ಬಸ್ ಸೌಲಭ್ಯ ಕಲ್ಪಿಸಿ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 20
ತಾಲೂಕಿನ ಬೆಳಗಾಲಪೇಟೆ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಫೇಡರೇಶನ್ ವತಿಯಿಂದ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅನಂತರ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದರು. ಪ್ರತಿಭಟನೆಯಿಂದ ಕೆಲಕಾಲ ಸಂಚಾರ ವ್ಯತ್ಯಯವಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹಾವೇರಿ ಜಿಲ್ಲಾ ಎಸ್‌ಎಫ್‌ಐ ಉಪಾಧ್ಯಕ್ಷ ಸುಭಾಸ ಮಾದರ, ತಾಲೂಕಿನ ಗಡಿಭಾಗವಾಗಿರುವ ಬೆಳಗಾಲಪೇಟೆ ಗ್ರಾಮಕ್ಕೆ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್‌ಗಳು ಸರಿಯಾಗಿ ಬರುತ್ತಿಲ್ಲ. ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಸಂಚರಿಸಲು ಬಸ್ ತೀರಾ ಅಗತ್ಯವಿದ್ದು, ಆ ಬಸ್ ವೇಳೆಗೆ ಸರಿಯಾಗಿ ಬರುತ್ತಿಲ್ಲ. ಹಾನಗಲ್ಲಿನಿಂದ ಹುಬ್ಬಳ್ಳಿಗೆ ಸಂಚರಿಸುವ ಪ್ರತಿ ಸಾರಿಗೆ ಬಸ್‌ಗಳು ಬೆಳಗಾಲಪೇಟೆ ಗ್ರಾಮಕ್ಕೆ ಬಂದು ಹೋಗಬೇಕು. ಇದು ವಿದ್ಯಾರ್ಥಿಗಳ ಓಡಾಟಕ್ಕೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮನದಟ್ಟು ಮಾಡಿದರೂ ಬಸ್‌ಗಳ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಹಾನಗಲ್ಲ ಬಸ್ ಡಿಪೋದಲ್ಲಿ ಶೇ. 75ರಷ್ಟು ಬಸ್‌ಗಳು ಕೆಟ್ಟು ನಿಂತಿವೆ. ಕೂಡಲೇ ದುರಸ್ತಿ ಮಾಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹಾನಗಲ್ಲ ಪಿಎಸ್‌ಐ ಮಹದೇವ ಯಲಿಗಾರ ಮತ್ತು ಹಾನಗಲ್ಲ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರು, ಬೇಡಿಕೆಗಳನ್ನು 10 ದಿನಗಳ ಒಳಗೆ ಈಡೇರಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಬೆಳಗಾಲಪೇಟೆ ಎಸ್‌ಎಫ್‌ಐ ಹೋಬಳಿ ಘಟಕದ ಕಾರ್ಯದರ್ಶಿ ಮಂಜುನಾಥ ಕುಬಸದ, ಮುಖಂಡರಾದ ಕುಮಾರ ಹರಿಜನ, ಹನುಮಂತ ಆರ್.ಟಿ., ಸಾಧಿಕ್ ಮತ್ತೂರ್, ಆನಂದ ಉರಣಕರ್, ದೇವರಾಜ ಕಟ್ಟಿಮನಿ, ವಿನಾಯಕ ಪಟ್ಟಣಶೆಟ್ಟಿ, ಶ್ರೀಕಾಂತ ಶಿಗ್ಗಾಂವಿ, ಶಿವರಾಜ ನೀಲಪ್ಪನವರ, ಪ್ರಸನ್ನ ಹನಕನಹಳ್ಳಿ, ಕೋಟ್ರೇಶ ಪವಾಡ, ಓಂಕಾರ ಉರಣಕರ, ದೀಪಕ ಕುಂಟೆ, ಯೋಗೇಶ ಶಿಗ್ಗಾಂವಿ, ಮೆಹಬೂಬ್ ನದಾಫ್, ಪ್ರಶಾಂತ ಸಿ. ಪಾಲ್ಗೊಂಡಿದ್ದರು.