ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

20ನಿಮಿಷ 20ಸುದ್ದಿ

Mainashree
Updated On : 26 Jan 2014, 11:46 am

ಲಂಚ ಕೇಳಿದರೆ ಮಾಹಿತಿ ನೀಡಿ: ಕೋಳಿವಾಡ
ರಾಣಿಬೆನ್ನೂರು: ಕೆಲಸ-ಕಾರ್ಯಗಳಿಗಾಗಿ ನಗರಸಭೆಗೆ ಬರುವ ಸಾರ್ವಜನಿಕರಿಂದ ನೌಕರರು ಲಂಚ ಕೇಳಿದರೆ ನೇರವಾಗಿ ತಮಗೆ ಮಾಹಿತಿ ನೀಡುವಂತೆ ಶಾಸಕ ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ನೌಕರರು ಲಂಚ ಕೇಳುತ್ತಿರುವ ಬಗ್ಗೆ ಮಾಹಿತಿ ಇದ್ದು, ಅಂಥ ಪ್ರಕರಣಗಳು ನಡೆದಲ್ಲಿ ನೇರವಾಗಿ ತಮ್ಮ ಮೊಬೈಲ್‌ಗೆ (9902069111) ಕರೆ ಮಾಡಿ, ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲು ಸಿದ್ಧ ಎಂದರು. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಎಲ್ಲ ವರ್ಗಕ್ಕೆ ಸೇರಿರುವ ಬಡವರ ಮಕ್ಕಳಿಗೆ ಕೈಗಾರಿಕಾ ತರಬೇತಿ ಶಿಕ್ಷಣ (ಐಟಿಐ) ಪಡೆಯಲು ರಾಣಿಬೆನ್ನೂರು ನಗರ ಹಾಗೂ ಗುಡಗೂರು ಗ್ರಾಮದಲ್ಲಿ ಐಟಿಐ ಕಾಲೇಜುಗಳನ್ನು ಸರ್ಕಾರ ಮಂಜೂರಿ ಮಾಡಿದೆ. ಬರುವ ಶೈಕ್ಷಣಿಕ ವರ್ಷದಿಂದಲೇ ಇವು ಕಾರ್ಯಾರಂಭಿಸಲಿವೆ ಎಂದು ಕೋಳಿವಾಡ ತಿಳಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣತಮ್ಮಪ್ಪ ಭಾರ್ಕಿ, ಪ್ರಕಾಶ ಜೈನ ಇದ್ದರು.

ಹತ್ತಿ: ಪರಿಹಾರ ಸಾಲದು
ಶಿಗ್ಗಾಂವಿ: ಕಳಪೆ ಹತ್ತಿ ಬೀಜದಿಂದ ಹಾನಿ ಅನುಭವಿಸಿದ ರೈತರಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ ರು. 4,500 ಪರಿಹಾರ ಘೋಷಣೆ ಮಾಡಿರುವುದನ್ನು ತಾಲೂಕು ಅನ್ನದಾತ ರೈತ ಹೋರಾಟ ಸಮಿತಿ ವಿರೋಧಿಸಿದೆ. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಸಮಿತಿ ಪದಾಧಿಕಾರಿಗಳು, ಉತ್ತಮ ಫಸಲಿನ ಆಸೆಯನ್ನು ಕಳಪೆ ಕನಕ ಬಿತ್ತನೆ ಬೀಜ ನುಚ್ಚುನೂರು ಮಾಡಿದೆ. ಆದರೂ ಅಧಿವೇಶನದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡರು ಹೆಕ್ಟೇರ್‌ಗೆ ರು. 4,500 ಪರಿಹಾರ ಘೋಷಿಸಿ, ರೈತರ ಮೂಗಿಗೆ ತುಪ್ಪ ಸವರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಹೆಕ್ಟೇರ್‌ನಲ್ಲಿ ಬಿತ್ತಲು ಪ್ಯಾಕೆಟ್‌ಗೆ ರು. 900ರಂತೆ ನೀಡಿ, ನಾಲ್ಕು ಪ್ಯಾಕೆಟ್ ಹತ್ತಿ ಬೀಜ ಖರೀದಿಸಿರುವ ರೈತರು, ಗೊಬ್ಬರ, ಕ್ರಿಮಿನಾಶಕ ಸೇರಿ ರು. 40 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಗಿಡ ಬೆಳೆಯಿತೇ ಹೊರತು ಕಾಯಿ ಕಟ್ಟಲಿಲ್ಲ. ಕೃಷಿ ಇಲಾಖೆ ವರದಿ ನೀಡಿದ್ದರೂ ಸರ್ಕಾರ ಬಿಡಿಗಾಸಿನ ಪರಿಹಾರ ಘೋಷಿಸಿದೆ. ಕಂಪನಿ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ದೂರಿದರು. ಅನ್ನದಾತ ರೈತ ಹೋರಾಟ ಸಮಿತಿ ಅಧ್ಯಕ್ಷ ಗಂಗಾಧರ ಗಡ್ಡೆ, ಕಾರ್ಯದರ್ಶಿ ನವೀನ ಸವಣೂರು, ಮುಖಂಡರಾದ ರಾಜಣ್ಣ ಕುಲಕರ್ಣಿ, ಸಂತೋಷ ಮೊರಬದ, ಚನ್ನಪ್ಪ ಗಾಣಿಗೇರ, ಬಸವರಾಜ ಕೊಟ್ಟಿಗೇರಿ, ಷಣ್ಮುಖಪ್ಪ ಮೆಣಸಿನಕಾಯಿ, ಬೂದಪ್ಪ ಬೂದಿಹಾಳ, ರಾಮಣ್ಣ ಕುರುಬರ ಇದ್ದರು.

ಬಿ.ಇಡಿ ಕೌನ್ಸೆಲಿಂಗ್ ಪಟ್ಟಿ 29ಕ್ಕೆ ಪ್ರಕಟ
ಹಾವೇರಿ: ಪ್ರಸಕ್ತ ಸಾಲಿನ ಬಿ.ಇಡಿ ಕೋರ್ಸಿಗೆ ಜ. 23ರಂದು ಕೌನ್ಸೆಲಿಂಗ್ ಪಟ್ಟಿಯನ್ನು ಪ್ರಕಟಿಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಮನವಿ ಮೇರೆಗೆ ಉದ್ದೇಶಿತ ಕೌನ್ಸೆಲಿಂಗ್‌ಗೆ ಬದಲಾಗಿ ಪ್ರಥಮ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿ ದಾಖಲಾಗದೆ, ಸಂಸ್ಥೆ ಬದಲಾವಣೆ ಬಯಸಿದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (ಮರು ಹಂಚಿಕೆ) ಜ. 29ರಂದು ಇಲಾಖಾ ವೆಬ್‌ಸೈಟ್ ಹಾಗೂ ನೋಡಲ್ ಕೇಂದ್ರಗಳಲ್ಲಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳ ಮೂಲ ದಾಖಲೆಗಳು ಆಯಾ ವ್ಯವಸ್ಥಾಪಕ ಕೇಂದ್ರದಲ್ಲಿ (ನೋಡಲ್ ಕೇಂದ್ರ) ಪರಿಶೀಲನೆಗೆ ಒಳಪಟ್ಟು ನಿಗದಿತ ಶುಲ್ಕ ಪಾವತಿಸಿ, ಹಂಚಿಕೆ ಮಾಡಲಾಗಿರುವ ಸಂಸ್ಥೆಗಳಿಗೆ ದಾಖಲಾಗಲು ಸೂಚಿಸಿದೆ. ವ್ಯವಸ್ಥಾಪಕ ಕೇಂದ್ರದಲ್ಲಿ ದಾಖಲಾತಿ ಪ್ರಕ್ರಿಯೆ ಮುಗಿದ ಬಳಿಕ ಅಗತ್ಯವಿದ್ದಲ್ಲಿ ಖಾಲಿ ಸೀಟುಗಳು ಉಳಿದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ರ್ಯಾಂಕ್ ಆಧಾರದ ಮೇಲೆ ಕೌನ್ಸಿಲಿಂಗ್ ನಡೆಸಲಾಗುವುದು. ಕೌನ್ಸಿಲಿಂಗ್ ವೇಳಾ ಪಟ್ಟಿಯನ್ನು ಆಮೇಲೆ ಪ್ರಕಟಿಸಲಾಗುವುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ ಎಂದು ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ ತಿಳಿಸಿದ್ದಾರೆ.


ಸೈಕಲ್ ವಿತರಣೆ
ಶಿಗ್ಗಾಂವಿ: ತಾಲೂಕಿನ ಮುಗಳಿ ಗ್ರಾಮದಲ್ಲಿ ಗುರುವಾರ ಜಿಪಂ ಸದಸ್ಯ ಬಿ.ಟಿ. ಇನಾಮತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಿ, ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಿಸಿದ ಮುಖ್ಯ ಗುರುಗಳ ನೂತನ ಕೊಠಡಿಯನ್ನು ಉದ್ಘಾಟಿಸಿದರು. ತಾಪಂ ಸದಸ್ಯ ತಿಪ್ಪಣ್ಣ ಸಾತಣ್ಣವರ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಪಿ. ಮೂಲಿಮನಿ, ಬಿಜೆಪಿ ತಾಲೂಕಾಧ್ಯಕ್ಷ ದೇವಣ್ಣ ಚಾಕಲಬ್ಬಿ, ಗುರುಶಾಂತಪ್ಪ ಭದ್ರಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಉಳವನಗೌಡ ಪಾಟೀಲ, ಸದಸ್ಯರಾದ ಬಸವರಾಜ ಪೂಜಾರ, ಅಶೋಕ ಬೆಂಗೇರಿ, ಮಲ್ಲಪ್ಪ ಹುಲಗೂರ, ಶೋಭಾ ಕಾಮನಹಳ್ಳಿ, ರೇಣವ್ವ ಬಿಶೆಟ್ಟಿ, ಶೇಕವ್ವ ಮುಂದಿನಮನಿ ಇದ್ದರು. ನಿವೃತ್ತ ಶಿಕ್ಷಕ ಬಿ.ಎಂ. ದುಂಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ದೀಪಾ ಅರಳಿಕಟ್ಟಿ ಪ್ರಾರ್ಥಿಸಿದರು. ಬಿ.ಬಿ. ಕಟ್ಟಿಮನಿ ಸ್ವಾಗತಿಸಿದರು. ಈಶ್ವರ ಕಾಲವಾಡ ನಿರೂಪಿಸಿದರು. ಎಂ.ಎಸ್. ಬ್ಯಾಹಟ್ಟಿ ವಂದಿಸಿದರು.


ಪರಿಸರ ನಾಶ ತಡೆಯಿರಿ: ಕಾಗಿನೆಲೆ ಶ್ರೀ

ಬ್ಯಾಡಗಿ: ಪರಿಸರ ನಾಶಕ್ಕೆ ಕಡಿವಾಣ ಹಾಕದಿದ್ದರೆ ಭೂಮಿಯೂ ಬರಡಾಗಲಿದೆ. ವಿಶ್ವದ ಅನೇಕ ರಾಷ್ಟ್ರಗಳು ಈಗಾಗಲೇ ಅದರ ಕಹಿ ಅನುಭವ ಉಣ್ಣುತ್ತಿವೆ ಎಂದು ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಶ್ರೀಗಳು ನುಡಿದರು. ಕಾಗಿನೆಲೆ ಗ್ರಾಮದ ಹಕ್ಕಬುಕ್ಕ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಸಿರು ಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರವನ್ನು ನಾವು ಪ್ರೀತಿಸಿದಲ್ಲಿ ಅದು ನಮ್ಮನ್ನು ಕಾಪಾಡುತ್ತದೆ. ವೃಕ್ಷಾರೋಪಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕರೆ ನೀಡಿದರು. ಪ್ರಾಚಾರ್ಯ ಎಂ. ಬೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸೋಮೇಶ ಭರಮಗೌಡ್ರ, ಅನಿಲಕುಮಾರ ಮಾರವಳ್ಳಿ, ಎಸ್.ಸಿ. ಬನ್ನಿಮಟ್ಟಿ, ಎಂ.ಎನ್. ವಡಕಣ್ಣನವರ, ದಾನಪ್ಪ ವಡ್ಡರ, ಮೆಹಬೂಬ್ ಉಕ್ಕುಂದ, ಬಸವರಾಜ ಸಪ್ಪಣ್ಣನವರ, ದಾಯಿಹಲೀಮಾ ಮತ್ತಿಹಳ್ಳಿ, ಎಸ್.ಪಿ. ಪಾಟೀಲ ಇದ್ದರು. ಈರಣ್ಣ ಹುಬ್ಬಳ್ಳಿ ಸ್ವಾಗತಿಸಿದರು. ಶ್ವೇತಾ ಓಲೇಕಾರ ವಂದಿಸಿದರು. ಮೆಹರಬಾನು ನಾಯಕ ನಿರೂಪಿಸಿದರು.


ಕರ್ಜಗಿ ಉರ್ದು ಶಾಲೆ ಎಸ್‌ಡಿಎಂಸಿ ರಚನೆ
ಹಾವೇರಿ: ತಾಲೂಕಿನ ಕರ್ಜಗಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಗುಲಜಾರ ಅಹ್ಮದ್ ಮಕಾನದಾರ ಆಯ್ಕೆಗೊಂಡರು. ಫರೀದಾ ಹತ್ತಿಮತ್ತೂರ (ಉಪಾಧ್ಯಕ್ಷೆ), ಸೈಯದ್ ಮಹಮೂದ ಹಗಲದಿವಟಗಿ, ಹುಸೇನಸಾಬ್ ಮುಲ್ಲಾ, ಮಹಬೂಬಸಾಬ್ ಕನವಳ್ಳಿ, ಮಲೀಕಸಾಬ್ ಕಂಠಿ, ಮಹಬೂಬಸಾಬ್ ಗ. ಕನವಳ್ಳಿ, ದಿಲಶಾದಬಿ ಕಟಗಿ, ರೇಶ್ಮಾಬಾನು ಸುಂಕದ, ಹಸೀನಾಬಾನು ನದಾಫ್, ದಿಲಶಾದಬಾನು ಇ. ಕಟಗಿ, ಮಮತಾಜಬಿ ನೆಗಳೂರ ಹಾಗೂ ಶಬೀನಾಬಾನು ಗುತ್ತಲ (ಸದಸ್ಯರು). ಪದನಿಮಿತ್ತ ಸದಸ್ಯರಾಗಿ ಮುಖ್ಯಾಧ್ಯಾಪಕ ಎಸ್.ಎಸ್. ಸರಖಾಜಿ, ಎ.ಪಿ. ಗೊಂದಕರ, ಪ್ರೇಮಾ ಕರಚಣ್ಣನವರ, ನಾಮ ನಿರ್ದೇಶನ ಸದಸ್ಯರಾಗಿ ಗ್ರಾಪಂ ಸದಸ್ಯ ಶಿವರಾಜ ಗಂಗಮ್ಮನವರ, ಎ.ಎಸ್. ವಗ್ಗಣ್ಣನವರ ಹಾಗೂ ನಜಮಾಬಾನು ಸಂದಿಮನಿ ಅವರನ್ನು ನೇಮಕ ಮಾಡಲಾಗಿದೆ. ಸಭೆಯಲ್ಲಿ ಪ್ರಮುಖರಾದ ಬೀಬಿ ಬಲಕೇಶ ಕಂಠಿ, ಸೀಮಾ ಕೌಸರ ಮಕಾನದಾರ ಇದ್ದರು ಎಂದು ಮುಖ್ಯಾಧ್ಯಾಪಕ ಎಸ್.ಎಸ್. ಸರಖಾಜಿ ತಿಳಿಸಿದ್ದಾರೆ.

ಬಿಜೆಪಿ ಪ್ರಶಿಕ್ಷಣ ವರ್ಗ
ಹಾವೇರಿ: ರಾಣಿಬೆನ್ನೂರಿನ ವಾಗೀಶ ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಯುವ ಮೋರ್ಚಾದ ಪ್ರಶಿಕ್ಷಣ ವರ್ಗ ನಡೆಯಿತು. ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೇಕಾರ ಉದ್ಘಾಟಿಸಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಅಂಗಡಿ, ಸಂತೋಷ ಹುಣಸಿಹಾಳ, ಕಿರಣ ಅಂಗಡಿ, ಮೈಲಾರಪ್ಪ ಗುಡಗೂರು, ಕೊಟ್ರೇಶ ಬಳಿಗಾರ, ರಾಜು ತಳವಾರ ಇದ್ದರು. ಪ್ರಥಮ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಗಿರೀಶ್ ಮಟ್ಟಣ್ಣವರ್, ರಾಷ್ಟ್ರ ರಾಜಕಾರಣದಲ್ಲಿ ಯುವಕರ ಪಾತ್ರ ಕುರಿತು ಮಾತನಾಡಿದರು. ದಿನೇಶ ಜಾನ್ಮನೆ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಗೋಷ್ಠಿಯ ಮನೆ-ಮನೆಗೆ ಬಿಜೆಪಿ ಕುರಿತಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕಪ್ಪ ಮಾರನಾಳ ಮಾತನಾಡಿದರು. ಮೇಘನಾ ಹೆಗಡೆ ಪ್ರಾರ್ಥಿಸಿದರು. ಎಸ್.ಎನ್. ಶಿವನಗೌಡ್ರ ಸ್ವಾಗತಿಸಿದರು. ರಾಜು ತಳವಾರ ವಂದಿಸಿದರು. ಮುರುಗೇಶ್ ಪುರಾಣಿಕಮಠ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement