ಪಹಣಿಗಾಗಿ ಪರದಾಟ
ವೀರೇಶ ಮಡ್ಲೂರ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 13
ಬಿತ್ತನೆ ಬೀಜ, ಗೊಬ್ಬರ ಕೊಳ್ಳಲು, ಬೆಳೆ ವಿಮೆ, ಬ್ಯಾಂಕ್ನಲ್ಲಿ ಸಾಲ ಪಡೆಯಲು - ಹೀಗೆ ಪ್ರತಿಯೊಂದು ಪ್ರಕ್ರಿಯೆಗೂ ಪಹಣಿ ಪತ್ರಿಕೆ ಮುಖ್ಯ. ಆದರೆ ರೈತರು ದಿನವಿಡೀ ತಮ್ಮೆಲ್ಲ ಕೆಲಸ ಬಿಟ್ಟು ಸರದಿಯಲ್ಲಿ ನಿಂತರೂ ಪಹಣಿ ಮಾತ್ರ ಸಿಗದೆ ಕಚೇರಿಗೆ ಅಲೆದಾಡುವಂತಾಗಿದೆ.
ಕೆಲವು ತಿಂಗಳು ಹಿಂದೆ ಸರ್ಕಾರ ನೆಮ್ಮದಿ ಕೆಂದ್ರವನ್ನು ಸ್ಥಗಿತಗೊಳಿಸಿ ತಹಸೀಲ್ದಾರ್ ಕಚೇರಿಯ ಆವರಣದಲ್ಲಿಯೇ ಪಹಣಿ ಪತ್ರಿಕೆ ನೀಡುವ ವ್ಯವಸ್ಥೆ ಮುಂದುವರಿಸಿರುವುದೇ ಇದಕ್ಕೆ ಕಾರಣ.
ಪ್ರತಿಯೊಬ್ಬ ರೈತರಿಗೂ ಬೀಜ, ಗೊಬ್ಬರದ ಅಗತ್ಯವಿರುತ್ತದೆ. ಆದರೆ ಅದನ್ನು ಪಡೆಯಲು ಪಹಣಿ ಪತ್ರಿಕೆ ತನ್ನಿ ಎಂದು ಗೊಬ್ಬರದ ಅಂಗಡಿ ಮಾಲೀಕರು ಹೇಳುತ್ತಾರೆ. ರೈತರು ಸರ್ಕಾರದಿಂದ ಸಿಗುವ ರಿಯಾಯತಿ ದರದ ಬೀಜ, ಗೊಬ್ಬರ ಪಡೆಯಲೂ ಆರ್ಟಿಸಿ ಅನಿವಾರ್ಯವಾಗಿದೆ.
ಹೀಗಾಗಿ ತಾಲೂಕು ಕೇಂದ್ರದಲ್ಲಿ ಇರುವ ಒಂದೇ ಕೇಂದ್ರದಲ್ಲಿ ನಿತ್ಯ ನೂರಾರು ಜನರು ಪಹಣಿ ಪತ್ರಿಕೆ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ.
ಹಲವು ಕೇಂದ್ರಗಳಿಗೆ ಬೀಗ
ಪಹಣಿ ಪತ್ರಿಕೆ ವಿತರಿಸಲು ಹೋಬಳಿ ಮಟ್ಟದಲ್ಲಿ ಹಲವು ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಅವು ಒಂದು ದಿನ ಸರಿಯಿದ್ದರೆ ಮೂರು ದಿನ ಬೀಗ ಹಾಕಿರುತ್ತವೆ. ಹೀಗಾಗಿ ರೈತರು ಪಹಣಿ ಪತ್ರಿಕೆಗಾಗಿ ತಾಲೂಕು ಕೇಂದ್ರದಲ್ಲಿರುವ ಕೇಂದ್ರವನ್ನೇ ಅವಲಂಬಿಸಬೇಕಿದೆ.
ಸರದಿಗಾಗಿ ಕಿತ್ತಾಟ: ತಹಸೀಲ್ದಾರ್ ಕಚೇರಿಯಲ್ಲಿ ಎರಡು ಕೇಂದ್ರಗಳಿದ್ದರೂ ಕೆಲಸ ಮಾಡುತ್ತಿರುವುದು ಒಂದೇ. ಹೀಗಾಗಿ, ತಹಸೀಲ್ದಾರ್ ಕಚೇರಿಯಲ್ಲಿ ಪ್ರತಿದಿನ ಬೆಳಗ್ಗೆಯಿಂದ ಸಂಜೆ ವರೆಗೆ ದೊಡ್ಡ ಸರದಿ ಇದ್ದೇ ಇರುತ್ತದೆ. ಕಚೇರಿ ತೆರೆಯುವ ಮೊದಲೇ ಸರದಿ ಸಾಲಿನಲ್ಲಿ ಅನ್ನ ನೀರು ಇಲ್ಲದೆ ರೈತರು ನಿಂತಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಹೊಟ್ಟೆ ಹಸಿಯಿತೆಂದು ಸರದಿ ಬಿಟ್ಟು ಉಪಾಹಾರಕ್ಕೋ, ಊಟಕ್ಕೋ ತೆರಳಿದರೆ, ಮತ್ತೆ ಬಂದು ಸೇರಿಕೊಳ್ಳಲು ಉಳಿದವರು ಅವಕಾಶ ನೀಡುವುದಿಲ್ಲ. ಹೀಗಾಗಿ, ರೈತರ ನಡುವೆಯೇ ಕಿತ್ತಾಟಗಳು ನಡೆಯುತ್ತವೆ. ಎಷ್ಟೋ ಸಾರಿ ಪೊಲೀಸರು ಮಧ್ಯ ಪ್ರವೇಶಿಸಿ ಬಗೆಹರಿಸಿದ ನಿದರ್ಶನಗಳಿವೆ.
ಮತ್ತೊಂದು ಕೇಂದ್ರ ಬೇಕು
ಪಹಣಿಗಾಗಿ ದಿನವಿಡಿ ಸಾಲುಗಟ್ಟಿ ನಿಂತರೂ ಕೆಲವು ರೈತರು ಪಹಣಿ ಸಿಗದೆ ವಾಪಸ್ ಹೋಗುತ್ತಾರೆ. ಕಚೇರಿ ಸಿಬ್ಬಂದಿ ತಮ್ಮ ಪರಿಚಯದವರು ಬಂದಾಗ ಅವರ ಪರವಾಗಿ ತಾವೇ ಕೇಂದ್ರದ ಒಳಗೆ ಹೋಗಿ ನೇರವಾಗಿ ಪಹಣಿ ಪಡೆಯುವ ಕಾರ್ಯ ಸದ್ದಿಲ್ಲದೇ ನಡೆಯುತ್ತದೆ.
ಹಳೆ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾವಣೆ ಮಾಡಿ, ಹೊಸಬರನ್ನು ಇಲ್ಲಿ ನಿಯೋಜನೆ ಮಾಡಿದ್ದರಿಂದ ಪಹಣಿ ಪತ್ರಿಕೆ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ಕಚೇರಿಯಲ್ಲೇ ಇನ್ನೊಂದು ಕೇಂದ್ರವನ್ನು ತೆರೆಯುವುದರ ಮೂಲಕ ತಾಸುಗಟ್ಟಲೆ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಬೇಕೆಂದು ರೈತ ನಿಂಗಪ್ಪ ಕೋಡಿಹಳ್ಳಿ ಆಗ್ರಹಿಸಿದ್ದಾರೆ.
ಇನ್ನಾದರೂ ಹೋಬಳಿಗಳಲ್ಲಿರುವ ಕಚೇರಿಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ ರೈತರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹ.
ಹೊಸ ಕೇಂದ್ರಕ್ಕೆ ಅವಕಾಶವಿಲ್ಲ
ಪಹಣಿ ಪತ್ರಿಕೆ ಪಡೆಯಲು ಸರತಿ ಸಾಲಲ್ಲಿ ನಿಂತು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಭೂಮಿ ಹಾಗೂ ಅಟಲ್ಜಿ ಕೇಂದ್ರಗಳೆರಡೂ ಕಾರ್ಯ ನಿರ್ವಹಿಸುತ್ತಿವೆ. ಆದರೆ ಗುತ್ತಲ, ಕರ್ಜಗಿ ಹೋಬಳಿಗಳ ಜನರು ಇಲ್ಲಿಯೇ ಪಹಣಿ ಪತ್ರಿಕೆ ಪಡೆಯುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ. ಮತ್ತೊಂದು ಕೇಂದ್ರ ಆರಂಭಿಸಲು ಅವಕಾಶವಿಲ್ಲ. ಬೇರೆ ಹೋಬಳಿಯ ಜನರು ತಮ್ಮ ವ್ಯಾಪ್ತಿಯ ಕೇಂದ್ರದಲ್ಲೇ ಪಹಣಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು