ದೇವಿ ಜಾತ್ರೆಯಲ್ಲಿ ಯುವತಿಯರ ಮಾದಕ ಕುಣಿತ!
ಹಾವೇರಿ: ಜಾತ್ರೆ ಎಂದರೆ ಅಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಯುವತಿಯರು ಮಾದಕವಾಗಿ ಕುಣಿದರೆ ಹೇಗಾದೀತು? ಆದರೆ, ತಾಲೂಕಿನ ನೆಗಳೂರ ಗ್ರಾಮದ ಗಡಿ ದುರಗಮ್ಮ ದೇವಿ ಜಾತ್ರೆಯಲ್ಲಿ ಯುವತಿಯರು ಮಾದಕವಾಗಿ ಕುಣಿದಿದ್ದಾರೆ. ಯುವತಿಯರ ಮಾದಕ ನೃತ್ಯ ಬುಧವಾರ ಸಂಜೆಯಿಂದಲೇ ಆರಂಭವಾಗಿತ್ತು. ಪಡ್ಡೆ ಹೈಕಳಿಗೆ ಇದು ರಸದೌತಣ ಬಡಿಸಿತ್ತು. ಜಾತ್ರೆಯಲ್ಲಿ ರಾಜ್ಯ ಹಾಗೂ ಬೇರೆ ರಾಜ್ಯಗಳಿಂದ ಕರೆತಂದಿದ್ದ ಯುವತಿಯರು ಕನ್ನಡ, ಹಿಂದಿ ಸಿನಿಮಾ ಹಾಡುಗಳಿಗೆ ತಮ್ಮ ಮೈಮಾಟ ಪ್ರದರ್ಶಿಸುತ್ತಾ ಕುಣಿದರು. ಟ್ರ್ಯಾಕ್ಟರ್ ಟ್ರೇಲರ್ಗಳಲ್ಲಿ 16ರಿಂದ 20 ವಯಸ್ಸಿನ ಯುವತಿಯರು ಡಿಜೆ ಸೌಂಡ್ ಸಿಸ್ಟಮ್ನಲ್ಲಿ ತೇಲಿ ಬರುತ್ತಿದ್ದ ಮಾದಕ ಹಾಡುಗಳಿಗೆ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸುತ್ತಿದ್ದರೆ, ಯುವಕರು ಮೊಬೈಲ್ಗಳಲ್ಲಿ ಅವುಗಳ ಚಿತ್ರೀಕರಣ ಮಾಡುತ್ತ, ತಾವೂ ಹೆಜ್ಜೆ ಹಾಕಿದರು. ಇನ್ನೂ ಕೆಲವರು ಮಾದಕ ನೃತ್ಯ ಪ್ರದರ್ಶಿಸಿದ ಯುವತಿಯರ ಕೊರಳಿಗೆ ನೋಟುಗಳ ಹಾರ ಹಾಕಿ ಪ್ರೇರೇಪಿಸಿದರು. ಬುಧವಾರ ಸಂಜೆ 4ರಿಂದ ಗುರುವಾರ ಬೆಳಗಿನ 6 ಗಂಟೆ ತನಕ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಇಂಥ ನೃತ್ಯ ನಡೆದೇ ಇತ್ತು. ಜಾತ್ರೆಯ ನೆಪದಲ್ಲಿ ಇಂತಹ ಅಶ್ಲೀಲ ನೃತ್ಯ ಪ್ರದರ್ಶನ ಹಲವರಿಗೆ ಮುಜುಗರ ಉಂಟು ಮಾಡಿದ್ದರೂ ಯುವಕರ ಆವೇಶದ ಎದುರು ಅವರು ಏನೂ ಮಾಡಲಾಗದೆ ಸುಮ್ಮನಾಗಿದ್ದರು. ಜಾತ್ರೆಯಲ್ಲಿ ಬಂದೋಬಸ್ತ್ಗೆ ಬಂದಿದ್ದ ಇಬ್ಬರು ಕಾನ್ಸ್ಟೇಬಲ್ಗಳೂ ಸುಮ್ಮನಿರದೆ ವಿಧಿಯಿರಲಿಲ್ಲ.