ನೇಕಾರಿಕೆ ರಕ್ಷಣೆಗಾಗಿ ರಂಗಕರ್ಮಿ ಪ್ರಸನ್ನ ಪಾದಯಾತ್ರೆಗೆ ಬೆಂಬಲ
ಗಜೇಂದ್ರಗಡ: ವಿನಾಶದ ಅಂಚಿಗೆ ತಲುಪಿರುವ ಕೈಮಗ್ಗ ನೇಕಾರಿಕೆ ರಕ್ಷಣೆಗಾಗಿ ಹೆಗ್ಗೂಡಿನ ಹಿರಿಯ ರಂಗ ನಿರ್ದೇಶಕ ಪ್ರಸನ್ನ ಜ. 15ರಿಂದ ಪ್ರಾರಂಭಿಸುವ 250 ಕಿಮೀ ವ್ಯಾಪ್ತಿಯ ಬನಶಂಕರಿ ಪಾದಯಾತ್ರೆ ಸತ್ಯಾಗ್ರಹಕ್ಕೆ ನೇಕಾರರು, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ಕಲಾವಿದರ ಜತೆ ಚಲನಚಿತ್ರ ನಟ ಪ್ರಕಾಶ ರೈ ಸಾಥ್ ನೀಡಲಿದ್ದಾರೆ ಎಂದು ಪ್ರೊ. ಬಿ.ಎ. ಕೆಂಚರೆಡ್ಡಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗಜೇಂದ್ರಗಡದಿಂದ ಪ್ರಾರಂಭಿಸಿ ಬಾದಾಮಿ ತಾಲೂಕು ಬನಶಂಕರಿಗೆ ತೆರಳುವ ಪಾದಯಾತ್ರೆ ಜ. 27ರಂದು ಬನಶಂಕರಿ ತಲುಪಲಿದೆ. ಸಾಹಿತಿ ಯು.ಆರ್. ಅನಂತಮೂರ್ತಿ, ದೇವನೂರ ಮಹದೇವ, ಸ್ವಾತಂತ್ರ್ಯಯೋಧ ಎಚ್.ಎಸ್. ದೊರೆಸ್ವಾಮಿ, ರೆಹಮತ್ ತರಿಕೇರಿ, ವಿಠಪ್ಪ ಗೊರಂಟ್ಲಿ, ಜನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ, ಕೊತಬಾಳ ಅರುಣೋದಯ ತಂಡ ಶಂಕ್ರಣ್ಣ ಸಂಕಣ್ಣವರ ಈ ಸಂದರ್ಭದಲ್ಲಿ ಪಾಲ್ಗೊಳ್ಳುವರು. ಜ. 15ರಂದು ಗಜೇಂದ್ರಗಡದಿಂದ ಪ್ರಾರಂಭವಾಗುವ ಪಾದಯಾತ್ರೆಯು ಕುಂಟೋಜಿ, 16ರಂದು ಕುಷ್ಟಗಿ ತಾಲೂಕು ಹನುಮಸಾಗರ, 17ರಂದು ಕಬ್ಬರಗಿ, 18ರಂದು ಬಾದಾಮಿ ತಾಲೂಕು ಗುಡೂರು, 19ರಂದು ಸೂಳೆಭಾವಿ, ಅಮೀನಗಡ, 20ರಂದು ಕಮತಗಿ, 21ರಂದು ಗುಳೇದಗುಡ್ಡ, 22- ಶಿರೂರು, 23ರಂದು ಮಲ್ಲಾಪುರ, 24ರಂದು ಕಟಗೇರಿ, ಕಂಕಣಕೊಪ್ಪ, 25ರಂದು ಕೆರೂರ, 26ರಂದು ಹಲಕುರ್ಕಿ, 27ರಂದು ಬನಶಂಕರಿ ತಲುಪಲಿದೆ.