ವಾಹನ ಚಾಲಕರ ಜಾಗೃತಿಗೆ ಬೀದಿ ನಾಟಕ, ಹಾಡು!
ರಾಣಿಬೆನ್ನೂರು: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಲಾ ತಂಡದ ಕಲಾವಿದರು ಬೀದಿ ನಾಟಕ ಪ್ರದರ್ಶಿಸಿ, ವಾಹನ ಚಾಲಕರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಶೋಕ ವೃತ್ತ, ಅಂಚೆ ವೃತ್ತ, ಟಾಂಗಾ ಕೂಟ, ಕುರುಬಗೇರಿ ಕ್ರಾಸ್, ತಹಸೀಲ್ದಾರ್ ಕಚೇರಿ ಆವರಣ ಹಾಗೂ ಬಸ್ ನಿಲ್ದಾಣದ ಎದುರು ಬೀದಿ ನಾಟಕ ಪ್ರದರ್ಶಿಸಿ, ಜಾಗೃತಿ ಗೀತೆ ಹಾಡಿದರು. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಮಿತಿ ಮೀರಿದ ವೇಗದಿಂದ ವಾಹನ ಚಲಾಯಿಸಬೇಡಿ. ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಬೇಡಿ. ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ಎಂಬ ಸಂದೇಶ ಸಾರಿದರು. ಡಿವೈಎಸ್ಪಿ ಎಸ್.ಎಚ್. ಗಡಾದ, ಸಂಚಾರಿ ಠಾಣೆ ಪಿಎಸ್ಐ ಅರಳಿಕಟ್ಟಿ, ಗ್ರಾಮಾಂತರ ಸಿಪಿಐ ಜೆ. ಲೋಕೇಶ್,ಪಿಎಸ್ಐ ಎನ್.ಸಿ. ಕಾಡದೇವರಮಠ, ನಗರ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ಇದ್ದರು.