ಹಾಸ್ಟೆಲ್ ಮಕ್ಕಳಿಗೂ ಸೈಕಲ್ ನೀಡಿ: ಮನವಿ
ಬ್ಯಾಡಗಿ: ಸರ್ಕಾರಿ ವಸತಿ ನಿಲಯದ 8ನೇ ತರಗತಿ ವಿದ್ಯಾರ್ಥಿಗಳಿಗೂ ಉಚಿತ ಸೈಕಲ್ ಯೋಜನೆ ವಿಸ್ತರಿಸುವಂತೆ ಆಗ್ರಹಿಸಿ ಎಸ್ಎಫ್ಐ ಕಾರ್ಯಕರ್ತರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಪೂಜಾರ, ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಬೇಕು. ತಾರತಮ್ಯ ಸಲ್ಲದು. ಬಹುತೇಕ ವಸತಿ ನಿಲಯಗಳು ಪಟ್ಟಣದಿಂದ ದೂರದಲ್ಲಿವೆ. ಸರ್ಕಾರ ಸೈಕಲ್ ಕೊಟ್ಟರೆ ಮಕ್ಕಳು ನಡೆದುಹೋಗುವುದು ತಪ್ಪುತ್ತದೆ ಹಿಂದಿನ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲು ಕ್ರಮ ಕೈಗೊಂಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲು ಹಿಂದೇಟು ಹಾಕುತ್ತಿದೆ. ಸರ್ಕಾರ ಯೋಜನೆಯನ್ನು ಮರುಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ವಿಷ್ಣುಕುಮಾರ ಲಮಾಣಿ, ಪ್ರವೀಣ ಬಣಕಾರ, ನಿಂಗಪ್ಪ ಹರಿಜನ, ಸುನಿಲ್ ಆಡೂರು, ಚಂದ್ರು ಚೌಡಪ್ಪಳವರ, ಗಣೇಶ ಲಮಾಣಿ ಇದ್ದರು.