ಸುದ್ದಿ ಸಂಕ್ಷೇಪ
ಕಬಡ್ಡಿ: ಜುಲ್ಫಿಕರ್ ಆಯ್ಕೆ
ಬ್ಯಾಡಗಿ: ಬಿಹಾರದ ಪಾಟ್ನಾದಲ್ಲಿ ಜ. 22ರಿಂದ ಆರಂಭವಾಗಲಿರುವ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಜುಲ್ಫೀಕರ್ ಮೆಡ್ಲೇರಿ ಆಯ್ಕೆಯಾಗಿದ್ದಾರೆ. ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಜ. 20ರಂದು ಪ್ರಕಟಿಸಿದ ಪುರುಷರ ತಂಡದಲ್ಲಿ ಜುಲ್ಫಿಕರ್ ಸ್ಥಾನ ಪಡೆದಿದ್ದಾರೆ. 20 ದಿನಗಳಿಂದ ಬೆಂಗಳೂರಿನ ಎಂಇಜಿ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ನಡೆದಿತ್ತು. ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ, ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ಶಾಲೆ ಹಾಗೂ ರಾಣಿಬೆನ್ನೂರಿನ ಲಯನ್ಸ್ ಕ್ಲಬ್ನಲ್ಲಿ ನಡೆದ ಶಿಬಿರ ಹಾಗೂ ಪಂದ್ಯಾವಳಿಗಳಲ್ಲಿ ಜುಲ್ಫಿಕರ್ ಪಾಲ್ಗೊಂಡು, ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪಡೆದಿದ್ದಾರೆ. ಕಬಡ್ಡಿ ತರಬೇತುದಾರ ಡಾ ಈಶ್ವರ ಅಂಗಡಿ, ಸುಜಯಕುಮಾರ, ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಅಧ್ಯಕ್ಷ ಮಂಜಣ್ಣ ಎಲಿ, ಉಪಾಧ್ಯಕ್ಷ ಕರಬಸಪ್ಪ ಬಳ್ಳಾರಿ, ಪ್ರಕಾಶ ಹಾವೇರಿ, ಖಜಾಂಚಿ ಗಂಗಣ್ಣ ಎಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ, ಸಹಕಾರ್ಯದರ್ಶಿ ನಾಗರಾಜ ದೇಸೂರ, ತೀರ್ಪುಗಾರರ ಮಂಡಳಿ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಸದಸ್ಯರಾದ ಜಿನ್ನಾ ಹಲಗೇರಿ, ಎ.ಟಿ. ಪೀಠದ, ಎಂ.ಆರ್. ಕೋಡಿಹಳ್ಳಿ, ವಿ.ಆರ್. ಬಾಸೂರ, ಎ.ಬಿ. ಕಲ್ಮನಿ, ಕುಮಾರಸ್ವಾಮಿ ಹಿರೇಮಠ, ನಿಂಗಪ್ಪ ಕೋಡಿಹಳ್ಳಿ ಅಭಿನಂದಿಸಿದ್ದಾರೆ.
ಫೆ. 19: ದಿಂಗಾಲೇಶ್ವರ ಶ್ರೀಗಳ ಪಾದಯಾತ್ರೆ
ಬ್ಯಾಡಗಿ: ಬಾಳೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಫೆ. 19ರಂದು ಮುಂಜಾನೆ 9 ಗಂಟೆಗೆ ಪಟ್ಟಣದಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿಗಾಗಿ ಪಾದಯಾತ್ರೆ ನಡೆಸಲಿದ್ದಾರೆ. ನೆಹರು ನಗರದಿಂದ ಆರಂಭವಾಗುವ ಪಾದಯಾತ್ರೆ ನಗರದ ವಿವಿಧೆಡೆಗಳಲ್ಲಿ ಸಂಚರಿಸಲಿದೆ. ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಹಾನಗಲ್ಲ ಲಿಂ. ಕುಮಾರೇಶ್ವರ ಶ್ರೀಗಳ ಜಯಂತಿ ಉತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಇನ್ನಿತರ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸುವರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಸವರಾಜ ಶಿವಣ್ಣನವರ ವಹಿಸಲಿದ್ದಾರೆ. ಮಾಜಿ ಶಾಸಕ ಸುರೇಶಗೌಡ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಮಹದೇವಪ್ಪ ದೇಸೂರ, ಕನ್ನಪ್ಪ ಕೊಪ್ಪದ, ವರ್ತಕ ಉಮೇಶ ಬೆಟಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ ಉಪಸ್ಥಿತರಿರುವುದಾಗಿ ಪ್ರಕಟಣೆ ತಿಳಿಸಿದ
ಪೇಯದಿಂದ ಸಾಯಬೇಡಿ
ಹಾನಗಲ್ಲ: ಮದ್ಯವ್ಯಸನದಿಂದ ಮುಕ್ತರಾಗಿ, ಕುಟುಂಬವನ್ನು ರಕ್ಷಿಸಿ. ಸಮಾಜದಲ್ಲಿ ಗೌರವ ಉಳಿಸಿಕೊಳ್ಳಿ. ಪೇಯದಿಂದ ಸಾಯಬೇಡಿ ಎಂಜು ಶಾಸಕ ಮನೋಹರ ತಹಸೀಲ್ದಾರ್ ಕರೆ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಆರಂಭವಾದ ಮದ್ಯವರ್ಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದೆಲ್ಲೆಡೆ ಪಾನ ನಿಷೇಧ ಜಾರಿಯಾಗಬೇಕು. ದೇಶದ ಆಸ್ತಿಯಾದ ಯುವಕರು ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಬೇಕು. ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಯೋಜನಾಧಿಕಾರಿ ಕೆ. ಸದಾನಂದ, ಮೇಲ್ವಿಚಾರಕ ಧನಂಜಯ, ಸದಸ್ಯ ಅಶೋಕ ಕಲಾಲ ಇದ್ದರು.
ಮಕ್ಕಳನ್ನು ಉತ್ತಮ ಪ್ರಜೆಯಾಗಿಸಿ: ಮೂಲಿಮನಿ
ಶಿಗ್ಗಾಂವಿ: ಪಾಲಕರು ತಮ್ಮ ಮಕ್ಕಳನ್ನು ದಿನನಿತ್ಯ ಶಾಲೆಗೆ ಕಳುಹಿಸಿ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸಬೇಕು ಎಂದು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಸಿ.ಪಿ. ಮೂಲಿಮನಿ ಹೇಳಿದರು. ಕುಂದೂರ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಉಚಿತ ಸೈಕಲ್ ವಿತರಿಸಿ, ಮಾತನಾಡಿದರು. ಶಾಲೆಯೊಡನೆ ಪಾಲಕರು ಉತ್ತಮ ಸಂಬಂಧ ಇಟ್ಟುಕೊಂಡು ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪಾಲಕರ ಹೊಣೆ ಸಾಕಷ್ಟಿದೆ. ಸರ್ಕಾರದ ಯೋಜನೆಯ ಉಪಯೋಗ ಪಡೆಯಲು ಶ್ರಮಿಸಬೇಕಾದ ಅಗತ್ಯವಿದೆ ಎಂದರು. ವರ್ಗಾವಣೆಗೊಡ ಶಿಕ್ಷಕ ಡಿ.ಎಫ್. ಮ್ಯಾಗೇರಿ ಅವರನ್ನು ಸನ್ಮಾನಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಚಮನ್ಸಾಬ್ ದಿವಾನ್ದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹ ಶಿಕ್ಷಕಿ ಮಹರ್ತಾಜ್ ವಂದಿಸಿದರು.