ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಾಲೆ ಜಮೀನು ಅತಿಕ್ರಮಣ ತೆರವು: ಜನಸ್ಪಂದನ ಸಭೆಯಲ್ಲಿ ಬನ್ನಿಕೊಪ್ಪ ಗ್ರಾಮಸ್ಥರ ಆಗ್ರಹ

Vishwanath S
Updated On : 25 Jan 2014, 12:26 pm

ಶಿಗ್ಗಾಂವಿ: ತಾಲೂಕಿನ ಬನ್ನಿಕೊಪ್ಪ ಸರ್ಕಾರಿ ಶಾಲೆಗೆ ಸೇರಿದ 5.10 ಎಕರೆ ಭೂಮಿಯನ್ನು ಅತಿಕ್ರಮಿಸಿ, ಹಲವರು ಮನೆ ಕಟ್ಟಿಕೊಂಡಿದ್ದಾರೆ. ಕೆಲವರು 30 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ಅಧಿಕಾರಿಗಳು ಗಮನಹರಿಸಿಲ್ಲ. ಅತಿಕ್ರಮಣ ತೆರವುಗೊಳಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮದ ಹಿಪ್ರಾ ಶಾಲೆಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್, ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ, ಕೂಡಲೇ ಸರ್ವೆ ಕೈಗೊಂಡು ಹದ್ದುಬಸ್ತು ಮಾಡಲಾಗುವುದು ಎಂದು ಭರವಸೆ ನೀಡಿದರು.
ಎಂಟು ತಿಂಗಳ ಹಿಂದೆ ಗ್ರಾಮದ 12 ಕೂಲಿಕಾರರು ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದರೂ ಕೂಲಿ ಹಣ ಪಾವತಿಸಿಲ್ಲ. ಪುಕ್ಸಟ್ಟೆ ಕೆಲಸ ಮಾಡಿ ಉಪವಾಸ, ವನವಾಸ ಅನುಭವಿಸಲು ಸಿದ್ಧರಿಲ್ಲ ಎಂದು ಗ್ರಾಮಸ್ಥರು ತಾಪಂ ಯೋಜನಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ವಾರದೊಳಗೆ ಹಣ ಪಾವತಿಗೆ ವ್ಯವಸ್ಥೆ ಮಾಡುವುದಾಗಿ ಅಧಿಕಾರಿ ಭರವಸೆ ನೀಡಿದರು.
ವಸತಿ ಯೋಜನೆ ಮನೆ ಹಂಚಿಕೆಯಲ್ಲಿ ತಾರತಮ್ಯ, ಪಜಿತರ ವಿತರಣೆಯಲ್ಲಿ ಗೋಲ್ಮಾಲ್, ರಸ್ತೆಯ ಮೇಲೆ ಬೀಳುತ್ತಿರುವ ವಿದ್ಯುತ್ ತಂತಿಗಳು, ಬಾಗಿರುವ ಕಂಬಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಹೆಸ್ಕಾಂ ಅಧಿಕಾರಿ ಕುಮಾರ ಆಚಾರ್ಯ ತಂತಿ, ಕಂಬ ಬದಲಿಸುವುದಾಗಿ ಹೇಳಿದರು.
ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಟ್ಯಾಂಕ್ ಕಳಪೆಯಾಗಿದೆ. ಹಳ್ಳದ ಉಸುಕು ಬಳಸುತ್ತಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿಸುವಂತೆ ಒತ್ತಾಯಿಸಲಾಯಿತು. ಗ್ರಾಪಂ ಕಟ್ಟಡ ಒದಗಿಸಿದರೆ ಶೀಘ್ರ ಕುಡಿಯುವ ನೀರಿನ ಘಟಕ ಆರಂಭಿಸುವುದಾಗಿ ಜಿಪಂ ಅಧಿಕಾರಿ ಎಸ್.ವಿ. ದೇವನಾಳ್ ಹೇಳಿದರು. ಆಹಾರ ನಿರೀಕ್ಷಕ ಎಸ್.ಪಿ. ಚಪ್ಪಳಗಾವಿ, ತಾಪಂ ಮಾಜಿ ಅಧ್ಯಕ್ಷ ಬಾಪುಗೌಡ ಹೊಸಗೌಡರ, ಗ್ರಾಪಂ ಸದಸ್ಯರಾದ ಶಂಕ್ರಪ್ಪ ಕೋಣನವರ, ಬಸವಣ್ಣೆಪ್ಪ ಹೊಸಪೇಟಿ, ನೀಲವ್ವ ಕಾಮನಹಳ್ಳಿ ಇದ್ದರು. ಗ್ರಾಪಂ ಕಾರ್ಯದರ್ಶಿ ಬಿ.ಪಿ. ಪೂಜಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement