ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಆಗ್ರಹ
ಬ್ಯಾಡಗಿ: ಸ್ಥಳೀಯ ರೇಲ್ವೆ ನಿಲ್ದಾಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ವಾಣಿಜ್ಯ ಕೇಂದ್ರವಾಗಿರುವ ಇಲ್ಲಿ ಯಾವುದೇ ಎಕ್ಸ್ಪ್ರೆಸ್ ರೈಲುಗಳು ನಿಲ್ಲದಿರುವುದು ಖಂಡನೀಯ. ಇದರಿಂದ ಮೆಣಸಿನಕಾಯಿ ವ್ಯಾಪಾರಕ್ಕೆ ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಬ್ಯಾಡಗಿಗೆ ರೈಲು ನಿಲ್ದಾಣ ಇದ್ದೂ ಇಲ್ಲದಂತಾಗಿದೆ ಎಂದು ರೇಲ್ವೆ ಸುಧಾರಣಾ ಸಮಿತಿಯ ಚೇರ್ಮನ್ ಮುರಿಗೆಪ್ಪ ಶೆಟ್ಟರ್ ಆರೋಪಿಸಿದರು.
ಈ ಕುರಿತು ಸ್ಥಳೀಯ ನಿಲ್ದಾಣಾಧಿಕಾರಿ ಶಶಾಂಕ ಮೂಲಕ ನೈಋತ್ಯ ರೇಲ್ವೆ ವಲಯದ ಮಹಾ ಪ್ರಬಂಧಕರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಧಾರವಾಡ-ಮೈಸೂರು ಇಂಟರ್ಸಿಟಿ, ಯಶವಂತಪುರ-ಕುರ್ಲಾ, ಯಶವಂತಪುರ-ಬಿಜಾಪುರ ವೇಗದ ರೈಲುಗಳ ನಿಲುಗಡೆಗೆ ಅನೇಕ ವರ್ಷಗಳಿಂದ ರೇಲ್ವೆ ಸುಧಾರಣಾ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಧಾರವಾಡ-ಮೈಸೂರು ಮುಂದುವರಿಸಿ: ಧಾರವಾಡ-ಮೈಸೂರು ಎಕ್ಸ್ಪ್ರೆಸ್ ರೈಲು ಇಲ್ಲಿವರೆಗೂ ನಿಲುಗಡೆ ಆಗುತ್ತಿತ್ತು. ಮುಂಬರುವ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ. ಇದರಿಂದ ಬಹಳಷ್ಟು ಪ್ರಯಾಣಿಕರಿಗೆ ತೊಂದರೆ ಆಗಲಿದೆ. ಕೂಡಲೇ ಕನಿಷ್ಠ ಧಾರವಾಡ-ಮೈಸೂರು ಎಕ್ಸ್ಪ್ರೆಸ್ ರೈಲನ್ನಾದರೂ ನಿಲ್ಲುವಂತೆ ಮಾಡಬೇಕು ಎಂದರು.
ತಾತ್ಕಾಲಿಕವಾಗಿ ನಿಲುಗಡೆ ಮಾಡುತ್ತ ಬಂದಿರುವ ಧಾರವಾಡ-ಮೈಸೂರು ರೈಲನ್ನು ಇನ್ನು ಮುಂದಾದರೂ ಕಾಯಂ ನಿಲುಗಡೆ ಮಾಡಬೇಕೆಂದು ರೇಲ್ವೆ ಹಿರಿಯ ಅಧಿಕಾರಿಗಳಿಗೆ ಮುರಿಗೆಪ್ಪ ಶೆಟ್ಟರ್ ಆಗ್ರಹಿಸಿದರು. ಜೊತೆಗೆ ಹಲವು ವೇಗದ ರೈಲುಗಳ ನಿಲುಗಡೆ ಮಾಡುವಂತೆ ಆಗ್ರಹಿಸಿದರು.
ಮೇಲ್ಸೇತುವೆ ನಿರ್ಮಿಸಿ: ಮೊಟೆಬೆನ್ನೂರು-ಬ್ಯಾಡಗಿ ರಸ್ತೆಯಲ್ಲಿರುವ ಲೆವೆಲ್ ಕ್ರಾಸಿಂಗ್ನಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಕೂಡಲೇ ಮೇಲ್ಸೇತುವೆ ನಿರ್ಮಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.
ರೇಲ್ವೆ ಸುಧಾರಣಾ ಸಮಿತಿಯ ಉಪಾಧ್ಯಕ್ಷ ಮಾಲತೇಶ ಅರಳಿಮಟ್ಟಿ, ಪುರಸಭೆ ಸದಸ್ಯರಾದ ಮಂಜುನಾಥ ಭೋವಿ, ನಾರಾಯಣಪ್ಪ ಕರ್ನೂಲ, ಪ್ರಶಾಂತ ಯಾದವಾಡ, ಮಲ್ಲನಗೌಡ್ರ ಭದ್ರಗೌಡ್ರ, ಮಹೇಶ ಉಜನಿ, ಜಿತೇಂದ್ರ ಸುಣಗಾರ, ಕರವೇಯ ಕೊಟ್ರೇಶ ಗಡಾದ, ಶಂಭಣ್ಣ ಅಂಗಡಿ ಹಾಗೂ ಅನೇಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.