ಕೇಜ್ರಿವಾಲ್ ಬೆಂಬಲಿಸಿ ಆಪ್ ಧರಣಿ
ಹಾವೇರಿ: ವ್ಯಭಿಚಾರ ಹಾಗೂ ಮಾದಕದ್ರವ್ಯ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಬೆಂಬಲಿಸಿ ನಗರದಲ್ಲಿ ಮಂಗಳವಾರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಾಂಕೇತಿಕ ಧರಣಿ ನಡೆಸಿದರು. ನಗರದ ಮೈಲಾರ ಮಹಾದೇವ ವೃತ್ತದಲ್ಲಿ ಪೊರಕೆ ಹಿಡಿದುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವ್ಯಭಿಚಾರದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ರಾಜಿನಾಮೆ ನೀಡಬೇಕು. ದೆಹಲಿಯಲ್ಲಿ ಪೊಲೀಸ್ ಇಲಾಖೆಯನ್ನು ಸರ್ಕಾರದ ಸುಪರ್ದಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ಆಪ್ ಜಿಲ್ಲಾ ಸಂಚಾಲಕ ಶಿವಾನಂದ ಹಳ್ಳೇರ, ತಾಲೂಕು ಸಂಚಾಲಕ ಲಿಂಗನಗೌಡ್ರ ಅರಳಿಹಳ್ಳಿ, ಶ್ರೀಕಾಂತ ಚರಂತಿಮಠ, ಮೌಲಾಸಾಬ ಅಗಸರ, ರಾಜು ಓಲೇಕಾರ, ಗಂಗಾಧರಯ್ಯ ಮಠದ, ಬಸವರಾಜ ದಸಮನಿ, ಷಹಾಜಿ ಪವಾರ ಇದ್ದರು.
ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆಗೆ ಮುಂದಾಗಿ: ಬೆಕ್ಕೇರಿ
ಹಾವೇರಿ: ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆಗೆ ಒತ್ತು ನೀಡಬೇಕು. ಮೋಸ, ದೌರ್ಜನ್ಯಗಳ ಬಗ್ಗೆ ಎಚ್ಚರವಿರಬೇಕು. ಧರಿಸುವ ಉಡುಪು, ನಡೆದುಕೊಳ್ಳುವ ರೀತಿ, ಹಾವ-ಭಾವಗಳ ಉತ್ತಮವಾಗಿರಬೇಕು ಎಂದು ಹಾವೇರಿ ಶಹರ ಠಾಣೆ ಪಿಎಸ್ಐ ಎಚ್.ಬಿ. ಬೆಕ್ಕೇರಿ ಸಲಹೆ ನೀಡಿದರು.
ಶಿವಲಿಂಗೇಶ್ವರ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ ಸವಿತಾ ಎಸ್. ಹಿರೇಮಠ, ವಿದ್ಯಾರ್ಥಿನಿಯರನ್ನು ಮನೆಯಲ್ಲಿ ತಂದೆ-ತಾಯಿಗಳು ರಕ್ಷಿಸುತ್ತಾರೆ. ಕಾಲೇಜಿನ ಆವರಣದಲ್ಲಿ ನಾವು ರಕ್ಷಿಸಬಹುದು. ಆದರೆ ಉಳಿದ ವೇಳೆ ಆ ಕ್ಷಣಕ್ಕೆ ಬುದ್ಧಿಶಕ್ತಿ ಉಪಯೋಗಿಸಿ ಆತ್ಮರಕ್ಷಣೆ ಮಾಡಿಕೊಳ್ಳಬೇಕು. ದೌರ್ಜನ್ಯವಾಗುತ್ತಿದ್ದರೆ ಉಳಿದ ಎಲ್ಲರೂ ಸ್ಪಂದಿಸಬೇಕು ಎಂದು ಕರೆ ಕೊಟ್ಟರು. ಎನ್ನೆಸ್ಸೆಸ್ ಅಧಿಕಾರಿ ಎಸ್.ಎಚ್. ಸಂಗಾಪುರ ಸ್ವಾಗತಿಸಿದರು. ಬಿ.ಎಂ. ನೇಕಾರ ಮಾತನಾಡಿದರು. ಆರ್.ಎಸ್. ಬಾರಕೇರ ನಿರೂಪಿಸಿದರು. ದಿವ್ಯಾ ಹಂಚಿನಮನಿ ವಂದಿಸಿದರು. ಸುರೇಶ ಪಿ. ಹಿರೇತನದ, ವಿ.ಕೆ. ಹಲಗಣ್ಣನವರ ಇದ್ದರು.
ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಿ: ಪಾಟೀಲ
ಶಿಗ್ಗಾಂವಿ: ಪ್ರತಿಯೊಂದು ಕುಟುಂಬ ಶೌಚಾಲಯ ಉಪಯೋಗಿಸಬೇಕು. ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಅನುದಾನ ನೀಡುತ್ತಿದ್ದು, ಉತ್ತಮವಾದ ಶೌಚಾಲಯ ಕಟ್ಟಿಸಿಕೊಳ್ಳಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎನ್.ಸಿ. ಪಾಟೀಲ ಹೇಳಿದರು.
ಕುನ್ನೂರಿನ ಅಸೋಹ ತರ್ಲಘಟ್ಟ, ಮಮದಾಪುರ, ಕುನ್ನೂರ, ಗ್ರಾಪಂ ಸಭಾಭವನದಲ್ಲಿ ನಿರ್ಮಲ ಭಾರತ ಅಭಿಯಾನದ ವಿಶೇಷ ಸಭೆಯಲ್ಲಿ ಮಾತನಾಡಿದರು. ಸರ್ಕಾರ ಸ್ವಚ್ಛತೆಗಾಗಿ, ಶೌಚಾಲಯ ನಿರ್ಮಿಸಲೆಂದು ಅನುದಾನ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿ ಕುಟುಂಬ ಶೌಚಾಲಯ ಹೊಂದಬೇಕು ಎಂದರು. ಗ್ರಾಪಂ ಅಧ್ಯಕ್ಷ ಗೋವಿಂದ ಸಿ. ದುಂಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಜಯದೇವ ಅಗಡಿ, ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷ ನೀಲಕಂಟಗೌಡ ಬ್ಯಾಹಟ್ಟಿ, ಗ್ರಾಪಂ ಉಪಾಧ್ಯಕ್ಷೆ ಎಫ್.ಎಚ್. ಕಲ್ಲೇದಾರ, ವಿ.ವೈ. ಶೆಟ್ಟೆಪ್ಪನವರ, ಬಸಮ್ಮ ಗುಣೋಜಿ, ಇದ್ದರು. ಪಿಡಿಒ ಪ್ರಕಾಶ ಔಂದಕರ ಪ್ರಸ್ತಾವಿಕವಾಗಿ ಮಾತನಾಡಿದರು. ಆರ್.ಎಸ್. ಪಾಟೀಲ ನಿರೂಪಿಸಿದರು.
ನಿರ್ಮಿತಿ ಕೇಂದ್ರ ಕಾಮಗಾರಿ ಕಳಪೆ: ಕರವೇ ಆರೋಪ
ಶಿಗ್ಗಾಂವಿ: ತಾಲೂಕಾದ್ಯಂತ ನಿರ್ಮಿತಿ ಕೇಂದ್ರದವರು ನಿರ್ಮಿಸುತ್ತಿರುವ ಕಾಮಗಾರಿಗಳು ಸಂಪೂರ್ಣ ಕಳಪೆಮಟ್ಟದಿಂದ ಕೂಡಿವೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ ಹಾಗೂ ಕಾರ್ಯಕರ್ತರು ತಹಸೀಲ್ದಾರ್ ಎಸ್.ಎ. ಚೌಗುಲೆ ಅವರಿಗೆ ಮನವಿ ಸಲ್ಲಿಸಿ ಶೀಘ್ರ ಕಾಮಗಾರಿಗಳ ಸಮೀಕ್ಷೆ ನಡೆಸಿ ತಕ್ಷಣ ಕಳಪೆ ಕಾಮಗಾರಿಗಳನ್ನು ತಡೆದು ಕಾರಣೀಕರ್ತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಮನವಿಯಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಿಸಿರುವ ಹಾಗೂ ನಿರ್ಮಿಸುತ್ತಿರುವ ಅಂಗನವಾಡಿ ಕಟ್ಟಡಗಳು, ಪಶು ಚಿಕಿತ್ಸಾಲಯ ಇನ್ನಿತರ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ. ಈಗಾಗಲೇ ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿದ್ದು, ಶಿಗ್ಗಾಂವಿ ನಗರದಲ್ಲಿ ನಿರ್ಮಿತಿ ಕೇಂದ್ರದವರು ಕಟ್ಟುತ್ತಿರುವ ರು. 1 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ತಾಲೂಕು ಕ್ರೀಡಾಂಗಣವೂ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದರು.
ಕ್ರೀಡಾಂಗಣ ಕುರಿತು ಪತ್ರಿಕೆಯಲ್ಲಿ ವರದಿಯಾದರೂ ಕ್ರಮ ಜರುಗಿಸಿಲ್ಲ. ಕಳಪೆ ಕಾಮಗಾರಿಗೆ ಕಾರಣೀಕರ್ತರಾದ ಗುತ್ತಿಗೆದಾರರ ವಿರುದ್ಧ ಸರ್ಕಾರ ಕ್ರಮ ಜರುಗಿಸಿ ಈ ಕುರಿತು ಸರ್ಕಾರ ಗ್ರಾಮೀಣ ಹಾಗೂ ನಗರ ಪ್ರದೇಶದ ಕ್ರೀಡಾಪಟುಗಳಿಗೆ ಅನುಕೂಲ ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಂಜುನಾಥ ಓಲೇಕಾರ ಎಚ್ಚರಿಕೆ ನೀಡಿದ್ದಾರೆ.
ಸಂತೋಷ ಪಾಟೀಲ, ನಂದೀಶ ಲಂಡೆತ್ತಿನವರ, ಮರಿಯಪ್ಪ ಮಾದರ, ಬಸಲಿಂಗಪ್ಪ ನರಗುಂದ, ಮಹೇಶ ತಳವಾರ, ತಿಪ್ಪಣ್ಣ, ಪರಶುರಾಮ ಕಳಸದ, ಮುತ್ತು ಕಾಮನಳ್ಳಿ ಉಪಸ್ಥಿತರಿದ್ದರು.
ಇಂದು ಗಾಡಾ ಓಡಿಸುವ ಸ್ಪರ್ಧೆ
ಹಾವೇರಿ: ಕರ್ಜಗಿ ಗ್ರಾಮದಲ್ಲಿ ಜೈ ಹನುಮಾನ್ ಯುವಕ ಮಂಡಳಿ ಜ. 22ರಂದು ಬೆಳಗ್ಗೆ 8ರಿಂದ ಸಂಜೆ 6ರತನಕ ಭಾರಿ ಗಾಡಾ ಓಡಿಸುವ ಸ್ಪರ್ಧೆ ಏರ್ಪಡಿಸಿದೆ. ಪ್ರಥಮ ಬಹುಮಾನ ಬೈಕ್, ದ್ವಿತೀಯ 10 ಗ್ರಾಂ ಬಂಗಾರ, ತೃತೀಯ ಕಬ್ಬಿಣದ ಚಕ್ಕಡಿ ಸೇರಿದಂತೆ 30 ಬಹುಮಾನ ಇವೆ ಎಂದು ಸಮಿತಿ ತಿಳಿಸಿದೆ.
ಡಾಲ್ ಮೇಕಿಂಗ್ ತರಬೇತಿ
ಹಾವೇರಿ: ಮಂಜುನಾಥ ನಗರದ ಸಾಯಿಬಾಬಾ ಡಾಲ್ ಮೇಕಿಂಗ್ ತರಬೇತಿ ಕೇಂದ್ರದ ವತಿಯಿಂದ ಜ. 24 ಮತ್ತು 25ರಂದು ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಡಾಲ್ ಮೇಕಿಂಗ್ ತರಬೇತಿ ಏರ್ಪಡಿಸಲಾಗಿದೆ. ಆಸಕ್ತರು ಮೊ. 8884232151 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ವಿದ್ಯುತ್ ವ್ಯತ್ಯಯ
ಹಾವೇರಿ: ತಾಲೂಕಿನ ಗುತ್ತಲ 110 ಕೆವಿ ವಿದ್ಯುತ್ ವಿತರಣ ಕೇಂದ್ರದಿಂದ ಸರಬರಾಜಾಗುವ ಹಾವನೂರ, ನೀರು ಸರಬರಾಜು, ಗುತ್ತಲ ತಾಂಡಾ, ನೆಗಳೂರ ಫೀಡರ್ಗಳಲ್ಲಿ ಜ. 23ರಂದು ದುರಸ್ತಿ ಕಾಮಗಾರಿ ಇರುವ ಕಾರಣ ಅಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಹಾವೇರಿ ವಿಭಾಗದ ಕಾರ್ಯ ಮತ್ತು ಪಾಲನೆ ವಿಭಾಗದ ಕಾ.ನಿ. ಅಭಿಯಂತ ಓ.ಎಸ್. ಶಶಿಧರ ವಿನಂತಿಸಿದ್ದಾರೆ.
ಶುದ್ಧ ನೀರನ್ನು ಪೂರೈಸಲು ಆಗ್ರಹ
ಹಿರೇಕೆರೂರು: ಹುಲ್ಲತ್ತಿ ಗ್ರಾಮದ 2ನೇ ವಾರ್ಡಿನಲ್ಲಿ ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು 30 ವರ್ಷಗಳ ಹಿಂದೆ ನಿರ್ಮಾಣವಾದ ನೀರಿನ ಟ್ಯಾಂಕ್ ಶೀಥಿಲಗೊಂಡಿದ್ದು, ಈ ಟ್ಯಾಂಕಿನ ನೀರನ್ನು ಜನರು ಕುಡಿಯುವುದರಿಂದ ಅನಾರೋಗ್ಯಕ್ಕೆ ಇಡಾಗುತ್ತಿದ್ದಾರೆ. ತಕ್ಷಣ ಶುದ್ಧ ನೀರನ್ನು ಪೂರೈಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 2 ತಿಂಗಳಿಂದ ಬೀದಿ ದೀಪಗಳಿಲ್ಲದೇ ರಾತ್ರಿ ವೇಳೆ ಜನರು ಓಡಾಡುವುದಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಸರ್ಕಾರದಿಂದ ಮಂಜೂರಾಗಿ ಹೊಸದಾಗಿ ನಿರ್ಮಾಣವಾದ ಮನೆಗಳಿಗೆ ಅನೇಕ ಬಾರಿ ಅರ್ಜಿಗಳನ್ನು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆವೆ. ಇದಕ್ಕೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಊರ ನಾಗರಿಕರು ಹಾಗೂ ರೈತ ಸಂಘದವರು ಜತೆಗೂಡಿ ಜ. 25ರಂದು ಬೆಳಗ್ಗೆ 10.30ಕ್ಕೆ ಗ್ರಾಪಂಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ರಾಘವೇಂದ್ರ ಹಾದ್ರಿಹಳ್ಳಿ, ಹನುಮಂತಪ್ಪ ದೀವಿಗಿಹಳ್ಳಿ, ಬಸವಣ್ಣೆಪ್ಪ ಎಲಿಗಾರ, ನವೀನಕುಮಾರ ಬೆನ್ನೂರು, ರಾಜು ಕಮ್ಮಾರ, ತಿರುಪತಿ ಹಿರೇಮೊರಬ ತಿಳಿಸಿದ್ದಾರೆ.
ಮೆಕ್ಕೆಜೋಳ ಬಣವೆಗೆ ಬೆಂಕಿ
ಹಾವೇರಿ: ಮೆಕ್ಕೆಜೋಳದ ಬಣವೆಗೆ ಬೆಂಕಿ ತಗುಲಿ ಸ್ಥಳದಲ್ಲಿದ್ದ ಲಾರಿ ಹಾಗೂ ಅಪಾರ ಪ್ರಮಾಣದ ಮೆಕ್ಕೆಜೋಳ ಆಹುತಿಯಾದ ಘಟನೆ ಕರ್ಜಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಗ್ರಾಮದ ಬಯಲು ಜಾಗದಲ್ಲಿ ಹತ್ತಾರು ರೈತರು ಮೆಕ್ಕೆಜೋಳದ ತೆನೆಗಳನ್ನು 20ಕ್ಕೂ ಹೆಚ್ಚು ಬಣವೆ ಹಾಕಿ ಶೇಖರಿಸಿಟ್ಟಿದ್ದರು. ಮೆಕ್ಕೆಜೋಳದ ಚೀಲಗಳನ್ನು ಸಾಗಿಸಲು ಸ್ಥಳಕ್ಕೆ ಬಂದಿದ್ದ ಲಾರಿಯನ್ನು ಚಾಲೂ ಮಾಡುವಾಗ ಹೊರಬಿದ್ದ ಕಿಡಿ ಮೆಕ್ಕೆಜೋಳದ ರವದಿಗೆ ತಗುಲಿದೆ. ಜೋರಾಗಿ ಬೀಸಿದ ಗಾಳಿಯಿಂದ ಬೆಂಕಿ ತಕ್ಷಣ ಬೃಹದಾಕಾರವಾಗಿ ಹಬ್ಬಿ ಬಣವೆಗಳಿಗೂ ಆವರಿಸಿದೆ. ರು. 25ರಿಂದ 30 ಲಕ್ಷ ಮೌಲ್ಯದ ಮೆಕ್ಕೆಜೋಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮೇವುಂಡಿ, ಮಲ್ಲಾರಿ, ರಾಮಾಪುರ, ಕರಡಿ ಕುಟುಂಬಗಳಿಗೆ ಈ ಬಣವೆಗಳು ಸೇರಿದ್ದವು. ಅಗ್ನಿಶಾಮಕ ದಳದ ವಾಹನಗಳು ಕರ್ಜಗಿಗೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ತಡರಾತ್ರಿವರೆಗೂ ಮುಂದುವರಿದಿತ್ತು.