80 ಮದ್ಯಮುಕ್ತರು ನವಜೀವನಕ್ಕೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ.21
ಕುಡಿತದ ಫಲ, ಕೈತುಂಬ ಸಾಲ; ಬಾಳು ಬೇಕು, ಅಮಲು ಬೇಡ; ಅಮಲಿಲ್ಲದ ಜೀವನ, ಬಾಳೊಂದು ನಂದನ - ಹತ್ತಾರು ಘೋಷಣೆಗಳ ಫಲಕ ಹಿಡಿದು 80 ಮದ್ಯಮುಕ್ತರು ನವಜೀವನಕ್ಕೆ ಕಾಲಿಟ್ಟರು.
ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಮುಂತಾದ ಸಂಘಟನೆಗಳ ಸಹಯೋಗದಲ್ಲಿ 9 ದಿನಗಳ ಕಾಲ ನಡೆದ 658ನೇ ಮದ್ಯವರ್ಜನ ಶಿಬಿರ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಈವರೆಗೆ 40 ಸಾವಿರಕ್ಕೂ ಹೆಚ್ಚು ಜನ ಮದ್ಯಮುಕ್ತರಾಗಿದ್ದು ದೊಡ್ಡ ಸಾಧನೆ, ಪುಣ್ಯ ಕಾರ್ಯ.
ಜ. 13ರಂದು ಶಿಬಿರ ಆರಂಭವಾದ ಮೇಲೆ ಎರಡು ದಿನಗಳ ಕಾಲ ಶಿಬಿರಾಧಿಕಾರಿ ನಾಗೇಶ್ ಹಾಗೂ ಸ್ವಯಂಸೇವಕರು ಸಾಹಸದಿಂದ ಶಿಬಿರಾರ್ಥಿಗಳನ್ನು ಸಮಚಿತ್ತಕ್ಕೆ ತಂದರು. ಶಿಬಿರದಿಂದ ಓಡಿಹೋಗಲು ಯತ್ನಿಸಿದವರೂ ಇದ್ದರು. ಹೆಂಡ್ತಿ ಇಲ್ಲಿ ನನ್ನ ಕೊಂಡವಾಡದಾಗ ಹಾಕಿ ಹೋಗ್ಯಾಳ್ರೀ ಎಂದು ಅವಲತ್ತುಕೊಂಡಿದ್ದ ಶಿಬಿರಾರ್ಥಿ, ಕೊನೆಯ ದಿನ ಮಾತ್ರ ತಮ್ಮಲ್ಲಾದ ಪರಿವರ್ತನೆಗೆ ಭಗವಂತನ ಕೃಪೆಯೇ ಕಾರಣ ಎಂದು ಕಣ್ಣೀರಿಟ್ಟರು.
ಸಾರಾಯಿ ನೆನಪೂ ಆಗದಂತೆ...
ಎಂಟು ದಿನಗಳಲ್ಲಿ ಪ್ರಾತರ್ವಿಧಿಯ ಬಳಿಕ ವ್ಯಾಯಾಮ, ಶ್ರಮದಾನ, ಉಪಾಹಾರದ ಜತೆಗೆ ವ್ಯಸನಮುಕ್ತರಿಂದ ಅನುಭವ ಹಂಚಿಕೆ, ಕೌಟುಂಬಿಕ ಸಲಹೆ, ಮಧ್ಯಾಹ್ನ ಊಟ, ಸಾಂಸ್ಕೃತಿಕ ಚಟುವಟಿಕೆ, ಗುಂಪು ಚರ್ಚೆ, ವೈಯಕ್ತಿಕ ಸಲಹೆ, ಭಯನೆ, ಭೋಜನ - ಹೀಗೆ ಸಾರಾಯಿ ನೆನಪೂ ಆಗದಂತೆ ಇಡೀ ದಿನ ಕಳೆಯುವಂತೆ ಮಾಡಲಾಗಿತ್ತು.
ವೈದ್ಯಾಧಿಕಾರಿಗಳಾದ ಡಾ ಶಶಿಕಲಾ ಹಾಗೂ ಡಾ ಸತೀಶ್ ಆರೋಗ್ಯ ತಪಾಸಣೆ ಮಾಡಿ, ಅಗತ್ಯ ಔಷಧೋಪಚಾರ ನೀಡಿದರು. ಆದರೆ ಮದ್ಯವ್ಯಸನ ಬಿಡಿಸಲು ಯಾವ ಔಷಧಿಯನ್ನೂ ಕೊಡಲಿಲ್ಲ. ಸಾಹಿತಿ ಮಾರುತಿ ಶಿಡ್ಲಾಪುರ, ಕಲಾವಿದ ರವಿ ಲಕ್ಷ್ಮೇಶ್ವರ, ಡಾ ಈಶ್ವರ ಮಾಳೋದೆ, ವಿಷ್ಣು ಪಟಗಾರ, ಹನುಮಗೌಡ ಪಾಟೀಲ, ಅಶೋಕ ಕೊಂಡ್ಲಿ, ಡಾ ಪ್ರಕಾಶ ಹೊಳೇರ ಸಂವಾದ ನಡೆಸಿ, ಮಾರ್ಗದರ್ಶನ ಮಾಡಿದರು. ಯಮುನಾ ಕೊನೇಸರ, ಡಾ ಸಿ. ಕೊಟ್ರೇಶ, ಭಾರತಿ ದೊಡ್ಡಮನಿ, ಪ್ರಾಚಾರ್ಯ ಪ್ರಸನ್ನಕುಮಾರ, ಸಾವಿತ್ರಿ ಹೆಗಡೆ, ವಿ. ಮಮತಾ, ಬಿ.ಆರ್. ಶೆಟ್ಟರ ಕುಟುಂಬದ ಸದಸ್ಯರಿಗೆ ಸಲಹೆ ನೀಡಿದರು.
ಆರೋಗ್ಯಾಧಿಕಾರಿ ಡಾ ರಾಜೇಂದ್ರ ಗೊಡ್ಡೆಮ್ಮಿ, ನ್ಯಾಯವಾದಿಗಳಾದ ರವಿ ವಡೆಯರ, ರವಿಬಾಬು ಪೂಜಾರ, ರವಿರಾಜ ಕಲಾಲ, ಗಣ್ಯರಾದ ಕಸ್ತೂರವ್ವ ವಡ್ಡರ, ಅನಿತಾ ಶಿವೂರ, ವಿಜಯಾ ಹಿರೇಮಠ, ಅಶೋಕ ಆರೆಗೊಪ್ಪ, ಯಲ್ಲಮ್ಮ ಕಂಚಿಗೊಲ್ಲರ, ಟಿ.ಎನ್. ಕಾಮನಹಳ್ಳಿ, ಹಸೀನಾ ಬೇಗಂ, ರಾಜೇಶ್ವರಿ ಪಾಂಡುರಂಗಿ ಸಕ್ರಿಯವಾಗಿ ತೊಡಗಿಸಿಕೊಂಡರು. ಯೋಜನಾಧಿಕಾರಿ ಕೆ. ಸದಾನಂದ, ಮೇಲ್ವಿಚಾರಕ ಧನಂಜಯ ಮುಂತಾದವರು ಧೈರ್ಯ ತುಂಬಿದ್ದರಿಂದ ಓಡಲು ನಿರ್ಧರಿಸಿದ್ದ ವ್ಯಸನಿಗಳು, ಕೊನೆಗೆ ತಮ್ಮ ವ್ಯಸನವನ್ನೇ ಓಡಿಸಿದರು.
ಮದ್ಯಾಸುರನ ದಹನ
ಶಿಬಿರ ಮುಕ್ತಾಯದ ಮುನ್ನಾದಿನ ಮದ್ಯಾಸುರನ ಪ್ರತಿಕೃತಿ ನಿರ್ಮಿಸಿ, ಸಾರಾಯಿ ಸೀಸೆಗಳಿಂದ ಅಲಂಕರಿಸಿ, ನಗರದಲ್ಲಿ ಶವಯಾತ್ರೆ ಮಾಡಿ, ಸಂಸ್ಕಾರ ನಡೆಸಲಾಯಿತು. ಇದೊಂದು ಪ್ರತೀಕದಂತಿತ್ತು.
ವಿವೇಕ ಜಾಗೃತ ಬಳಗ, ಯೋಗ ಶಿಕ್ಷಕ ಗುರುರಾಜ ಜೋಶಿ, ಸಂಗೀತ ಶಿಕ್ಷಕ ನರಸಿಂಹ ಕೋಮಾರ, ವಿಶ್ವನಾಥ ಹಿರೇಮಠ ಮುಂತಾದವರು ಭಜನೆಗಳ ಮೂಲಕ ಶಿಬಿರಾರ್ಥಿಗಳ ಮನಸ್ಸನ್ನು ಸಾತ್ವಿಕತೆಯತ್ತ ಕೊಂಡೊಯ್ದರು. ಶಿಬಿರಾರ್ಥಿಗಳಿಗೂ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಿಬಿರದಲ್ಲಿ ವಿವಾಹಿತರು, ಅವಿವಾಹಿತರು, ಕೃಷಿಕರು, ನೌಕರರು, ಕಾರ್ಮಿಕರು, ಬ್ಯಾಂಕ್ ಉದ್ಯೋಗಿ, ಕರಕುಶಲ ಕರ್ಮಿಗಳು, ವಾಹನ ಚಾಲಕರು ಇದ್ದರು.
ಶಿಬಿರದ ನಿರ್ದೇಶಕರಾಗಿ ಬೆಳ್ತಂಗಡಿ ಜನಜಾಗೃತಿ ವೇದಿಕೆಯ ವಿವೇಕ್ ವಿನ್ಸೆಂಟ್ ಪಾಯಸ್, ಆರೋಗ್ಯ ಸಹಾಯಕಿ ಪ್ರಶೀಲಾ ಡಿ'ಸೋಜಾ, ಶಾಸಕ ಮನೋಹರ ತಹಶೀಲ್ದಾರ, ಮಾಜಿ ಸಚಿವ ಸಿ.ಎಂ. ಉದಾಸಿ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ ನೈತಿಕ ಬೆಂಬಲ ನೀಡಿದ್ದಾರೆ. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಕೆ.ಎಲ್. ದೇಶಪಾಂಡೆ, ಅಶೋಕ ಕಲಾಲ, ರಾಜೂ ನಂದಿ, ರಾಮು ಯಳ್ಳೂರ, ಎಚ್. ರವಿಕುಮಾರ, ಆರತಿ ಪಾಟೀಲ, ಸುಧಾ ಹಕ್ಕಿ ಸಹಕಾರ ಸ್ಮರಣೀಯವಾಗಿತ್ತು.
ಮೊದಲ ಮೆಟ್ಟಿಲು ಜಾರಿದರೆ...
ಸಪ್ತ ವ್ಯಸನಗಳಲ್ಲಿ ಮದ್ಯಪಾನ ಮೊದಲ ಮೆಟ್ಟಿಲು. ಅದನ್ನು ಜಾರಿದರೆ ಉಳಿದೆಲ್ಲವೂ ಜಾರಿದಂತೆಯೇ ಎಂಬ ಡಾ ವೀರೇಂದ್ರ ಹೆಗ್ಗಡೆ ಅವರ ಸಂದೇಶ ಇಲ್ಲಿ ಪ್ರಸ್ತುತ. ಇಲ್ಲಿಯ 80 ಕುಟುಂಬಗಳಂತೆ ಎಲ್ಲರೂ ವ್ಯಸನ ಮುಕ್ತರಾದರೆ ಬದುಕು ಎಷ್ಟು ಸುಂದರವಾದೀತು ಎಂಬ ಮಾತು ಶಿಬಿರದಲ್ಲಿ ಕೇಳಿಬಂತು.