ಪಟೇಲರ ಬಹುಮುಖ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ: ಸೋಮಣ್ಣ
ಹಾವೇರಿ: ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಬಹುಮುಖ ವ್ಯಕ್ತಿತ್ವ ದೇಶದ ಇಂದಿನ ಯುವಕರಿಗೆ ಪ್ರೇರಣೆಯಾಗಬಲ್ಲದು ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹೊಸರಿತ್ತಿಯ ಗುದ್ದಲೀಶ್ವರ ಮಠದ ಮುಂಭಾಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಯ ಲೋಹ ಸಂಗ್ರಹಣಾ ಅಭಿಯಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬ್ರಿಟಿಷ್ ಆಡಳಿತ ಕೊನೆಗಾಣುತ್ತಿದ್ದಂತೆ ಭಾರತದ ಮುಖ್ಯವಾಹಿನಿಯಲ್ಲಿ 562 ರಾಜ್ಯಗಳನ್ನು ಒಗ್ಗೂಡಿಸಲು ಮುಖ್ಯ ಕಾರಣೀಕರ್ತರಾಗಿದ್ದ ಪಟೇಲರು, ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶದ ಸೂಕ್ಷ್ಮ ಸನ್ನಿವೇಶವನ್ನು ಸ್ಥಿರಗೊಳಿಸಿದ ಮಹಾ ಆಡಳಿತಗಾರ ಎಂದು ಬಣ್ಣಿಸಿದರು.
ಮಾಜಿ ಶಾಸಕ ನೆಹರೂ ಓಲೇಕಾರ ಮಾತನಾಡಿ, ಮಹಾ ಪುಣ್ಯಪುರುಷ ವಲ್ಲಭಭಾಯಿ ಪಟೇಲರ ಗೌರವ ಸಲ್ಲಿಕೆಗಾಗಿ ನರ್ಮದಾ ಜಿಲ್ಲೆಯ ಕೇವಾಡಿಯ ಸರ್ದಾರ್ ಸರೋವರದ ಅಣೆಕಟ್ಟಿನ ದಕ್ಷಿಣಕ್ಕೆ ಸುಮಾರು 3 ಕಿಮೀ ದೂರದ ಸಾಧು ಬೆಟ್ಟ ದ್ವೀಪದಲ್ಲಿ ವಲ್ಲಭಭಾಯಿ ಪಟೇಲರ 182 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣವಾಗುತ್ತಿದೆ. ಆ ನಿಟ್ಟಿನಲ್ಲಿ ಲೋಹ ಸಂಗ್ರಹ ಆಭಿಯಾನ ಪ್ರಾರಂಭವಾಗಿದೆ. ಎಲ್ಲ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಕರೆ ನೀಡಿದರು.
ಲೋಹ ಸಮಿತಿ ಜಿಲ್ಲಾ ಸಂಚಾಲಕ ಪಾಲಾಕ್ಷಗೌಡ ಪಾಟೀಲ ಮಾತನಾಡಿ, ಹೊಸರಿತ್ತಿ ಗಂಡು ಮೆಟ್ಟಿನ ನಾಡಾಗಿದೆ. ಹುತಾತ್ಮ ಮಹದೇವ ಮೈಲಾರ ಅವರು ದೇಶಕ್ಕಾಗಿ ಪ್ರಾಣವನ್ನು ಬಿಟ್ಟ ಸ್ಥಳ ಹೊಸರಿತ್ತಿಯಾಗಿದೆ. ಇಂಥ ಪವಿತ್ರ ಸ್ಥಳದಿಂದ ವಲ್ಲಭಭಾಯಿ ಪಟೇಲರ ಲೋಹ ಸಂಗ್ರಹಣ ಜಿಲ್ಲಾ ಅಭಿಯಾನ ಕಾರ್ಯಕ್ರಮವನ್ನು ಈ ಸ್ಥಳದಿಂದಲೇ ಪ್ರಾರಂಭಿಸಲಾಗಿದೆ ಎಂದರು.
ಹೊಸರಿತ್ತಿ ಗುದ್ದಲೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ನಾಗೇಂದ್ರ ಕಟಕೋಳ, ಶಶಿಮೋಷಿ ಕುಲಕರ್ಣಿ, ಶಂಕರಗೌಡ ಪಾಟೀಲ, ಎಸ್.ಆರ್. ಅಂಗಡಿ, ಶಂಭಣ್ಣ ಗುಂಜಾಳ, ಪ್ರಭು ಹಿಟ್ನಳ್ಳಿ, ಸಂಗಮೇಶ ಸುರಳಳ್ಳಿ, ಡಾ. ಎಸ್.ಎಸ್. ಮಠದ, ಈರಣ್ಣ ಕೋರಿ, ಬಾಬು ಏಕಬೋಟೆ, ಗಿರೀಶ ಅಂಕಲಕೋಟಿ, ಜಗದೀಶ ಹಾವೇರಿಮಠ ಇದ್ದರು. ಸಿದ್ಧರಾಜ ಕಲಕೋಟಿ ಸ್ವಾಗತಿಸಿ, ನಿರೂಪಿಸಿದರು. ಕೆ.ಸಿ. ಕೋರಿ ವಂದಿಸಿದರು.