ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಬ್ಬು ಕಟಾವು ವಿಳಂಬ: ರೈತರ ಮನವಿ

Mainashree
Updated On : 21 Jan 2014, 12:16 pm

ಹಾನಗಲ್ಲ: ಕಬ್ಬು ಸರಿಯಾದ ಸಮಯಕ್ಕೆ ಕಟಾವು ಆಗದೆ ತಾಲೂಕಿನ ರೈತ ಹಾನಿ ಅನುಭವಿಸುವಂತಾಗಿದ್ದು, ಸಂಗೂರು ಸಕ್ಕರೆ ಕಾರ್ಖಾನೆ ನೆರವಿಗೆ ಬರಬೇಕೆಂದು ಭಾರತೀಯ ಕೃಷಿಕ ಸಮಾಜ ರೈತ ಸಂಘಟನೆ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಸೋಮವಾರ ಬೆಳಗ್ಗೆ ತಹಸೀಲ್ದಾರ್‌ಗೆ ಅರ್ಪಿಸಿದ ಮನವಿಯಲ್ಲಿ, ಬೊಮ್ಮನಹಳ್ಳಿ ಭಾಗದಲ್ಲಿ ಕಬ್ಬು ಬೆಳೆದ ರೈತರಿಗೆ ಸಕಾಲಕ್ಕೆ ಕಬ್ಬು ಸಾಗಾಣಿಕೆಯಾಗದೆ ಎಕರೆಗೆ ರು. 10ರಿಂದ 12 ಸಾವಿರ ನಷ್ಟವಾಗಿದ್ದು, ಸಕ್ಕರೆ ಕಾರ್ಖಾನೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ನವೆಂಬರ್-ಡಿಸೆಂಬರ್‌ನಲ್ಲಿ ಕಾರ್ಖಾನೆಗೆ ಹೋಗಬೇಕಿದ್ದ ಕಬ್ಬು ವಿಳಂಬದಿಂದಾಗಿ ಹೊಲಗಳಲ್ಲಿ ಒಣಗುತ್ತಿದೆ. ಕಟಾವು ಮಾಡಲು ಕಾರ್ಮಿಕರ ವ್ಯವಸ್ಥೆ ಮಾಡಿ ಖರೀದಿಸುವುದಾಗಿ ಭರವಸೆ ನೀಡಿದ್ದ ಕಾರ್ಖಾನೆ ಮಾಲೀಕರು ಈಗ ಮರೆತಿದ್ದಾರೆ. ಪ್ರತಿ ಟನ್ನಿಗೆ ರು. 1800 ನೀಡಿ ಕಟಾವಿಗೆ ರು. 300 ಹಾಗೂ ಸಾಗಾಣಿಕೆ ವೆಚ್ಚ ರು. 247 ನೀಡಿದ್ದಾರೆ. ಆದರೆ, ವೆಚ್ಚವನ್ನು ರೈತರೇ ಭರಿಸುವಂತೆ ಕಾರ್ಖಾನೆ ಮಾಲೀಕರು ಹೇಳಿದ್ದಾರೆ.
ಬೊಮ್ಮನಹಳ್ಳಿ ಭಾಗದ 300 ಎಕರೆ ಪ್ರದೇಶದ 10 ಸಾವಿರಕ್ಕೂ ಅಧಿಕ ಟನ್ ಕಬ್ಬು ಕಟಾವಾಗಿಲ್ಲ. ಕಬ್ಬು ಸಾಗಿಸಲು ಕಾರ್ಖಾನೆ 20 ವಾಹನ ವ್ಯವಸ್ಥೆ ಮಾಡಬೇಕು. ಸಾಗಾಣಿಕೆ ವೆಚ್ಚವಾಗಿ ಟನ್ನಿಗೆ ರು. 300 ಹಾಗೂ ಲಾರಿ ಚಾಲಕರ ಭತ್ತೆ ಕೊಡದಿದ್ದರೆ ವಾಹನಗಳು ಹೊಲಕ್ಕೆ ಇಳಿಯುತ್ತಿಲ್ಲ. ಕಾರ್ಖಾನೆ ಮಾಲೀಕರು ಸಮಸ್ಯೆ ಬಗೆಹರಿಸಬೇಕು. ಅಥವಾ ವೆಚ್ಚವನ್ನಾದರೂ ನೀಡಬೇಕು. ಕಬ್ಬು ಬೆಳೆಗಾರ ರೈತರ ಸಮಸ್ಯೆಗಳಿಗೆ ಕಾರ್ಖಾನೆ ಸ್ಪಂದಿಸದಿದ್ದರೆ ರೈತ ಸಮುದಾಯ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಭಾರತೀಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಎಂ.ಎಸ್. ಪಾಟೀಲ, ತಾಲೂಕಾಧ್ಯಕ್ಷ ಎನ್.ಎಸ್. ಪಡೆಪ್ಪನವರ, ರೈತ ಸಂಘದ ತಾಲೂಕು ಅಧ್ಯಕ್ಷ ಮಹಾಲಿಂಗಪ್ಪ ಅಕ್ಕಿವಳ್ಳಿ, ಸಂಘಟನಾ ಕಾರ್ಯದರ್ರ್ಶಿ ಅಡಿವೆಪ್ಪ ಆಲದಕಟ್ಟಿ, ರೈತ ಮುಖಂಡರಾದ ಶಿವಕುಮಾರ ಸ್ವಾಮಿ ಮಲ್ಲಿಕೇರಿಮಠ, ಬಸವರಾಜ ಗಾಲಪ್ಪನವರ, ಶಿವಾನಂದ ಬಂಗಾರಿ, ಚಂದ್ರು ಹತ್ತಿ, ಕೊಟ್ರಪ್ಪ ಚನ್ನೂರ, ಪುಟ್ಟಪ್ಪ ಕಲಕಟಗಿ, ಸದಾನಂದ ಹೊಸಮನಿ, ಸುರೇಶ ಧಾರವಾಡ, ಶಿದ್ದಲಿಂಗ ಹಿರೇಮಠ, ಮಾಲತೇಶ ಗದ್ದಿಗಾಲ, ರವಿ ಸುಣಗಾರ, ಪುಟ್ಟನಗೌಡ ಪಾಟೀಲ, ನೀಲಪ್ಪ ಬೈಚವಳ್ಳಿ, ಚನ್ನಪ್ಪ ಹುಲಗೂರ, ಗಿರೀಶ ಹೊಳಲದ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement