ಕಾಶಿ ಪೀಠದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮ
ಹಾವೇರಿ: ಪೀಠಾರೋಹಣ ರಜತ ಮಹೋತ್ಸವದ ಅಂಗವಾಗಿ ಕಾಶಿ ಪೀಠದಲ್ಲಿ 126 ದಿನಗಳ ಕಾಲ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಲಾಗಿದೆ ಎಂದು ಕಾಶೀ ಪೀಠದ ಜಗದ್ಗುರು ಡಾ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿ ಮಠಕ್ಕೆ ಗುರುವಾರ ಆಗಮಿಸಿ ಭಕ್ತರೊಂದಿಗೆ ಮಾತನಾಡಿದ ಅವರು, ಜು. 8ರಿಂದ ನ. 11ರ ವರೆಗೆ ಕಾರ್ಯಕ್ರಮಗಳು ಜರುಗಲಿವೆ. ಧಾರ್ಮಿಕ ಚಿಂತನ ಗೋಷ್ಠಿಗಳಲ್ಲಿ ವಿದ್ವಾಂಸರಿಂದ ಉಪನ್ಯಾಸ, ಶಿವಾಚಾರ್ಯರಿಂದ ಧಾರ್ಮಿಕ ಮಾರ್ಗದರ್ಶನ, ಪ್ರಶ್ನೋತ್ತರ, ಸಾಹಿತ್ಯ ಗೋಷ್ಠಿಗಳನ್ನು ನಡೆಸಲಾಗುವುದು ಎಂದರು.
ಪ್ರತಿ ನಿತ್ಯ ಸಂಜೆ 5ರಿಂದ 6 ಗಂಟೆ ವರೆಗೆ 100 ಭಕ್ತರು ನದಿಯಿಂದ ನೀರನ್ನು ತಂದು ಶಿವಾರ್ಚನೆ ಮಾಡುವರು. ಸಾವಿರ ಕುಂಭ ಪೂಜೆ ನೆರವೇರಿಸಲಾಗುವುದು. ಸಂಜೆ 6ರಿಂದ 10 ಗಂಟೆ ವರೆಗೆ ಇಷ್ಟಲಿಂಗ ಪೂಜೆ, ಜಗದ್ಗುರು ವಿಶ್ವಾರಾಧ್ಯಲಿಂಗೋದ್ಭವ ಮೂರ್ತಿಗೆ ಹಾಗೂ ಕಾಶಿ ಪೀಠದಲ್ಲಿರುವ ವಿಶ್ವನಾಥ ಲಿಂಗಕ್ಕೆ ಅತಿರುದ್ರಾಭಿಷೇಕ, ಕೋಟಿ ಬಿಲ್ವಾರ್ಚನೆ, ರುದ್ರಾಕ್ಷಾರ್ಚನೆ ಮತ್ತು ಸುಮಂಗಲೆಯರಿಂದ ಅನ್ನಪೂರ್ಣಾದೇವಿಗೆ ಕುಂಕುಮಾರ್ಚನೆ ನೆರವೇರುವವು ಎಂದು ತಿಳಿಸಿದರು.
ವಿದೇಶಗಳಿಂದ ಭಕ್ತರು
ಮಧ್ಯಾಹ್ನ 11ರಿಂದ 12 ಗಂಟೆ ವರೆಗೆ ಮಹಾ ಮಂಗಳಾರತಿ. 2ರಿಂದ 5 ಗಂಟೆ ವರೆಗೆ ಸಿದ್ಧಾಂತ ಶಿಖಾಮಣಿ ಮತ್ತು ಪರಮ ರಹಸ್ಯ ಗ್ರಂಥಗಳ ಬೃಹತ್ ಪಾರಾಯಣ ನಡೆಯುತ್ತದೆ. ಸಂಜೆ 6ರಿಂದ 8ರ ವರೆಗೆ ಧರ್ಮ ಚಿಂತನಗೋಷ್ಠಿಗಳು ನಡೆಯಲಿವೆ. ರಾತ್ರಿ 8ರಿಂದ 9ರ ವರೆಗೆ ಲಕ್ಷ ದೀಪೋತ್ಸವ, ಶ್ರೀಗಳ ತುಲಾಭಾರ ಇರುತ್ತದೆ. ತುಲಾಭಾರದಿಂದ ಬಂದ ಹಣದಲ್ಲಿ ಬಡ ವಿದ್ಯಾರ್ಥಿಗಳಿಗೆ ತಲಾ ರು. 1 ಸಾವಿರ ಶಿಷ್ಯವೇತನ ನೀಡಲಾಗುವುದು, ನಿತ್ಯ 2 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಷ್ಯಾದಿಂದ 500ಕ್ಕೂ ಹೆಚ್ಚು ಭಕ್ತರು ಆಗಮಿಸುವರು. ಅವರಿಗೆ ಶಿವದೀಕ್ಷೆ ನೀಡಲಾಗುವುದು. ಫೆ. 16ರಿಂದ 18ರ ವರೆಗೆ ಗೋವಾದಲ್ಲಿ ರಷ್ಯನ್ ಭಕ್ತರೊಬ್ಬರಿಂದ ಯೋಗ ಕಾರ್ಯಕ್ರಮವಿದೆ ಎಂದು ಹೇಳಿದರು.
ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಪಿ.ಡಿ. ಶಿರೂರ, ವಿ.ಜಿ. ಹರ್ಲಾಪುರ ಮಾತನಾಡಿದರು. ಎಸ್.ಎಂ. ಹುರಳಿಕುಪ್ಪಿ, ಎಸ್.ಎಸ್. ಮುಷ್ಠಿ, ಆರ್.ಎಸ್. ಮಾಗನೂರ, ಗಣೇಶ ಹೂಗಾರ, ಶಿವಬಸಪ್ಪ ಹಾಲಯ್ಯನವರಮಠ, ಅಜ್ಜಪ್ಪ ಹೂಗಾರ, ಪ್ರಕಾಶ ಹಂದ್ರಾಳ, ವೀರೇಶ ಪಾಟೀಲ, ಚನ್ನವೀರಸ್ವಾಮಿ ಮರಡೂರಮಠ, ಶಿವಶಂಕರ ಹಿರೇಮಠ, ಸತೀಶ ತಳವಾರ, ಗಿರೀಶ ಹಿರೇಮಠ, ಪೃಥ್ವೀರಾಜ ಬೆಟಗೇರಿ, ಎಸ್.ಸಿ. ಕಲ್ಮಠ, ಪ್ರಭು ಹಿಟ್ನಳ್ಳಿ, ಬಿ. ಬಸವರಾಜ, ನಿರಂಜನ ಮರಡೂರಮಠ ಇದ್ದರು.