ಜವಳಿ ಕ್ಷೇತ್ರ ಅಭಿವೃದ್ಧಿಗೆ ಹೊಸ ನೀತಿ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 15
ಜವಳಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ನೂತನ ಜವಳಿ ನೀತಿ ಘೋಷಿಸಿದ್ದು, 5 ವರ್ಷಗಳ ಅವಧಿಯಲ್ಲಿ ರು. 1 ಸಾವಿರ ಕೋಟಿ ಹಂಚಿಕೆ ಮಾಡಿ ಅನುಷ್ಠಾನಗೊಳಿಸುತ್ತಿದೆ. ಈ ಅವಧಿಯಲ್ಲಿ 5 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸುವ ಗುರಿ ಹೊಂದಲಾಗಿದೆ ಎಂದು ಜವಳಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬೂರಾವ್ ಚಿಂಚನಸೂರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೈಮಗ್ಗ ಮತ್ತು ಜವಳಿ ಇಲಾಖೆಗೆ ನೂತನ ಜವಳಿ ನೀತಿಯನ್ನು ಘೋಷಿಸಿದ್ದು, ಇದು 2013-13ನೇ ಸಾಲಿನಿಂದ 5 ವರ್ಷಗಳ ವರೆಗೆ ಜಾರಿಯಲ್ಲಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಉದ್ಯಮಗಳಿಗೆ ಬೇಕಾಗುವ ಮಾನವ ಸಂಪನ್ಮೂಲ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಸಿದ್ಧ ಉಡುಪ ತಯಾರಿಕೆ, ಕೈಮಗ್ಗ ನೇಯ್ಗೆ, ವಿದ್ಯುತ್ ಮಗ್ಗ ನೇಯ್ಗೆ, ಎಂಬ್ರಾಯ್ಡರಿ, ಕಸೂತಿ ಮುಂತಾದ ವೃತ್ತಿಗಳಲ್ಲಿ 209 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ರು. 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮ ಆರಂಭವಾಗಿದೆ. ಈ ಸಾಲಿನಲ್ಲಿ ಜವಳಿ ಕ್ಷೇತ್ರದ ಉತ್ಪಾದನೆಯಲ್ಲಿ ತೊಡಗಿರುವ 116 ಘಟಕಗಳಿಗೆ ಒಟ್ಟು ರು. 1524.63 ಲಕ್ಷ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದರು.
ನೂತನ ನೀತಿಯ ಅಂಶ
ನೂತನ ಜವಳಿ ನೀತಿಯಲ್ಲಿ 5 ವರ್ಷಗಳಲ್ಲಿ 5 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸುವುದು, ರು. 10 ಸಾವಿರ ಕೋಟಿ ಬಂಡವಾಳ ಆಕರ್ಷಣೆ, ಜವಳಿ ಚಟುವಟಿಕೆಗೆ ಪ್ರತಿ ಯುನಿಟ್‌ಗೆ ರು. 1 ದರದಲ್ಲಿ ವಿದ್ಯುತ್ ಸಹಾಯಧನ, ರೋಗಗ್ರಸ್ತ ಸಹಕಾರಿ ನೂಲಿನ ಗಿರಣಿಗಳಿಗೆ ಶೇ. 20ರಷ್ಟು ಅಥವಾ ಗರಿಷ್ಠ ರು. 2 ಕೋಟಿ ಸಹಾಯಧನ ನೀಡಲಾಗುವುದು. ಜವಳಿ ವಲಯದ ಸರ್ವಾಂಗೀಣ ಅಭಿವೃದ್ಧಿಗೆ ರು. 10 ಕೋಟಿ, ಮೆಗಾ ಪ್ರಾಜೆಕ್ಟ್ ಸ್ಥಾಪನೆಗೆ ಆದ್ಯತೆ ನೀಡುವುದು, ಹಿಂದುಳಿದ ಪ್ರದೇಶಗಳಲ್ಲಿ ನಿರ್ದಿಷ್ಟ ಜವಳಿ ವಲಯಕ್ಕೆ ಆದ್ಯತೆ ನೀಡುವುದು ಸೇರಿದೆ ಎಂದು ಚಿಂಚನಸೂರ್ ಹೇಳಿದರು.
ಯಾದಗಿರಿಯಲ್ಲಿ ಜವಳಿ ಪಾರ್ಕ್
ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಗುಳೆ ಹೋಗುವುದನ್ನು ತಡೆದು ಉದ್ಯೋಗಾವಕಾಶ ಕಲ್ಪಿಸಲು ರು. 10 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಇದರಿಂದ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಪಾರ್ಕ್ ಸ್ಥಾಪನೆಗಾಗಿ 3200 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಬಂದರು ಅಭಿವೃದ್ಧಿ
ಕಾರವಾರ ಬಂದರಿನ 2ನೇ ಹಂತದ ಅಭಿವೃದ್ಧಿ ಯೋಜನೆಯನ್ನು ರು. 1500 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಆಸಕ್ತ ಹೂಡಿಕೆದಾರರಿಗೆ ಬಿಡ್ ದಾಖಲೆ ನೀಡುವ ಪ್ರಕ್ರಿಯೆ ಸಕಾರದ ಪರಿಶೀಲನೆಯಲ್ಲಿದೆ. ಹೊನ್ನಾವರ, ಮಂಕಿ, ಪಾವಿನಕುರ್ವಾ, ಹಳದಿಪುರ, ತದಡಿ, ಮಂಗಳೂರು ಬಂದರುಗಳನ್ನು ಅಭಿವೃದ್ಧಿಪಡಿಸುವ ಯೋಜನೆ ವಿವಿಧ ಹಂತದಲ್ಲಿದೆ. ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗೆ ರು. 14.68 ಕೋಟಿ, ಕರಾವಳಿ ಸಂರಕ್ಷಣಾ ಮತ್ತು ನಿರ್ವಹಣಾ ಯೋಜನಾ ಕಾಮಗಾರಿಯನ್ನು ಎಡಿಬಿ ನೆರವಿನಲ್ಲಿ ರು. 911 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಸರ್ಕಾರದ ಮಂಜೂರಾತಿ ದೊರೆತಿದೆ. ಇದನ್ನು 3 ಹಂತಗಳಲ್ಲಿ 8 ವರ್ಷಗಳ ಅವಧಿಯಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ ಎಂದು ಚಿಂಚನಸೂರ್ ತಿಳಿಸಿದರು.
ಕಬ್ಬಲಿಗ ಸಮಾಜ ಎಸ್ಟಿಗೆ ಸೇರಿಸಿ
ರಾಜ್ಯದಲ್ಲಿ ಕಬ್ಬಲಿಗ, ಗಂಗಾಮತಸ್ಥ ಸಮಾಜದ 60 ಲಕ್ಷ ಜನರಿದ್ದಾರೆ. ಸಮಾಜವನ್ನು ಒಗ್ಗೂಡಿಸಲು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ಫೆ. 7 ಮತ್ತು 8ರಂದು ಚಿಂತನ ಶಿಬಿರ ಏರ್ಪಡಿಸಲಾಗಿದೆ. ಫೆ. 9ರಂದು ಅಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾಜವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಸಂಘಟನೆ ಮೂಲಕ ಚಾಲನೆ ನೀಡಲಾಗುವುದು. ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟ ನಡೆದಿದೆ. ಸಮಾವೇಶದಲ್ಲೂ ಈ ಕುರಿತು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಅಂಬಿಗರ ಚೌಡಯ್ಯನವರ ಐಕ್ಯ ಸ್ಥಳವಾದ ರಾಣಿಬೆನ್ನೂರು ತಾಲೂಕಿನ ಚೌಡದಾನಪುರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಸಿಎಂ ಜತೆ ಚರ್ಚಿಸಿ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಕೋರಲಾಗುವುದು ಎಂದರು.
ಶಾಸಕ ರುದ್ರಪ್ಪ ಲಮಾಣಿ ಇದ್ದರು.