'ಹಾವೇರಿ ಗೋಲಿಬಾರ್' ಘಟನೆಯ ಸಿನಿಮಾ ಚಿತ್ರೀಕರಣ ಪ್ರಾರಂಭ
ಹಾವೇರಿ: ಅನ್ನದಾತನ ಬದುಕಿನ ನೋವು, ಕಷ್ಟಗಳು, ಅವರ ಹೋರಾಟಕ್ಕೆ ಕಾರಣವಾದ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಹಾವೇರಿ ಜಿಲ್ಲೆಯ ಹಳ್ಳಿಗಳಲ್ಲಿಯೇ ಸಂಪೂರ್ಣ ಚಿತ್ರೀಕರಣಗೊಳ್ಳುವ 'ರೈತ ರಾಜ್ಯ' ಸಿನಿಮಾ ಬೆಳ್ಳಿತೆರೆಗೆ ಬರಲಿದೆ. 'ಹಾವೇರಿ ಗೋಲಿಬಾರ್' ಎಂಬ ಅಡಿಬರಹ ಹೊಂದಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಕುರುಡಿ ಬಣಕಾರ ಅವರ ಕತೆ, ಚಿತ್ರಕತೆ, ನಿರ್ದೇಶನದಲ್ಲಿ 'ರೈತ ರಾಜ್ಯ' ಸಿನಿಮಾದ ಮುಹೂರ್ತ ಸಮಾರಂಭ ಇಲ್ಲಿಯ ಹುಕ್ಕೇರಿ ಮಠದಲ್ಲಿ ಗುರುವಾರ ನೆರವೇರಿತು. ಸಂಭಾಷಣೆ ಜೈಹಿಂದ್, 'ಪಾಗಲ್ ಪ್ರೇಮಿ' ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸಂದೇಶ್ ಈ ಚಿತ್ರದ ನಾಯಕ. 'ಖತರ್ನಾಕ್', 'ಸಾಧಕರು', 'ಪಗಡೆ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ಶೋಭಿತಾ ನಾಯಕಿ. ಹಾವೇರಿ ಜಿಲ್ಲೆಯ ರೈತ ಮುಖಂಡರು, ರೈತರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೈಜನಾಥ್ ಬಿರಾದಾರ ಮುಂತಾದ ಕಲಾವಿದರೂ ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು, ರೈತರು ದಿನನಿತ್ಯ ಎದುರಿಸುತ್ತಿರುವ ಸಂಕಷ್ಟಗಳು, ಸರ್ಕಾರಗಳು ಇವರಿಗೆ ಸ್ಪಂದಿಸುವ ರೀತಿ, ರೈತ ಹೋರಾಟಗಳೇ ಚಿತ್ರದ ಪ್ರಮುಖ ವಿಷಯವಾಗಿವೆ. ನರಗುಂದ, ನವಲಗುಂದ ರೈತ ಬಂಡಾಯದಿಂದ ಹಿಡಿದು ಹಾವೇರಿ ಗೋಲಿಬಾರ್‌ವರೆಗಿನ ಚಿತ್ರಣವನ್ನು ಚಿತ್ರಕತೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎನ್ನುತ್ತಾರೆ ನಿರ್ದೇಶಕ ಕುರುಡಿ ಬಣಕಾರ.