ಅಂಗನವಾಡಿ ಸ್ತ್ರೀಯರ ತವರುಮನೆ: ಗಣಾಚಾರಿ
ಶಿಗ್ಗಾಂವಿ: ಅಂಗನವಾಡಿಗಳು ತವರುಮನೆ ಇದ್ದಂತೆ. ಗರ್ಭಿಣಿಯರ ಆರೋಗ್ಯ ವಿಚಾರಣೆ, ಪೌಷ್ಟಿಕ ಆಹಾರ ವಿತರಣೆ, ದಾಖಲೆ ಸಂಗ್ರಹಣೆ, ಮಕ್ಕಳ ಆರೈಕೆ, ಶಿಕ್ಷಣ ನೀಡುವ ಪುಟ್ಟ ದೇವಾಲಯ ಎಂದು ಗ್ರಾಪಂ ಸದಸ್ಯ ಶೇಕಣ್ಣ ಗಣಾಚಾರಿ ತಿಳಿಸಿದರು.
ಹುಲಗೂರ ಗ್ರಾಮದ ಚೌದರಿ ಪ್ಲಾಟ್ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿಯರಿಗೆ ಸೀಮಂತ ಹಾಗೂ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರಲ್ಲಿ ರಕ್ತಹೀನತೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಗರ್ಭಿಣಿಯರು ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಗರ್ಭಿಣಿಯರ ಆರೋಗ್ಯ ಚೆನ್ನಾಗಿದ್ದರೆ ಮಕ್ಕಳೂ ಆರೋಗ್ಯವಂತವಾಗಿ ಹುಟ್ಟುತ್ತವೆ ಎಂದರು.
ಗರ್ಭಿಣಿಯರಾದ ಹೀನಾ ಕೌಸರ್ ಚೌಧರಿ, ಬಿಬಿಜಾನ್ ಸರ್ಕಾರಿ, ರುಕ್ಸಾನಾ ಪಠಾಣ, ಶಭಾನಾ ಕಳ್ಳಿಮನಿ, ಫೈಜಾಬಾನು ಸರ್ಕಾಜಿ ಅವರಿಗೆ ಉಡಿ ತುಂಬಿ, ಧಾನ್ಯ ವಿತರಿಸಲಾಯಿತು. ಗ್ರಾಪಂ ಸದಸ್ಯೆ ಕೈರೂನಬಿ ಕಾರಡಗಿ ಅಧ್ಯಕ್ಷತೆ ವಹಿಸಿದ್ದರು, ಅಮೀರಬಿ ಚೌದರಿ, ಕಲಾವತಿ ಕ್ಷೌರದ, ಗೌರಮ್ಮ ಪೂಜಾರ, ಶಬಾನಾ ಪಠಾಣ, ನೀಲಮ್ಮ ದ್ಯಾಪನಗೌಡ್ರ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಕಣವಿ, ಸಹಾಯಕಿ ಚಂಡ್ರವ್ವಾ ದೇವಗೇರಿ ಇದ್ದರು.