ಇಂದು ವಿವಿಧೆಡೆ 65ನೇಗಣರಾಜ್ಯೋತ್ಸವ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಅವಳಿ ನಗರದ ಶಾಲಾ-ಕಾಲೇಜುಗಳಲ್ಲಿ, ಕಚೇರಿ, ಸಂಘ-ಸಂಸ್ಥೆ ಮತ್ತಿತರ ಕಡೆಗಳಲ್ಲಿ ಭಾನುವಾರ 65ನೇ ಗಣರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಪಾಲಿಕೆಯಿಂದ ಗಣರಾಜ್ಯೋತ್ಸವ ಆಚರಣೆ: ಹುಬ್ಬಳ್ಳಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಜ. 26ರಂದು ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಾಲಿಕೆಯ ಧಾರವಾಡ ಕಚೇರಿಯಲ್ಲಿ ಅಂದು ಬೆಳಗ್ಗೆ 8.15ಕ್ಕೆ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಹಾಗೂ ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 8.30ಕ್ಕೆ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಧ್ವಜಾರೋಹಣ ನೆರವೇರಿಸುವರು. ಇದಕ್ಕೂ ಮೊದಲು ಈದ್ಗಾ ಮೈದಾನದಲ್ಲಿ ಬೆಳಗ್ಗೆ 7.15ಕ್ಕೆ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಧ್ವಜಾರೋಹಣ ನೆರವೇರಿಸುವರು.
ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ ಹಾಗೂ ಶ್ರೀನಿವಾಸ ಮಾನೆ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಮಿತಿಯಿಂದ ಧ್ವಜಾರೋಹಣ:
ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿಯ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಜ. 26ರಂದು ಗ್ರೌಂಡ್ ಬಚಾವೋ ಸಮಿತಿಯ ವತಿಯಿಂದ ಧ್ವಜಾರೋಹಣ ನಡೆಸಲು ತೀರ್ಮಾನಿಸಲಾಗಿದೆ. ಸಮಿತಿಯ ಸಿಬಿಎಲ್ ಹೆಗಡೆ ಮನೆಯಲ್ಲಿ ಇತ್ತೀಚೆಗೆ ಸಭೆ ಸೇರಿ ಈ ತೀರ್ಮಾನ ಕೈಗೊಂಡಿರುವ ಸಮಿತಿಯ ಇತರ ಪದಾಧಿಕಾರಿಗಳು, ಅಂದು ಬೆಳಗ್ಗೆ 10ಕ್ಕೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರಿಂದ ಧ್ವಜಾರೋಹಣ ನೆರವೇರಿಸಲು ನಿರ್ಧರಿಸಿದರು.
ಧಾರವಾಡದಲ್ಲಿ ಗಣರಾಜ್ಯೋತ್ಸವ: ಗಣರಾಜ್ಯೋತ್ಸವ ನಿಮಿತ್ತ ಜ. 26ರಂದು ಧಾರವಾಡದಲ್ಲಿ ಧ್ವಜಾರೋಹಣ ಸಮಾರಂಭಗಳು ನಡೆಯಲಿವೆ. ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಧ್ವಜಾರೋಹಣ ನೆರವೇರಿಸುವರು. ಲಕ್ಷ್ಮಿನಗರದ ಸಿದ್ದಿವಿನಾಯಕ ಮಂದಿರದಲ್ಲಿ ಬೆಳಗ್ಗೆ 8ಕ್ಕೆ ಧ್ವಜಾಜಾರೋಹಣ ನಡೆಯಲಿದೆ. ಅತಿಥಿಗಳಾಗಿ ಅಶೋಕ ಅವಲಕ್ಕಿ, ವಿ.ಸಿ. ಚನ್ನಶೆಟ್ಟಿ, ಬಸವರಾಜ ತಾಳಿಕೋಟಿ, ಎಂ.ವೈ. ಸಾವಂತ ಆಗಮಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಬೆಳಿಗ್ಗೆ 8:30ಕ್ಕೆ ಸಾಹಿತಿ ಚಂದ್ರಶೇಖರ ಪಾಟೀಲ ಧ್ವಜಾರೋಹಣ ನೆರವೇರಿಸುವರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸುವರು. ಧಾರವಾಡ ಹೈಕೋರ್ಟ್ ಪೀಠದಲ್ಲಿ 65ನೇ ಗಣರಾಜ್ಯೋತ್ಸವವನ್ನು ಬೆಳಗ್ಗೆ 9:15ಕ್ಕೆ ನ್ಯಾಯಮೂರ್ತಿ ಎನ್. ಕುಮಾರ್ ಧ್ವಜಾರೋಹಣ ಮಾಡಿ ಸಂದೇಶ ನೀಡುವರು.