ ಬೆಂಗಳೂರಿನ ಕೆಂಪೇಗೌಡ ವೃತ್ತ ತಲುಪಿ ತನ್ನ ಯಾತ್ರೆ ಅಂತಿಮ ಗೊಳಿಸುವುದಾಗಿ ಹೇಳುತ್ತಾನೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಗೋಪಾಲ, ಪಿಯುಸಿವರಗೆ ಅಭ್ಯಾಸ ಮಾಡಿ, ಚಿತ್ರರಂಗ ಸೇರುವ ಅಭಿಲಾಷೆ ಹೊಂದಿದ್ದು, ಸಹಾಯಕ ನಿರ್ದೇಶನದ ತರಬೇತಿ ಪಡೆದಿದ್ದೇನೆ. ನಾನು ಯಾವುದೇ ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ. ಕನ್ನಡಕ್ಕಾಗಿ ಹೋರಾಡಿದ, ಕನ್ನಡ ಭಾಷೆ, ನೆಲ, ಜಲಕ್ಕಾಗಿ ದುಡಿದ ಮಹನೀಯರನ್ನು ಜನಸಾಮಾನ್ಯರಿಗೆ ಪರಿಚಯಿಸುವ ಕಾರ್ಯ ಮಾಡುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತ ತನ್ನಲ್ಲಿರುವ ಸಾಹಿತಿಗಳ ವಿವರ, ಅವರ ಪುಸ್ತಕಗಳನ್ನು ತೋರಿಸುತ್ತಾನೆ.
ತನ್ನ ಈ ಯಾತ್ರೆಗೆ ಜನ ಸಾಮಾನ್ಯರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನನ್ನ ಯಾತ್ರೆಗೆ ಯಾರಿಂದಲೂ ಹಣಕಾಸಿನ ನೆರವು ಬಯಸಿಲ್ಲ. ಅದು ನನಗೆ ಬೇಕಿಲ್ಲ. ಕೇವಲ ಕನ್ನಡ ಭಾಷೆ ಹಾಗೂ ನಾಡಿನ ಅಭಿಮಾನ ಮೂಡಿಸುವ ಕಾರ್ಯಕ್ಕೆ ಸಹಕಾರ ನೀಡಿದರೆ ಸಾಕು ಎಂದು ವಿನಮ್ರನಾಗಿ ನುಡಿಯುತ್ತಾನೆ. ನಿಮ್ಮ ಜಿಲ್ಲೆಗೆ ಗೋಪಾಲ ಯಾವಾಗ ಬರುತ್ತಾನೆ ಎಂಬ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ, ಮೊ. 8050342044. ನಿಮ್ಮ ಜಿಲ್ಲೆಗೆ ಹಾಗೂ ನಿಮ್ಮೂರಿಗೆ ಬರಮಾಡಿಕೊಂಡು ಒಂದಿಷ್ಟು ಕನ್ನಡದ ಪ್ರೀತಿಯನ್ನು ನೀಡಿ.