ಕೀಲು ಸವೆತಕ್ಕೆ ಸುಲಭ ಚಿಕಿತ್ಸೆ
ರಾಣಿಬೆನ್ನೂರು: ಕೀಲು ಸವೆತಕ್ಕೆ ಕಡಿಮೆ ಖರ್ಚಿನಲ್ಲಿ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ ಎಂದು ವಿನಾಯಕನಗರದ ಲಕ್ಷ್ಮೀ ಶಸ್ತ್ರಚಿಕಿತ್ಸೆ ಹಾಗೂ ಅಪಘಾತ ಚಿಕಿತ್ಸಾ ಆಸ್ಪತ್ರೆಯ ವೈದ್ಯ ಡಾ ಸಂಜೀವ ಮುದ್ರಿಯವರ ತಿಳಿಸಿದರು. ಮುಂಬೈಯಲ್ಲಿ ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರ ಮಂಡಿ ನೋವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರುವ ಪದ್ಮಭೂಷಣ ಡಾ ನಂದಕುಮಾರ್ ಲಾಡ್ ಅವರ ಬಳಿ ಕೀಲು ಸವಕಳಿಗೆ ಚಿಕಿತ್ಸೆ ನೀಡಲು ತರಬೇತಿ ಪಡೆದಿದ್ದಾಗಿ ವಿವರಿಸಿದರು. ಕೀಲು ಸವೆತ ರೋಗಿಗಳಿಗೆ ಕಾಲು ಮತ್ತು ಚಪ್ಪೆ ಕೀಲುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಿ, ಅವರು ಮೊದಲಿನಂತೆಯೇ ಕೆಲಸ ಮಾಡಲು ಸಾಧ್ಯವಾಗುವಂತೆ ಮಾಡಿದ್ದಾಗಿ ತಿಳಿಸಿದರು. ಚಿಪ್ಪನ್ನು ಬದಲಾಯಿಸಿ, 68 ತಾಸುಗಳಲ್ಲಿ ಗುಣಮುಖರಾಗಿರುವ ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ, ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವ ವೀರಭದ್ರಪ್ಪ ಸೋಮಪ್ಪ ಮಂಕೂರು (68) ಅವರನ್ನು ಮಾದರಿಯಾಗಿ ತೋರಿಸಿದರು. ಡಾ ಗುರುರಾಜ ದಾಸರ, ಡಾ ವಿನಯ ನಾಡಿಗೇರ, ಡಾ ನಿರಂಜನ ಮಿರಜಿ ಹಾಗೂ ಚನ್ನೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್. ಪಾಟೀಲ ಇದ್ದರು.