ಅದ್ಧೂರಿ ಗುದ್ದಲೀಶ್ವರ ಜಾತ್ರೆ
ಹಾವೇರಿ: ಜಂಗಮ ಸುಕ್ಷೇತ್ರ ಹೊಸರಿತ್ತಿಯ ಗುದ್ದಲೀಶ್ವರ ಮಹಾಸ್ವಾಮಿಗಳ 114ನೇ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಮಹಾ ರಥೋತ್ಸವ ಸಡಗರ, ಸಂಭ್ರಮದಿಂದ ಜರುಗಿತು. ಗುದ್ದಲೀಶ್ವರ ಸ್ವಾಮೀಜಿ ತೇರಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಹರಹರ ಮಹಾದೇವ... ಗುದ್ದಲೀಶ್ವರ ಮಹಾರಾಜಕೀ ಜೈ... ಎಂದು ಕೂಗಿ ಭಕ್ತರು ತೇರೆಳೆದರು. ಮಠದ ಮುಖ್ಯ ದ್ವಾರದಿಂದ ಮಹಾರಥೋತ್ಸವ ತೇರು ಬೀದಿಯ ವರೆಗೆ ಚಲಿಸಿತು. ಮಂಗಳವಾದ್ಯ, ಕುದುರೆ ಕುಣಿತ, ಡೊಳ್ಳು, ಝಾಂಜ್ ಮೇಳ, ಸೈದಾಪುರದ ಕೋಲಾಟ, ಪುರವಂತರ ಒಡಪುಗಳು, ನಂದಿಕೋಲು, ಆರ್ಕೆಸ್ಟ್ರಾ ಮಹಾರಥೋತ್ಸವಕ್ಕೆ ಮೆರಗು ನೀಡಿದವು. ಭಕ್ತಾದಿಗಳು ರಥದ ಕಳಶಕ್ಕೆ ಬಾಳೆಹಣ್ಣು, ಉತ್ತತ್ತಿ, ಬೆಲ್ಲ ತೂರಿ ಭಕ್ತಿ ಭಾವ ಮೆರೆದರು. ಸಿಂಧೋಗಿಯ ಸಚ್ಚಿದಾನಂದ ಸ್ವಾಮೀಜಿ, ದೆಹಲಿ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ, ಅಕ್ಕಿಮಠದ ಗುರುಲಿಂಗ ದೇವರು ಉಪಸ್ಥಿತರಿದ್ದರು.