ದುಶ್ಚಟಗಳ ದಾಸರಾಗಬೇಡಿ: ಉದಾಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 13
ದುಶ್ಚಟಗಳ ದಾಸರಾಗದೆ ಸಾಮಾಜಿಕ ಗೌರವವನ್ನು ಉಳಿಸಿಕೊಂಡು ಬದುಕುವ ಜತೆಗೆ, ಆರ್ಥಿಕ ಸಬಲತೆಯೂ ಸಾಧಿತವಾಗಲಿ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಆಶಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ಮದ್ಯಪಾನ ಸಂಯಮ ಮಂಡಳಿ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಆರಂಭವಾದ 658ನೇ ಮದ್ಯವರ್ಜನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವ್ಯಸನಮುಕ್ತಿಗಾಗಿ ಮಾಡುತ್ತಿರುವ ಪ್ರಯತ್ನ ವ್ಯರ್ಥವಾಗಬಾರದು ಎಂದರು.
ಹಾನಗಲ್ಲ ಪಿಎಸ್ಐ ಮಹಾದೇವ ಯಲಿಗಾರ ಮಾತನಾಡಿ, ಮನೆತನದ ಒಳಿತಿಗಾಗಿ ಬದುಕಿ. ದುಡಿತವೆಲ್ಲ ಕುಡಿತಕ್ಕೆ ಸಲ್ಲುವುದು ಬೇಡ. ಕುಡಿತದ ದಾಸರಾಗಿ ಕೌಟುಂಬಿಕ ಸಾಮರಸ್ಯ ಹಾಳುಗೆಡಹುವುದು ಬೇಡ ಎಂದರು.
ಶಿಬಿರಾಧಿಕಾರಿ ನಾಗೇಶ್ ಪ್ರಾಸ್ತಾವಿಕ ಮಾತನಾಡಿದರು. ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಮಹಾ ಸ್ವಾಮಿಗಳು ಶಿಬಿರ ಉದ್ಘಾಟಿಸಿದರು. ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸದಸ್ಯರಾದ ಪದ್ಮನಾಭ ಕುಂದಾಪುರ, ಕಸ್ತೂರವ್ವ ವಡ್ಡರ, ಯೋಜನೆ ನಿರ್ದೇಶಕ ವಸಂತ ಸಾಲಿಯಾನ, ಪುರಸಭಾಧ್ಯಕ್ಷೆ ಲಕ್ಷ್ಮೀ ಹರಿಜನ, ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಜೆಇಕೋ ಅಧ್ಯಕ್ಷ ಎ.ಎಸ್. ಬಳ್ಳಾರಿ, ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷ ಅಜ್ಜನಗೌಡ ಪಾಟೀಲ, ಗಿರಿ ಕಲಾಲ, ಯೋಜನಾಧಿಕಾರಿ ಕೆ. ಸದಾನಂದ, ಮೇಲ್ವಿಚಾರಕ ಧನಂಜಯ, ಕೆ.ಎಲ್. ದೇಶಪಾಂಡೆ, ಅಶೋಕ ಕಲಾಲ, ರಾಜು ನಂದಿ ಮುಂತಾದ ಗಣ್ಯರು ಇದ್ದರು.