ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅನಧಿಕೃತ ಟ್ಯುಟೋರಿಯಲ್ಸ್‌ಗೆ ಬೀಗ

Lingaraj Badiger
Updated On : 17 Jan 2014, 10:45 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 16
'ನವೋದಯ ಟ್ಯುಟೋರಿಯಲ್ಸ್‌' ಹೆಸರಿನಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಕೋಚಿಂಗ್ ಸೆಂಟರ್ ಮೇಲೆ ಗುರುವಾರ ದಾಳಿ ಮಾಡಿದ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ, 69 ಮಕ್ಕಳನ್ನು ಮುಕ್ತಗೊಳಿಸಿತು.
ನಿಖರ ಮಾಹಿತಿ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್ ನೇತೃತ್ವದ ತಂಡ, ಕಲ್ಪನಾ ರಾಜಶೇಖರಯ್ಯ ಹಾಲೇವಾಡಿಮಠ ಎಂಬುವರು ನಡೆಸುತ್ತಿದ್ದ ನವೋದಯ ಟ್ಯುಟೋರಿಯಲ್ಸ್ ಮೇಲೆ ದಾಳಿ ಮಾಡಿದೆ. ನವೋದಯ, ಮೊರಾರ್ಜಿ, ಕಿತ್ತೂರು ಚನ್ನಮ್ಮ ಮುಂತಾದ ಸರ್ಕಾರಿ ಸ್ವಾಮಿತ್ವದ ವಿವಿಧ ವಸತಿ ನಿಲಯಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಜೂನ್‌ನಿಂದ ಫೆಬ್ರವರಿ ತನಕ ಇಲ್ಲಿ ತರಬೇತಿ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಲಕ್ಷಾಂತರ ಶುಲ್ಕ ವಸೂಲಿ
ಶೈಕ್ಷಣಿಕ ತರಬೇತಿ ನೀಡಲು ಮಕ್ಕಳಿಂದ ರು. 6ರಿಂದ 25 ಸಾವಿರ ತನಕ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಸಂಗತಿಯನ್ನು ಮಕ್ಕಳೇ ತನಿಖಾ ತಂಡಕ್ಕೆ ವಿವರಿಸಿದ್ದಾರೆ. ಕೇವಲ ಶೈಕ್ಷಣಿಕ ತರಬೇತಿ ಪಡೆಯುವ ಮಕ್ಕಳಿಗೆ 6 ಸಾವಿರ, ವಸತಿ ಸಹಿತ ತರಬೇತಿಗೆ ರು. 25 ಸಾವಿರ ಶುಲ್ಕ ವಸೂಲಿ ಮಾಡುತ್ತಿರುವುದು ಗೊತ್ತಾಗಿದೆ.
ಹಾವೇರಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಬಾಗಲಕೋಟೆ ಜಿಲ್ಲೆಯ ಚಾದಾಪುರ, ಧಾರವಾಡ, ಶಿವಮೊಗ್ಗ ಜಿಲ್ಲೆ. ಅಂಡಿಗೆ, ಸುಣ್ಣದಕೊಪ್ಪ ಹಾಗೂ ದಾವಣಗೆರೆ ಜಿಲ್ಲೆಯ ಹೊಸಳ್ಳಿ ಮುಂತಾದೆಡೆಯಿಂದ ಬಂದಿದ್ದ ಮಕ್ಕಳು ಇಲ್ಲಿ ತರಬೇತಿ ಪಡೆಯುತ್ತಿದ್ದರು. ರಾಜಸ್ಥಾನದಲ್ಲಿ ಓದುತ್ತಿದ್ದ 4ನೇ ತರಗತಿಯ ಮಗುವೊಂದೂ ಇಲ್ಲಿ ತರಬೇತಿಗೆ ಸೇರಿದ್ದು ಅಚ್ಚರಿ ಮೂಡಿಸಿದೆ.
ಶಿಕ್ಷಕರ ಮಕ್ಕಳೂ...: ಇನ್ನೂ ವಿಶೇಷವೆಂದರೆ ಶಿಕ್ಷಕರ 11 ಮಕ್ಕಳೂ ಈ ವಸತಿಗೃಹದಲ್ಲಿದ್ದು ತರಬೇತಿ ಪಡೆಯುತ್ತಿದ್ದರು. ಮಕ್ಕಳಿಗೆ ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಬೇಕಾದ ಶಿಕ್ಷಕರೇ ತಮ್ಮ ಮಕ್ಕಳನ್ನು ಇಲ್ಲಿ ಸೇರಿಸಿದ್ದಾರೆ.
ಹಲವು ಅನುಮಾನ: ಸುಮಾರು 10ರಿಂದ 12 ವರ್ಷದೊಳಗಿನ, 4-5ನೇ ತರಗತಿ ಓದುವ ಮಕ್ಕಳೇ ಇಲ್ಲಿದ್ದರು. ಇಲ್ಲಿರುವ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಾಜರಾತಿ ಸಿಗುತ್ತದೆ. ಬಿಸಿಯೂಟದ ಆಹಾರ ಧಾನ್ಯಗಳು ಪೂರೈಕೆಯಾಗುತ್ತಿವೆ. ಪುಸ್ತಕ ಇನ್ನಿತರ ಸೌಲಭ್ಯಗಳೂ ಸಿಗುತ್ತಿವೆ. ಇದು ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಶಿಕ್ಷಣ ಇಲಾಖೆಯೇ ಉತ್ತರಿಸಬೇಕು. ಕ್ಷೇತ್ರ ಸಂಪನ್ಮೂಲ ಕಾರ್ಯಾಲಯದಿಂದ ಕೂಗಳತೆ ದೂರದಲ್ಲಿ ಈ ಸಂಸ್ಥೆ ನಡೆಯುತ್ತಿರುವುದು ಹಲವು ಅನುಮಾನ ಮೂಡಿಸಿದೆ.
ಕ್ರಿಮಿನಲ್ ಮೊಕದ್ದಮೆ: ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್ ಕನ್ನಡಪ್ರಭದೊಂದಿಗೆ ಮಾತನಾಡಿ, ಅನಧಿಕೃತವಾಗಿ ಟ್ಯುಟೋರಿಯಲ್ಸ್ ನಡೆಸುವುದು ಕಾನೂನಿಗೆ ವಿರುದ್ಧ. ಸಾವಿರಾರು ರುಪಾಯಿ ವ್ಯಯಿಸಿ ಇಂಥ ತರಬೇತಿ ನೀಡುವುದರಿಂದ ಸರ್ಕಾರಿ ಸೌಲಭ್ಯ ಉಳ್ಳವರ ಪಾಲಾಗುವ ಸಾಧ್ಯತೆ ಅಧಿಕ. 12 ವರ್ಷದೊಳಗಿನ ಮಕ್ಕಳನ್ನು ವಸತಿ ನಿಲಯಗಳಲ್ಲಿ ಇಡುವುದು ಅಪರಾಧ. 69 ಮಕ್ಕಳ ವೈಯಕ್ತಿಕ ಮಾಹಿತಿ ಪಡೆಯಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವೆ. ಈ ಕುರಿತು ಕಲ್ಪನಾ ರಾಜಶೇಖರಯ್ಯ ಹಾಲೇವಾಡಿಮಠ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.
ಮಕ್ಕಳು ಮನೆಗೆ: ಪಾಲಕರ ಮಾಹಿತಿ ಪಡೆದ ಬಿಇಒ ದೂರವಾಣಿ ಮೂಲಕ ಪಾಲಕರನ್ನು ಸಂಪರ್ಕಿಸಿ ಸುರಕ್ಷಿತವಾಗಿ ಮಕ್ಕಳನ್ನು ಮನೆಗಳಿಗೆ ಕರೆದೊಯ್ಯುವಂತೆ ಸೂಚನೆ ನೀಡಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಿ.ಸಿ. ಪೀರಜಾದೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement