ನಿತ್ಯಾ, ಸಂಭಾಜಿ ಅಣಕು ಶವಯಾತ್ರೆ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 20
ಕನ್ನಡಿಗರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ನಿತ್ಯಾನಂದ ಸ್ವಾಮಿ ಹಾಗೂ ಬೆಳಗಾವಿ ಶಾಸಕ ಸಂಭಾಜಿ ಪಾಟೀಲರ ಅಣಕು ಶವಯಾತ್ರೆ ನಡೆಸುವ ಮೂಲಕ ಸ್ವಾಭಿಮಾನಿ ಕರ್ನಾಟಕ ರಕ್ಷಾಣಾ ವೇದಿಕೆ (ಕನ್ನಡ ಸಂಘಟನೆಗಳ ಒಕ್ಕೂಟ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದಿಂದ ಅಣುಕು ಶವಯಾತ್ರೆ ಆರಂಭಿಸಿದ ಕಾರ್ಯಕರ್ತರು ಜೆ.ಪಿ. ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ನಿತ್ಯಾನಂದ ಮತ್ತು ಪಾಟೀಲರ ವಿರುದ್ಧ ಘೋಷಣೆ ಕೂಗಿ, ಈ ಇಬ್ಬರ ಪ್ರತಿಕೃತಿ ದಹಿಸಿ, ರಾಷ್ಟ್ರೀಯ ಹೆದ್ದಾರಿ ತಡೆದು, ಆಕ್ರೋಶ ವ್ಯಕ್ತಪಡಿಸಿದರು.
ನೇತೃತ್ವ ವಹಿಸಿದ್ದ ಸ್ವಾಭಿಮಾನಿ ಕರವೇ ಜಿಲ್ಲಾಧ್ಯಕ್ಷ ರವಿ ಮೂಲಿಮನಿ ಮಾತನಾಡಿ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದು ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ. ಕನ್ನಡಿಗರೇ ಹೊಡೆದು ಓಡಿಸುವ ಮೊದಲು ಈ ಇಬ್ಬರೂ ರಾಜ್ಯದಿಂದ ತೊಲಗಬೇಕು. ಧಾರ್ಮಿಕ ಜ್ಞಾನ ನೀಡುವುದಾಗಿ ಹೇಳಿ ರಾಜ್ಯದ ರೈತರಿಂದ 23 ಎಕರೆ ಜಮೀನು ಕಬಳಿಸಿದ್ದಲ್ಲದೆ, ಹರಿದ್ವಾರದಲ್ಲಿ ಕನ್ನಡಿಗರಿಗೆ ಸ್ಥಳಾವಕಾಶ ನೀಡಬಾರದೆಂದು ಹೇಳಿರುವ ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮಿ ಹಾಗೂ ಕನ್ನಡಕ್ಕೆ ದ್ರೋಹ ಬಗೆಯುತ್ತಿರುವ ಬೆಳಗಾವಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲರನ್ನು ರಾಜ್ಯದಿಂದ ಗಡಿಪಾರು ಮಾಡಲು ಆದೇಶಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಭಾಜಿ ರಾಜಿನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು. ಕ್ರಮ ಜರುಗಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸ್ವಾಭಿಮಾನಿ ಕರವೇ ಸಂಘಟನಾ ಕಾರ್ಯದರ್ಶಿ ಪರಶುರಾಮ ಶೆಟ್ಟರ, ತಾಲೂಕು ಘಟಕದ ಅಧ್ಯಕ್ಷ ರವಿ ಹದಡೇರ, ರಾಣಿಬೆನ್ನೂರು ತಾಲೂಕು ಅಧ್ಯಕ್ಷ ಚಂದ್ರು ಕಡ್ಲಿಗೊಂದಿ, ಉಪಾಧ್ಯಕ್ಷ ನಾಗರಾಜ ತೇಲಕರ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ತಿಮ್ಮಣ್ಣ ವೆಂಕಣ್ಣನವರ, ಗ್ರಾಮ ಘಟಕದ ಅಧ್ಯಕ್ಷ ಜಗದೀಶ ಸುರವೆ, ಕೃಷ್ಣಾ ಜಾದವ, ಪರಸಪ್ಪ ಶೆಟ್ಟರ, ಕುಮಾರ ಶಿರಗೇರಿ, ರಾಜು ನಾಯಕ, ಶಂಕರ ಚಲವಾದಿ, ರವಿ ಹರಿಜನ, ಸಿದ್ದು ವಾಲ್ಮೀಕಿ, ಶಂಕರಗೌಡ ಇದ್ದರು.