ರಸ್ತೆ ಸುರಕ್ಷತೆ ಅರಿವು ಮೂಡಿಸಿ: ನ್ಯಾ. ಪಾಟೀಲ
ಹಾವೇರಿ: ರಸ್ತೆ ಸುರಕ್ಷತೆ ಕುರಿತಂತೆ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಅಗತ್ಯ ತಿಳಿವಳಿಕೆ ನೀಡಿ, ಅಪಘಾತದ ಪ್ರಮಾಣ ಇಳಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಎಸ್. ಪಾಟೀಲ ಹೇಳಿದರು.
ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನ ಧನ್ವಂತರಿ ಸಭಾಭವನದಲ್ಲಿ ಮಂಗಳವಾರ ಪ್ರಾದೇಶಿಕ ಸಾರಿಗೆ ಕಚೇರಿ, ಸಾರಿಗೆ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರು ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಬೇಕು. ವಾಹನಗಳನ್ನು ಎಡಭಾಗದಲ್ಲಿ ಚಲಿಸಿ, ತಾಳ್ಮೆ, ಮುಂಜಾಗ್ರತೆ ಹಾಗೂ ಸಂಚಾರಿ ನಿಯಮ ಪಾಲಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಎಸ್ಪಿ ಎನ್. ಶಶಿಕುಮಾರ್ ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಾಹವನ್ನು 1990ರಿಂದ ನಡೆಸುತ್ತಿದ್ದು, ನಮ್ಮ ದೇಶದಲ್ಲಿ ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ, 1.42 ಲಕ್ಷಕ್ಕೂ ಅಧಿಕ ಜನರು ಸಾಯುತ್ತಿದ್ದಾರೆ. 16ರಿಂದ 18 ಲಕ್ಷ ಜನರು ಗಾಯಗೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಡಿ. ತಹಶೀಲ್ದಾರ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಶಾಂತಪ್ಪ ಗೊಂಟಖಂಡಿಕಿ, ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ ಸಿ.ಎನ್. ಗೌಡರ ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಇಲಾಖೆ ವಾಹನ ನಿರೀಕ್ಷಕ ಕೆ.ವಿ. ನಾಗರಾಜ ಪ್ರಾಸ್ತಾವಿಕ ಮಾತನಾಡಿದರು. ವಾಹನ ನಿರೀಕ್ಷಕ ರವಿರಾಜ್ ಪವಾರ ಇದ್ದರು. ಉಪ ಪ್ರಾಂಶುಪಾಲ ಡಾ ಎಸ್.ಎಸ್. ಅಂಗಡಿ ಸ್ವಾಗತಿಸಿದರು. ಪಿ.ಎಸ್. ಪಾಟೀಲ ವಂದಿಸಿದರು. ಡಾ ಜ್ಯೋತಿ ನಿರೂಪಿಸಿದರು.