ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಿರೇಕೆರೂರಿನಲ್ಲಿ ಗೋವಿನಜೋಳ ಖರೀದಿ ಸ್ಥಗಿತ: ರೈತರಿಂದ ಹೆದ್ದಾರಿ ತಡೆ

Mainashree
Updated On : 21 Jan 2014, 12:17 pm

ಹಿರೇಕೆರೂರು: ಅತಿವೃಷ್ಟಿಯಿಂದಾಗಿ ಗೋವಿನಜೋಳದ ಇಳುವರಿ ಕಡಿಮೆ ಬಂದಿದೆ. ಈ ಸ್ಥಿತಿಯಲ್ಲೂ ಸರ್ಕಾರ ಬೆಂಬಲ ಬೆಲೆ ಕೇಂದ್ರದಲ್ಲಿ ಅತಿ ಕಡಿಮೆ ದರದಲ್ಲಿ ಗೋವಿನಜೋಳ ಖರೀದಿಸುತ್ತಿದೆ. ಈಗ ಅದನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಪಟ್ಟಣದ ಜಿ.ಬಿ. ಶಂಕರ ರಾವ್ ವೃತ್ತದಲ್ಲಿ ಮೂರು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.
ರೈತರು ಶಿವಮೊಗ್ಗ ಹಾಗೂ ರಾಣಿಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗಳಿಗೆ ತಮ್ಮ ಟ್ರ್ಯಾಕ್ಟರ್‌ಗಳನ್ನು ಅಡ್ಡವಿಟ್ಟಿದ್ದರಿಂದ ಸಂಚಾರಕ್ಕೆ ತಡೆಯಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಜನತೆ  ಪರದಾಡಿದರು.
ವಾಹನಗಳಲ್ಲಿ ಗೋವಿನಜೋಳ ತಂದು ಸರದಿಯಲ್ಲಿ ಕಾಯುತ್ತಿದ್ದೇವೆ. ಖರೀದಿಸಿಲ್ಲ. ಮಧ್ಯವರ್ತಿಗಳು ಪ್ರಭಾವ ಬಳಸಿ, ರೈತರ ಹೆಸರಿನಲ್ಲಿ ನಿರಂತರ ಮಾರಾಟ ಮಾಡುತ್ತಿದ್ದಾರೆ. ರೈತರು ಬಂದಾಗ ಮುನ್ಸೂಚನೆ ನೀಡದೆ, ಖರೀದಿ ಪ್ರಕ್ರಿಯೆ ನಿಲ್ಲಿಸಿದ್ದು ನ್ಯಾಯವೇ ಎಂದು ಪ್ರಶ್ನಿಸಿದರು.
ಶಾಸಕ ಭೇಟಿ: ಸುದ್ದಿ ತಿಳಿದ ಶಾಸಕ ಯು.ಬಿ. ಬಣಕಾರ ಸ್ಥಳಕ್ಕೆ ಭೇಟಿ ನೀಡಿ, ರೈತರನ್ನು ಸಮಾಧಾನಪಡಿಸಿದರು. ಉಗ್ರಾಣ ಅಧಿಕಾರಿಗಳ ಜತೆ ಚರ್ಚಿಸಿ, ಖರೀದಿ ಪ್ರಕ್ರಿಯೆ ಪುನಃ ಪ್ರಾರಂಭಿಸುವಂತೆ ಮಾಡಿದರು. ಇದರಿಂದ ತೃಪ್ತರಾದ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು. ಪ್ರತಿಭಟನೆಯಲ್ಲಿ ರೈತರಾದ ಹಾಲಪ್ಪ ಪ್ಯಾಟಿ, ಮಾಲತೇಶ ಕಡೇಮನಿ, ರಾಜು ಮಡಿವಾಳರ, ಏಕಪ್ಪ ತಾವರಗೇರ, ಪ್ರದೀಪ ಬಳ್ಳಿಗಾವಿ, ಶೇಖಪ್ಪ ಇಂಗಳಗೊಂದಿ, ರಾಜು ಅಗಸರ, ಗುರುಶಾಂತ ಲಿಂಗನಗೌಡ್ರ, ಉಮೇಶ ಕೊಳ್ಳಿ, ಮಹೇಶ ಗುಂಡಗಟ್ಟಿ, ಹನುಮಂತ ಗುಂಡಗಟ್ಟಿ, ಹೂವಪ್ಪ ಅಜ್ಜಪ್ಪಗೌಡ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement