ಏಕತಾ ಭಾವನೆ ಮೂಡಲಿ: ನಾಶೀಪುಡಿ
ಹಾನಗಲ್ಲ: ನಮ್ಮಲ್ಲಿ ಎಷ್ಟೇ ಜಾತಿ-ಮತಗಳಿದ್ದರೂ ದೇಶದ ಪ್ರಶ್ನೆ ಬಂದಾಗ ನಾವೆಲ್ಲ ಭಾರತೀಯರು ಎಂಬ ಏಕತಾ ಭಾವನೆ ಹೊಂದಿರಬೇಕು ಎಂದು ಪಟ್ಟಣದ ಅಂಜುಮನ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಎ. ನಾಶೀಪುಡಿ ಹೇಳಿದರು.
ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ 151ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಧಾರ್ಮಿಕ ವಿಚಾರಗಳಿಗಾಗಿ ಜಗತ್ತು ಭಾರತವನ್ನು ಗೌರವಿಸುತ್ತಿತ್ತು. ಈಗ ತಂತ್ರಜ್ಞಾನ ಕ್ಷೇತ್ರದ ಸಾಧನೆ ಮೂಲಕ ದೇಶ ಗಮನ ಸೆಳೆಯುತ್ತಿದೆ ಎಂದರು. ಆರೆಸ್ಸೆಸ್ ಸಂಚಾಲಕ ರಾಜು ಹೈಬತ್ತಿ ಉಪನ್ಯಾಸ ನೀಡಿದರು. ಜೀವನದಲ್ಲಿ ತ್ಯಾಗ, ಸೇವೆ, ಸಮರ್ಪಣಾ ಭಾವನೆ ಅಳವಡಿಸಿಕೊಳ್ಳಬೇಕೆಂದು ವಿವೇಕಾನಂದರು ಯುವಕರಿಗೆ ಸಂದೇಶ ನೀಡಿದ್ದಾರೆ ಎಂದರು. ವಿಜೇಂದ್ರ ತುಪ್ಪದ, ಪಿ.ಆರ್. ಮಕಾನದಾರ, ಎಸ್.ಎಫ್. ಗುಂಡೆ ಅತಿಥಿಗಳಾಗಿದ್ದರು. ಎಸ್.ಎಂ. ಅಂಗಡಿ ನಿರೂಪಿಸಿದರು. ವಿ.ಯು. ಪಾಟೀಲ ವಂದಿಸಿದರು.