ಚಿನ್ನದಿಂದಲೇ ಅರ್ಥ ವ್ಯವಸ್ಥೆ ಕುಸಿತ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 24
ದೇಶದ ಆರ್ಥಿಕಾಭಿವೃದ್ಧಿಗೆ ನೆರವಾಗಬೇಕಾದ ಬಂಗಾರ ಇಂದು ಅನುತ್ಪಾದಕ ಆಮದು ವಸ್ತುವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ನೇರವಾಗಿ ಕಾರಣವಾಗಿದೆ. ಕ್ಷೀಣಿಸುತ್ತಿರುವ ರಫ್ತು, ಹೆಚ್ಚುತ್ತಿರುವ ಆಮದು ಕೂಡ ಅಥ್ಯ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಬಿ. ಕಲಿವಾಳ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಅರ್ಥಶಾಶ್ತ್ರ ಹಾಗೂ ರಾಜಕೀಯ ವಿಜ್ಞಾನ ವಿಭಾಗಗಳು 'ಉನ್ನತ ಮಟ್ಟದ ಬೆಳವಣಿಗೆಯ ಮೇಲೆ ರುಪಾಯಿ ಅಪಮೌಲ್ಯದ ಸವಾಲುಗಳು' ಹಾಗೂ 'ಜಾಗತಿಕ ದೃಷ್ಟಿಕೋನದಲ್ಲಿ ಮಾನವ ಹಕ್ಕುಗಳ ಶಿಕ್ಷಣ' ಕುರಿತಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಅವಲೋಕನ ಅಗತ್ಯ
ಜಾಗತಿಕ ಮಟ್ಟದಲ್ಲಿ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಭಾರತ ಇತರ ರಾಷ್ಟ್ರಗಳಿಗೆ ಪೈಪೋಟಿ ನೀಡುವಲ್ಲಿ ಮುಂಚೂಣಿಯಲ್ಲಿದೆ. ಎಲ್ಲ ವಿಷಯಗಳ ಮೂಲವಾಗಿ ಬೆಳೆದಿರುವ ಅರ್ಥಶಾಸ್ತ್ರವನ್ನು ಅವಲೋಕಿಸುವ ಅಗತ್ಯವಿದೆ. ದೇಶ ಪಂಚವಾರ್ಷಿಕ ಯೋಜನೆಗಳ ಮೂಲಕ ಆರ್ಥಿಕ ಸ್ಥಿತಿಯನ್ನು ಮುಮ್ಮುಖವಾಗಿ ಕಾಯ್ದುಕೊಂಡಿದ್ದು, ಉದಾರೀಕರಣ ಹಾಗೂ ಜಾಗತೀಕರಣ ವ್ಯವಸ್ಥೆಯಿಂದಾಗಿ ಕೆಲವು ಕ್ಷೇತ್ರಗಳು ಆರ್ಥಿಕ ದಿವಾಳಿತನ ಅನುಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಎಚ್ಚರಿಕೆಯ ಹೆಜ್ಜೆ
ದೇಶದ ಅರ್ಥ ವ್ಯವಸ್ಥೆ ಸುಧಾರಿಸಲು ಮಹಿಳೆಯರು ಸಮರ್ಥರಾಗಿದ್ದಾರೆ. ಆದರೆ, ಸಾಮಾಜಿಕ ವ್ಯವಸ್ಥೆ ಸಬಲಗೊಳ್ಳಬೇಕಿದೆ. ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿದ್ದು, ಮಾನವ ಹಕ್ಕುಗಳ ಕುರಿತಾಗಿ ಯೋಚಿಸುವ ಕಾಲ ಬಂದಿದೆ. ಜನ ಪ್ರಜ್ಞಾವಂತರಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ ಎಂದರು.
ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಪಿ.ಡಿ. ಶಿರೂರ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಿವಿ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎಚ್. ಪಟೇಲ, ಕೊಲ್ಲಾಪುರ ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿ.ಬಿ. ಜುಗಳೆ, ಕರ್ನಾಟಕ ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಓ. ಬಾಗಲಕೋಟಿ, ಕರ್ನಾಟಕ ವಿವಿಯ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿ.ಜಿ. ಹಿರೇಗೌಡರ, ಅರ್ಥಶಾಸ್ತ್ರ ವಿಭಾಗದ ಪ್ರೊ. ಜಿ.ಎಸ್. ಪಲ್ಲೇದ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಸ್.ಎ. ಹುದ್ದಾರ, ಕಾಲೇಜಿನ ಸ್ಥಾನಿಕ ಮಂಡಳಿಯ ಸದಸ್ಯರಾದ ಬಸವರಾಜ ಮಾಸೂರ ಮತ್ತು ಬಿ.ಸಿ. ಹೆರೂರ ಇದ್ದರು.
ವರ್ಷಾ ಪಾಟೀಲ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಸ್ವಾಗತಿಸಿದರು. ಡಾ. ಎನ್.ಆರ್. ಬಿರಸಾಲ ಮತ್ತು ಡಾ. ಸಿ. ಮಲ್ಲಣ್ಣ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಎನ್.ವಿ. ಕಂಬಾಳಿಮಠ ಮತ್ತು ಪ್ರೊ. ಎಂ.ಸಿ. ಶಶಿಕಲಾ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ರೇಷ್ಮಾ ಇನಾಮದಾರ್ ನಿರೂಪಿಸಿದರು. ಡಾ. ವಿ.ಡಿ. ಯಳಮಲಿ ವಂದಿಸಿದರು.
ದೇಶದ ಆರ್ಥಿಕಾಭಿವೃದ್ಧಿಗೆ ನೆರವಾಗಬೇಕಾದ ಬಂಗಾರ ಇಂದು ಅನುತ್ಪಾದಕ ಆಮದು ವಸ್ತುವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ನೇರವಾಗಿ ಕಾರಣವಾಗಿದೆ. ಕ್ಷೀಣಿಸುತ್ತಿರುವ ರಫ್ತು, ಹೆಚ್ಚುತ್ತಿರುವ ಆಮದು ಕೂಡ ಅಥ್ಯ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಉದಾರೀಕರಣ ಹಾಗೂ ಜಾಗತೀಕರಣ ವ್ಯವಸ್ಥೆಯಿಂದಾಗಿ ಕೆಲವು ಕ್ಷೇತ್ರಗಳು ಆರ್ಥಿಕ ದಿವಾಳಿತನ ಅನುಭವಿಸುತ್ತಿವೆ.
- ಡಾ. ಬಿ.ಬಿ. ಕಲಿವಾಳ, ದಾವಣಗೆರೆ ವಿವಿ ಕುಲಪತಿ