ಬಗರ್ ಹುಕುಂ ಸಾಗುವಳಿ ಪತ್ರಕ್ಕೆ ಆಗ್ರಹಿಸಿ ಬಿಎಸ್ಪಿ ಧರಣಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 13
ಬಗರ ಹುಕುಂ ಸಾಗುವಳಿ ಮಾಡಿರುವ ಭೂರಹಿತ ಬಡ ರೈತರಿಗೆ ಸಾಗುವಳಿ ಪತ್ರಗಳನ್ನು ಕೂಡಲೇ ವಿತರಿಸುವಂತೆ ಆಗ್ರಹಿಸಿ ಸೋಮವಾರ ಬಹುಜನ ಸಮಾಜ ಪಕ್ಷ ತಾಲೂಕು ಘಟಕದ ನೇತೃತ್ವದಲ್ಲಿ ಭೂರಹಿತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಹಳೆ ಪುರಸಭೆಯಿಂದ ಮೆರವಣಿಗೆ ನಡೆಸಿದ ಭೂರಹಿತರು, ಮುಖ್ಯರಸ್ತೆ, ಸುಭಾಷ್ ವೃತ್ತ, ಸ್ಟೇಷನ್ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿ ತಲುಪಿದರು.
ಅಧ್ಯಕ್ಷ ರುದ್ರಯ್ಯ ಸಾಲಿಮಠ ಮಾತನಾಡಿ, ಸಂವಿಧಾನದ ಅನುಚ್ಛೇದ 38 ಮತ್ತು 39ರ ಆಶಯಗಳನ್ನು ಸರ್ಕಾರಗಳು ಮಣ್ಣುಪಾಲು ಮಾಡಿವೆ. ಶೇ. 75ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದರೂ ಶೇ. 33ರಷ್ಟು ಕೃಷಿ ಕಾರ್ಮಿಕರು, ಶೇ. 43ರಷ್ಟು ಸಣ್ಣ ಹಿಡುವಳಿದಾರರಿದ್ದಾರೆ. ಇವರೆಲ್ಲರೂ ಪರಾವಲಂಬಿಗಳಾಗಿಯೇ ಬದುಕುತ್ತಿದ್ದಾರೆ. 20 ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಅಷ್ಟಿಷ್ಟು ಒತ್ತುವರಿ ಮಾಡಿಕೊಂಡು, ಕೃಷಿ ನಡೆಸುತ್ತಿರುವ ಕುಟುಂಬಗಳಿಗೆ ಸಕ್ರಮ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಹ್ಮಣ್ಯಂ ನೇತೃತ್ವದ ಸಮಿತಿ ರಚಿಸಲಾಗಿದ್ದು, ಅದು 2011ರಲ್ಲಿ ನೀಡಿದ ವರದಿಯಂತೆ ಸುಮಾರು 12ರಿಂದ 15 ಲಕ್ಷ ಎಕರೆ ಸರ್ಕಾರಿ ಜಮೀನಿನಲ್ಲಿ ಬಡ ರೈತರು ಬಗರ್ ಹುಕುಂ ಸಾಗುವಳಿ ಮಾಡಿದ್ದಾರೆ. ಇದರಲ್ಲಿ ಭೂಮಾಫಿಯಾ, ರಿಯಲ್ ಎಸ್ಟೇಟ್ ಮಾಲೀಕರು ಹಾಗೂ ಪ್ಲಾಂಟರ್ಗಳೂ ಸೇರಿದ್ದಾರೆ. ಸರ್ಕಾರಿ ನಮೂನೆ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದ ಭೂರಹಿತರಿಗೆ ಸರ್ಕಾರಿ ಭೂಮಿ ಹಂಚಿಕೆ ಮಾಡಬೇಕು. 1991-99ರ ಅವಧಿಯಲ್ಲಿ ಅರ್ಜಿ ಸಲ್ಲಿಸದ ಹಾಗೂ ಆಮೇಲೂ ಬಗರ್ ಹುಕುಂ ಸಾಗುವಳಿ ಆರಂಭಿಸಿದ ರೈತರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಚಂದ್ರಪ್ಪ ತರೇದಹಳ್ಳಿ, ಮರಿಯಪ್ಪ ಕುರುಡಮ್ಮನವರ, ನಾಗಪ್ಪ ಅಬಲೂರು, ನಬಿಸಾಬ್ ಹರಿಹರ, ಹುಸೇನಸಾಬ್ ಓಲೇಕಾರ, ಪರಮೇಶಪ್ಪ ಅಬಲೂರು, ಕರಿಯಪ್ಪ ಕಾರಗಿ, ಮಲ್ಲಪ್ಪ ಮಾಳಗಿ, ಮಂಜು ಬಿದರಕಟ್ಟಿ, ಫಕ್ಕೀರಪ್ಪ ಹಾಲಮ್ಮನವರ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.