ನಿಸ್ವಾರ್ಥ ಸೇವೆಯಿಂದ ಪರಿವರ್ತನೆ: ಕಿರಣ್
ಹಾವೇರಿ: ನಿಸ್ವಾರ್ಥವಾಗಿ ಸೇವೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಯೋಗ್ಯರಿಗೆ ಅಧಿಕಾರ ನೀಡಿದಲ್ಲಿ ಆ ಸ್ಥಾನಕ್ಕೆ ಗೌರವ ಪ್ರಾಪ್ತಿಯಾಗುತ್ತದೆ ಎಂದು ಜೇಸಿ ವಲಯಾಧ್ಯಕ್ಷ ಕಿರಣ್ ಕೆ.ಎನ್. ಹೇಳಿದರು.
ಸ್ಥಳೀಯ ಜೇಸಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಇತ್ತೀಚೆಗೆ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದಕರ ಸಂಗತಿ. ಅವರಿಗೆ ಯೋಗ್ಯ ಸಂಸ್ಕಾರ ನೀಡಿ, ಸರಿದಾರಿಗೆ ತರಬೇಕಾಗಿದೆ. ಜೇಸಿ ಸಂಸ್ಥೆ ಸಮಾಜದ ಕೆಳಹಂತದ ಜನರನ್ನು ಮೇಲೆತ್ತುವ ಕಾರ್ಯ ಹಮ್ಮಿಕೊಂಡು, ದೀನ-ದಲಿತರ ಹಾಗೂ ಬಡವರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದಲ್ಲಿ ಸಂಘ-ಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯ. ಸಾಧಕರ ಸಹವಾಸದಿಂದ ಸಾಮಾನ್ಯರೂ ಜಗತ್ತು ಗುರುತಿಸುವ ಸಾಧನೆ ಮಾಡಬಲ್ಲರು. ಸೇವೆಯ ಮೂಲಕ ಸಮಾಜದ ಋಣ ತೀರಿಸಬೇಕು. ವೈಯಕ್ತಿಕವಾಗಿ ಮಾಡಲಾಗದ ಸೇವೆಗಳನ್ನು ಸಂಘ ಸಂಸ್ಥೆಗಳ ಸಹಕಾರದಿಂದ ಮಾಡಲು ಸಾಧ್ಯ ಎಂದರು.
ಜೇಸಿ ಸಂಸ್ಥೆಯ ಅಧ್ಯಕ್ಷ ಜೆಸಿ ಶಿವಾನಂದ ಕೆಂಭಾವಿ ಅವರಿಗೆ ಕಿರಣ ಕೆ.ಎನ್., ಸದಸ್ಯರಿಗೆ ಕೆಂಭಾವಿ ಪ್ರಮಾಣ ವಚನ ಬೋಧಿಸಿದರು. ಕಾರ್ಯದರ್ಶಿ ಸಂಜಯ ರಿತ್ತಿ, ಜೇಸಿರೇಟ್ಸ್ ಅಧ್ಯಕ್ಷೆ ಲಕ್ಷ್ಮೀ ಕೆಂಭಾವಿ, ಜೆಜೆಸಿ ಚೇರ್ಮನ್ ಹರ್ಷಿತಾ ಜೈನ್ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಪ್ರದೀಪ ಪಾಟೀಲ ಅಧಿಕಾರ ಹಸ್ತಾಂತರ ಮಾಡಿದರು.