ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 26 Jan 2014, 11:56 am

ನಾಶವಾಗುತ್ತಿರುವ ಶ್ರಮ ಸಂಸ್ಕೃತಿ: ವಿಷಾದ
ಧಾರವಾಡ:  ಕರ್ನಾಟಕ ಕಲಾ ಮಹಾವಿದ್ಯಾಲಯ ವತಿಯಿಂದ ತಾಲೂಕಿನ ಕಬ್ಬೇನೂರು ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಶನಿವಾರ ನಡೆಯಿತು.  ಪ್ರತಿಯೊಬ್ಬ ನಾಗರಿಕರು ಶ್ರಮ ಸಂಸ್ಕೃತಿ ಮೈಗೂಡಿಸಿಕೊಂಡರೆ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ನಾಶವಾಗುತ್ತಿರುವ ಶ್ರಮ ಸಂಸ್ಕೃತಿ ಭವಿಷ್ಯದಲ್ಲಿ ದುರಂತಕ್ಕೆ ದಾರಿ ಮಾಡಿಕೊಡಲಿದೆ ಎಂದು ಕವಿವಿ ಕುಲಪತಿ ಡಾ.ಎಚ್.ಬಿ. ವಾಲೀಕಾರ ಹೇಳಿದರು. ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ದುಡಿಮೆ ಕಡಿಮೆಯಾಗಿ ಅವಲಂಬನೆ ಹೆಚ್ಚುತ್ತಿದೆ. ಇವು ನಮ್ಮತನವನ್ನು ಹಾಳುಮಾಡುತ್ತಿವೆ. ಆದ್ದರಿಂದ ಎಲ್ಲ ವರ್ಗದ ಜನ ದುಡಿಯಬೇಕು. ಹೈನುಗಾರಿಕೆ, ಕೃಷಿ, ಗ್ರಾಮೀಣ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ಸೇವಕಿಯರು ಮುಂದಾಗಬೇಕು ಎಂದರು. ಎನ್ನೆಸ್ಸೆಸ್ ಸಂಯೋನಾಧಿಕಾರಿ ಡಾ.ಡಿ.ಜಿ. ಹಾಜವಗೋಳ, ಪ್ರಾಚಾರ್ಯ ಡಾ. ಕಟ್ಟಿಮನಿ, ಡಾ. ಬಿ.ಎಸ್. ಭಜಂತ್ರಿ, ಡಾ.ಎಸ್.ಆರ್. ಗಣಿ ಇದ್ದರು.
ಉಚಿತ ತರಬೇತಿ
ಧಾರವಾಡ:   ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿರುವ 18-40 ವರ್ಷದೊಳಗಿನ ವಿಧವೆ, ವಿಚ್ಚೇದಿತ ಹಾಗೂ ಅಂಗವಿಕಲ ಮಹಿಳೆಯರಿಗಾಗಿ ಮೂರು ತಿಂಗಳ ಉಚಿತ ಕಂಪ್ಯೂಟರ್ ಮತ್ತು  ಡಿಸೈನರ್ ಬ್ಲೌಸ್ ತರಬೇತಿಯನ್ನು ರ್ಯಾಪಿಡ್ ಸಂಸ್ಥೆಯಿಂದ ನೀಡಲಾಗುವುದು. ಅಸಕ್ತ ಮಹಿಳೆಯರು ಮೊದಲನೇ ಮಹಡಿ, ಗೋವಿಂದ ನಿವಾಸ, ಕರ್ಣಾಟಕ ಬ್ಯಾಂಕ್ ಎದುರು ರೇಲ್ವೇ ಸ್ಟೇಶನ್ ರಸ್ತೆ, ಮಾಳಮಡ್ಡಿ, ಧಾರವಾಡ ಇಲ್ಲಿ ಅರ್ಜಿ ಕಳುಹಿಸಬಹುದು. ಅರ್ಜಿ ಸಲ್ಲಿಸಲು ಜ. 29 ಕೊನೆ ದಿನ.
ಉಡಿ ತುಂಬುವ ಕಾರ್ಯಕ್ರಮ ಇಂದು
ಧಾರವಾಡ:  ಗಣರಾಜ್ಯೋತ್ಸವದ ಅಂಗವಾಗಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ, ಜ. 26 ರಂದು ಗ್ರಾಮದೇವತೆಗೆ ಉಡಿತುಂಬುವ  ಮತ್ತು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಎನ್.ಆರ್. ಪಾಟೀಲ ತಿಳಿಸಿದ್ದಾರೆ.

-----
ಯುವ ಮೋರ್ಚಾದಿಂದ ಜಗದೀಶ ಶೆಟ್ಟರ್‌ಗೆ ಸನ್ಮಾನ
ಹುಬ್ಬಳ್ಳಿ: 2ನೇ ಬಾರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು  ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಸದಸ್ಯರು ಸನ್ಮಾನಿಸಿದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಘಟಕದ ಅಧ್ಯಕ್ಷ ಚೆನ್ನು ನರಗುಂದ, ಪ್ರಧಾನ ಕಾರ್ಯದರ್ಶಿ ವಿನಾಯಕ ದೊಂಗಡಿ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ವಸಂತ ನಾಡಜೋಶಿ, ಯಲ್ಪಪ್ಪ ಬದ್ದಿ, ಶಂಕ್ರಪ್ಪ ಛಬ್ಬಿ, ವಿನೋದ ರೇವಣಕರ್, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ, ಮಲ್ಲಿಕಾರ್ಜುನ ಮರಿಗೌಡರ, ಹನುಮಂತ ಬೈಚವಾಳ, ಸಂತೋಷ ವೇರ್ಣೆಕರ್, ವಿನಾಯಕ ವಾಗುಲೆ, ಮಣಿಕಂಠ ಶ್ಯಾಗೋಟಿ, ರಾಘವೇಂದ್ರ ಯಾತಗೇರಿ, ರಾಜು ಕಾಳೆ, ಮಹಾದೇವ ಖಂಡೇಲಾರ ಇದ್ದರು.


ಶುಶ್ರೂಷಕಿಯರು ಆಸ್ಪತ್ರೆಯ ಆತ್ಮವಿದ್ದಂತೆ: ಸಂಕನೂರ
ಹುಬ್ಬಳ್ಳಿ: ವೈದ್ಯರಿಂದ ಆಸ್ಪತ್ರೆಗಳು ನಡೆಯುತ್ತಿದ್ದರೂ ಶುಶ್ರೂಷಕಿಯರು ಆಸ್ಪತ್ರೆ ಆತ್ಮವಿದ್ದಂತೆ ಎಂದು ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಎಸ್.ವಿ. ಸಂಕನೂರ ಹೇಳಿದರು. ಕೆಎಲ್‌ಇ ಸಂಸ್ಥೆಯ ಇನ್ಸ್‌ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಮಹಾವಿದ್ಯಾಲಯದ 11ನೇ ಬ್ಯಾಚ್‌ನ ಶುಶ್ರೂಷಕಿಯರ ದೀಪದಾನ ಮತ್ತು ಪ್ರತಿಜ್ಞಾವಿಧಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬೆಳಗಾವಿ ಕೆಎಲ್‌ಇ ವಿವಿ ಇನ್ಸ್‌ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನ ಪ್ರೊ. ಸುಧಾ ರಡ್ಡಿ ಮಾತ ನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಸಂಯೋಜಕಿ ಪ್ರೀತಿ ದೊಡವಾಡ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕೆಎಲ್‌ಇ ಸಂಸ್ಥೆಯಿಂದ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಆರಂಭವಾಗಲಿದೆ. ನರ್ಸಿಂಗ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪ್ರಸ್ತುತ, ಭವಿಷ್ಯದಲ್ಲಿ ವೃತ್ತಿ ಜೀವನಕ್ಕೆ ತೊಂದರೆ ಆಗುವುದಿಲ್ಲ ಎಂದು ಹೇಳಿದರು. ಸಂಜಯ ಪಿರಾಪುರ, ಪ್ರೊ. ಮೀನಾಕ್ಷಿ ದೇವಾಂಗಮಠ, ಸೋಮಶೇಖರ ಕಲ್ಮಠ ಇದ್ದರು.

9 ಲಕ್ಷ ಮೌಲ್ಯದ ಕಳ್ಳತನ ಸಾಮಗ್ರಿ ವಶ
ಹುಬ್ಬಳ್ಳಿ: ಚಿಂದಿ ಆಯುವ ನೆಪದಲ್ಲಿ ವಿವಿಧ ಮನೆಗಳಲ್ಲಿನ ವಾಚ್, ಮೊಬೈಲ್ ಸೇರಿದಂತೆ ಇನ್ನಿತರ ಸಾಮಗ್ರಿ ಕದಿಯುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಿರುವ ಕೇಶ್ವಾಪುರ ಠಾಣೆ ಪೊಲೀಸರು, ಮಹಿಳೆಯಿಂದ ಅಂದಾಜು ರು. 9.31ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯನ್ನು ನಾಗಶೆಟ್ಟಿಕೊಪ್ಪದ ನೀಲು ಬಾಬಾ ಗೋಸಾವಿ ಎಂದು ಗುರುತಿಸಲಾಗಿದ್ದು, ಬಂಧಿತ ಮಹಿಳೆಯಿಂದ ರು. 5 ಲಕ್ಷ ಮೌಲ್ಯದ ರೋಲೆಕ್ಸ್ ಕಂಪನಿ ವಾಚ್, ರು. 1 ಲಕ್ಷ ಮೌಲ್ಯದ ಓಮೇಗಾ ಕಂಪನಿಯ ವಾಚ್, 60 ಸಾವಿರ ಮೌಲ್ಯದ ಮೌಂಟ್ ಬ್ಲಾಂಕ್ ಕಂಪನಿ ಪೆನ್, ಆ್ಯಪಲ್ ಐಫೋನ್, ಲ್ಯಾಪಟಾಪ್ ಸೇರಿದಂತೆ ವಿವಿಧ ಕಂಪನಿಯ ಸುಮಾರು 5 ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮಹಿಳೆಯು ಪ್ಲಾಸ್ಟಿಕ್ ಚಿಂದಿ ಆಯುವ ನೆಪದಲ್ಲಿ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಸುಗಲ್ ರೋಡ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಬ್ಬಿಣದ ರಾಡ್ ಬಳಸಿ ಕಿಟಕಿಯ ಮುಖಾಂತರ ವಾಚ್ ಸೇರಿದಂತೆ ವಿವಿಧ ವಸ್ತುಗಳನ್ನು ಕದಿಯುತ್ತಿದ್ದಳು.

ಹಸಿರು ಮನೆ ಕೃಷಿಯಿಂದ ಅಧಿಕ ಇಳುವರಿ
ಧಾರವಾಡ: ಕೃಷಿಯಲ್ಲಿ ಹಸಿರು ಮನೆ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ರೈತರು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಉಪಮಹಾಪ್ರಬಂಧಕ ಅಗಸ್ಟಿನ್ ಸ್ಟೀವನ್ ಹೇಳಿದರು. ತಾಲೂಕಿನ ಯಾದವಾಡ-ಲಕಮಾಪುರ ಸಿಂಡಿಕೇಟ್ ಬ್ಯಾಂಕ್ ಶಾಖೆಯ ವತಿಯಿಂದ ಇಲ್ಲಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹಸಿರು ಮನೆ ತರಬೇತಿ ಸಮಾರಂಭದಲ್ಲಿ ಮಾತನಾಡಿದರು. ಹಸಿರು ಮನೆ ಕೃಷಿ ಪದ್ಧತಿಗೆ ಬ್ಯಾಂಕ್ ಶೇ. 75ರಷ್ಟು ಸಹಕಾರ ಒದಗಿಸಿದರೆ, ಸರ್ಕಾರ ಶೇ. 50ರಷ್ಟು ರಿಯಾಯಿತಿ ನೀಡುತ್ತದೆ. ರೈತರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭ ತಾಲೂಕಿನ ಅಮ್ಮಿನಬಾವಿ ರೈತರೊಬ್ಬರ ಹಸಿರು ಮನೆ ಕೃಷಿ ಮಾದರಿಗಳನ್ನು ತೋರಿಸಲಾಯಿತು. ಹಸಿರು ಮನೆ ಕೃಷಿ ಪದ್ಧತಿ ಅಳವಡಿಕೆ ಕುರಿತು ಯಾದವಾಡ ರೈತರಿಗೆ ಆರ್.ವಿ. ಟೆಕ್ನಾಲಜಿ ಸಂಸ್ಥೆ ರಾಘವೇಂದ್ರ ಭಟ್, ಪ್ರೊ. ಬಾಲಾಜಿ ಕುಲಕರ್ಣಿ ತರಬೇತಿ ನೀಡಿದರು.

ಚಿಂಚನಸೂರಗೆ ಜವಳಿ ಖಾತೆ ಬೇಡ
ಹುಬ್ಬಳ್ಳಿ: ನೇಕಾರರ ಸಮಸ್ಯೆಗಳನ್ನು ಪರಿಹರಿಸಲು ಆಸಕ್ತಿ ವಹಿಸದ ಸಚಿವ ಬಾಬುರಾವ್ ಚಿಂಚನಸೂರ ಅವರಿಂದ ಜವಳಿ ಖಾತೆ ಕಿತ್ತುಕೊಂಡು ಬೇರೆಯವರಿಗೆ ನೀಡಬೇಕು ಎಂದು ಆಗ್ರಹಿಸಿ ಶನಿವಾರ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಸದಸ್ಯರು ಪ್ರತಿಭಟಿಸಿದರು. ನೇಕಾರರ ಸಮಸ್ಯೆಗಳ ಬಗ್ಗೆ ಸಚಿವ ಬಾಬುರಾವ ಚಿಂಚನಸೂರ ಅವರಿಗೆ ಮನವಿ ಸಲ್ಲಿಸಿ ಬೆಂಗಳೂರಿನಲ್ಲಿ ನೇಕಾರರ ನಿಯೋಗ ಭೇಟಿಯಾಗಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ 90 ಕೋಟಿ ನಷ್ಟದಲ್ಲಿದೆ. ನಿಗಮದ ಪುನಶ್ಚೇತನಕ್ಕೆ ಸರ್ಕಾರ ಬಜೆಟ್‌ನಲ್ಲಿ ರು. 50 ಕೋಟಿ ಅನುದಾನ ನೀಡಬೇಕು. ಕೈಮಗ್ಗ ಪುನಶ್ಚೇತನಕ್ಕೆ ಸರ್ಕಾರ ಪ್ರತಿವರ್ಷ ನೀಡುತ್ತಿರುವ ರು. 20 ಕೋಟಿ ನೆರವನ್ನು ರು. 50 ಕೋಟಿಗೆ ಹೆಚ್ಚಿಸಬೇಕು. ನಿಗಮದಲ್ಲಿ ಕೆಲಸ ಮಾಡುವ ನೇಕಾರರಿಗೆ ರು. 100-120 ದಿನಗೂಲಿ ಲಭಿಸುತ್ತಿದೆ. ಆದ್ದರಿಂದ ನೇಕಾರರ ಕೂಲಿಯನ್ನು ಶೇ. 50ರಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ನೇತೃತ್ವವನ್ನು ಅಖಿಲ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎನ್.ಜೆ. ಮಾಳವದೆ, ಜಿಲ್ಲಾಧ್ಯಕ್ಷ ನಾಗಪ್ಪ ಬನ್ನಿಗಿಡದ ವಹಿಸಿದ್ದರು.

ಧಾರವಾಡ: 29ರಂದು ಜಾನಪದ ಹಬ್ಬ
ಧಾರವಾಡ: ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಜ. 29ರಂದು ಧಾರವಾಡ ನಗರದಲ್ಲಿ ಬುಡಕಟ್ಟು ಕಲಾವಿದರ ಜನಪದ ಕಲೆಗಳನ್ನು ಪ್ರದರ್ಶಿಸುವ ಜಾನಪದ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 6ಕ್ಕೆ ನಗರದ ರಂಗಾಯಣ ಆವರಣದಲ್ಲಿರುವ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಜಾನಪದ ಹಬ್ಬ ಕಾರ್ಯಕ್ರಮ ನಡೆಯಲಿದೆ. ಜಾನಪದ ಹಬ್ಬದಲ್ಲಿ ಮಹಿಳಾ ಡೊಳ್ಳು ಕುಣಿತ, ತಾಷಾರಂಡೋಲ, ಹಕ್ಕಿ-ಪಿಕ್ಕಿ ಜನಪದ ಕುಣಿತ, ಸಿದ್ಧಿ ಜನಾಂಗದ ಢಮಾಮಿ ಕುಣಿತ ಹಾಗೂ ಪುಗಡಿ ಕುಣಿತ ಸೇರಿದಂತೆ ಇತರ ಬುಡಕಟ್ಟು ಕಲೆಗಳನ್ನು ಜಾನಪದ ಹಬ್ಬದಲ್ಲಿ ಪ್ರದರ್ಶಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ಆಗ್ರಹ
ಧಾರವಾಡ: ನಗರದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಂತೆ ಸರ್ಕಾರಕ್ಕೆ ಆಗ್ರಹಿಸಲಾಯಿತು. ಅಂಜುಮನ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಸೋಫಿಯಾ ಬೇಗಂ ಪಠಾಣ ಸಮ್ಮೇಳನ ಉದ್ಘಾಟಿಸಿದರು. ಸಂಘಟನೆ ರಾಜ್ಯ ಕಾರ್ಯದರ್ಶಿ ಅಪರ್ಣಾ ಬಿ.ಆರ್, ಸಂಘಟನೆ ರಾಜ್ಯ ಉಪಾಧ್ಯಕ್ಷೆ ಎಂ.ಎನ್. ಮಂಜುಳಾ, ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿದರು. ನೂತನ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಭುವನೇಶ್ವರಿ ಬಳ್ಳಾರಿ, ಉಪಾಧ್ಯಕ್ಷರಾಗಿ ನಿರ್ಮಲಾ ಜಿ, ಕಾರ್ಯದರ್ಶಿಯಾಗಿ ಪ್ರಭಾವತಿ ಗೂಗಲ್, ಕಾರ್ಯಕಾರಿ ಸಮಿತಿಯಲ್ಲಿ ಶಶಿಕಲಾ ಪಾಟೀಲ, ಕಲ್ಪನಾ ಬಳಿಗಾರ, ಜಯಶ್ರೀ ಕೆರೂರ, ಮಂಗಳಾ ಜೇವೂರ, ಶ್ರುತಿ ಹಿರೇಮಠ, ಚೈತ್ರಾ ನಾಯ್ಕರ ಸೇರಿ 23 ಸದಸ್ಯರನ್ನೊಳಗೊಂಡ ಸಮಿತಿ ರಚನೆಯಾಯಿತು.
ವಸತಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ: ವಸತಿ ಯೋಜನೆಯಡಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಆಟೋರಿಕ್ಷಾ ಚಾಲಕರ ಸಂಘದ ಸದಸ್ಯರು ಈಚೆಗೆ ಪ್ರತಿಭಟನೆ ಮಾಡಿದರು. 2014ನೇ ಸಾಲಿನ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲಕ್ಕೆ ಅರ್ಜಿ ಸಲ್ಲಿಸಿದವರನ್ನು ಸಂದರ್ಶನಕ್ಕೆ  ಆಹ್ವಾನಿಸಲಾಗಿದ್ದು, ಆಟೋರಿಕ್ಷಾ ಇತರೆ ಸಾಲ ಪಡೆಯಲು ನಿಗಮದ ಅಧಿಕಾರಿಗಳು ಅನವಶ್ಯಕ ದಾಖಲೆಗಳನ್ನು ಕೇಳುತ್ತಿದ್ದಾರೆ. ಅಲ್ಪಸಂಖ್ಯಾತ ವಿರೋಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಟೋ ಚಾಲಕರು ಒತ್ತಾಯಿಸಿದ್ದಾರೆ. ಸಂಘದ ಅಧ್ಯಕ್ಷ ಬಿ.ಎ. ಮುಧೋಳ, ದಾದಾಪೀರ ಬೇಪಾರಿ, ದೇವಾನಂದ ಜಗಾಪುರ, ರಮೇಶ ಭೋಸಲೆ, ಸುಲೇಮಾನ್ ಶೇಖ, ಗೋವಿಂದ ಬಿ., ಅಗಫುರ ಫಣಿಬಂದ, ಅಶೋಕ ಉಪ್ಪಿನ, ಕಾಸೀಮಸಾಬ ಗೂಡೇನವರ ಇದ್ದರು.

ಇಂದು ದಾಸರ ಪದಗಳ ಅಂತಿಮ ಸ್ಪರ್ಧೆ
ಹುಬ್ಬಳ್ಳಿ: ರಾಜ್ಯಮಟ್ಟದ ದಾಸರ ಪದಗಳ ಅಂತಿಮ ಸ್ಪರ್ಧೆ ಹಾಗೂ ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ 3ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ಹೊಸೂರನ ಉತ್ತರ ಕನ್ನಡ ವೈಶ್ಯ ಸಮಾಜ ಕಲ್ಯಾಣ ಮಂಟಪದಲ್ಲಿ ಜ. 26ರಂದು ಏರ್ಪಡಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅಖಿಲ ಭಾರತ ಮಾಧ್ವ ಮಹಾಮಂಡಳದ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಶ್ರೀಪಾದ ಸಿಂಗನಮಲ್ಲಿ, ಮಹಾಮಂಡಳ, ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಧ್ಯಾಹ್ನ 1ರಿಂದ ನಡೆಯುವ ಅಂತಿಮ ಸ್ಪರ್ಧೆಗೆ 18 ಮಕ್ಕಳು ಆಯ್ಕೆಯಾಗಿದ್ದಾರೆ. ಅಂದು ಸಂಜೆ 5.30ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭ, ಪಂ. ಭೀಮಸೇನ ಜೋಶಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗಾಯಕ ಪಂ. ಮಣಿ ಪ್ರಸಾದ, ಪದ್ಮವಿಭೂಷಣೆ ಎನ್. ರಾಜಮ್, ವಿಜಯಾ ಗಟಲೆವಾಲೆ, ಬಿ.ಡಿ. ಹಿರೇಗೌಡ್ರ, ಗೋಪಾಲ್ ಪರ್ವತಿ, ರಾಜಾ ದೇಸಾಯಿ, ಬಾಬುರಾವ್ ಹಾನಗಲ್, ಪ್ರಮೋದ ಮುತಾಲಿಕ, ಅನಂತ ತೇರದಾಳಿ ಪಾಲ್ಗೊಳ್ಳುವರು.

ಚೌಡಯ್ಯ ಒಂದೇ ಕುಲಕ್ಕೆ ಸೀಮಿತರಲ್ಲ: ಶ್ರೀಗಳು
ಕುಂದಗೋಳ: ಅಂಬಿಗರ ಚೌಡಯ್ಯನವರು ಕೇವಲ ಗಂಗಾಮತಸ್ಥರಿಗೆ ಮಾತ್ರ ಸೀಮಿತರಾಗಿಲ್ಲ ಎಂದು ಪಂಚಗ್ರಹ ಹಿರೇಮಠದ ಶ್ರೀ ಶಿತಿಕಂಠ ಶಿವಾಚಾರ್ಯ ಶ್ರೀ ಹೇಳಿದರು. ಪಟ್ಟಣದ ಕುಂಬಾರಗೇರಿಯ ಗಂಗಾಪರಮೇಶ್ವರಿ ಸಮುದಾಯ ಭವನದ ಆವರಣದಲ್ಲಿ ನಡೆದ ಅಂಬಿಗರ ಚೌಡಯ್ಯನವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಾಸಕ ಸಿ.ಎಸ್. ಶಿವಳ್ಳಿ, ಗಂಗಾತಮತಸ್ಥ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಮಾಜ ಬಾಂಧವರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸಲು ತಮ್ಮ ಶಾಸಕರ ಅನುದಾನದಿಂದ ರು. 10 ಲಕ್ಷ ನೀಡುವುದಾಗಿಯೂ ಅವರು ಭರವಸೆ ನೀಡಿದರು. ತಾಲೂಕು ಗಂಗಾಮತಸ್ಥರ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣ ಯರಗುಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಪಪಂ ಸದಸ್ಯ ರಾಜು ಶಿವಳ್ಳಿ, ಬಸವರಾಜ ದೊಡಮನಿ,  ಕಾಂಗ್ರೆಸ್ ಮುಖಂಡ ಅರವಿಂದ ಕಟಗಿ ತಹಸೀಲ್ದಾರ್ ಎಚ್.ಎಂ.ಓಳೇಕಾರ,  ಬಸಮ್ಮ ಬಾರಕೆರ ಇನ್ನಿತರರಿದ್ದರು.

ಪೌರ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
ಹುಬ್ಬಳ್ಳಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಸ್ವಚ್ಛತಾ ಗುತ್ತಿಗೆ ಪದ್ಧತಿ ರದ್ದುಪಡಿಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಕಾರ್ಮಿಕ ಸಚಿವ ಟಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. ಪಾಲಿಕೆಯಲ್ಲಿ ಸುಮಾರು 15 ವರ್ಷಗಳಿಂದ ಗುತ್ತಿಗೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ದಿನಗೂಲಿ ತಳಹದಿ ಮೇಲೆ ಪಾಲಿಕೆ ವತಿಯಿಂದ ಸೇವೆ ಮುಂದುವರೆಸಬೇಕು. ಗುತ್ತಿಗೆದಾರರ ನಿಷ್ಕಾಳಜಿಯಿಂದ ಒಳಚರಂಡಿ, ಮ್ಯಾನ್‌ಹೋಲ್, ನಾಲಾ, ದೊಡ್ಡ ಗಟಾರಗಳಲ್ಲಿ ಸಿಕ್ಕಿ ಹಾಕಿಕೊಂಡು ಅನೇಕ ಕಾರ್ಮಿಕರು ಮೃತಪಟ್ಟಿದ್ದರೂ ಈವರೆಗೂ ಸೂಕ್ತ ಪರಿಹಾರ ನೀಡಲಾಗಿಲ್ಲ ಎಂದರು. ಶಾಸಕ ಪ್ರಸಾದ ಅಬ್ಬಯ್ಯ, ಗುರು ಮಾದರ, ನಿಂಗಪ್ಪ ಹುಲಗೂರ, ಗಾಳೇಪ್ಪ ದ್ಯಾಸಲಕೇರಿ, ಮರಿಯಪ್ಪ ಬುಕನಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ
ಹುಬ್ಬಳ್ಳಿ: ಪರೀಕ್ಷೆ ಸಿದ್ಧತೆ, ಪ್ರಶ್ನೆ ಪತ್ರಿಕೆಗಳ ಸ್ವರೂಪ, ಉತ್ತರ ಬರೆಯುವ ರೀತಿ, ಸಮಯ ಪ್ರಜ್ಞೆಯಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗುತ್ತದೆ ಎಂದು ಪ್ರೊ. ಕೆ.ಎಸ್. ಕೌಜಲಗಿ ಹೇಳಿದರು. ಚೇತನ ಬಿಜಿನೆಸ್ ಸ್ಕೂಲ್‌ನಲ್ಲಿ ದ್ವಿತಿಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರೊ. ಎಂ.ಎಲ್. ಹಿರೇಗೌಡರ, ಲೆಕ್ಕಶಾಸ್ತ್ರ ವಿಷಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಹೆಚ್ಚು ಅಂಕಗಳಿಸುವ ರೀತಿಯನ್ನು ವಿವರಿಸಿದರು. ಪ್ರೊ. ಸಿ.ಎಂ. ದಿನ್ನಿ ಅವರು ವ್ಯವಹಾರ ನಿರ್ವಹಣಾಶಾಸ್ತ್ರ ಹಾಗೂ ಪ್ರೊ. ಅನಿಲಕುಮಾರ, ಸಂಖ್ಯಾಶಾಸ್ತ್ರ ಕುರಿತಾದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದರಲ್ಲದೇ, ಪರೀಕ್ಷೆಯಲ್ಲಿ ಯಾವ ರೀತಿಯ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.

ನಾಳೆಯಿಂದ ವಿದ್ಯಾ ಸಹಾಯಹಸ್ತ ಯೋಜನೆಗೆ ಚಾಲನೆ
ಹುಬ್ಬಳ್ಳಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಜಾರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯುವ ಕಾಂಗ್ರೆಸ್ ಘಟಕದಿಂದ ವಿದ್ಯಾ ಸಹಾಯ ಹಸ್ತ ಯೋಜನೆ ರೂಪಿಸಲಾಗಿದೆ ಎಂದು ಧಾರವಾಡ ಲೋಕಸಭಾ ಯುವ ಕಾಂಗ್ರೆಸ್ ಘಟಕದ ಉಸ್ತುವಾರಿ ಉಮೇಶ ಬೊರೇಗೌಡ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿದ್ಯಾ ಸಹಾಯ ಹಸ್ತ ಯೋಜನೆ ಕಾರ್ಯಕ್ರಮ ಜ. 27ರಿಂದ ಫೆಬ್ರವರಿ 8ರವರೆಗೆ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಹಾಯ ಹಸ್ತ ಕಾರ್ಯಕ್ರಮದಡಿ ಕೆಲಸ ಮಾಡಲಿದ್ದಾರೆ ಎಂದರು. ಧಾರವಾಡ ಲೋಕಸಭಾ ಯುವಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಕೆಯಾಗುವ ಅರ್ಜಿಗಳ ಮಾಹಿತಿ ಪಡೆದು ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಘಟಕದ ಸಂತೋಷ ಜಕ್ಕಪ್ಪನವರ, ಅಷ್ಫಾಕ್ ಕುಮಟಾಕರ್, ಅರೀಫ್ ಇನ್ನಿತರರು ಇದ್ದರು.

ಗಮನ ಸೆಳೆದ ಮಾಧ್ಯಮ ಹಿನ್ನೋಟ
ಧಾರವಾಡ: ಕರ್ನಾಟಕ ವಿವಿಯಲ್ಲಿ ನಡೆದ ನವ ಮಾಧ್ಯಮ ಕುರಿತ ವಿಚಾರ ಸಂಕಿರಣ, ಮಾದ್ಯಮ ಉತ್ಸವದಲ್ಲಿ ರಾಜ್ಯದ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಗಮನ ಸೆಳೆದಿದ್ದು ಮಾದ್ಯಮ ಹಿನ್ನೋಟ ವಸ್ತುಪ್ರದರ್ಶನ. ನೂತನ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವ ಮಾಧ್ಯಮ ಕ್ಷೇತ್ರ. ತನ್ನ ಆರಂಭದ ದಿನಗಳಲ್ಲಿ ಯಾವ ತಂತ್ರಜ್ಞಾನಗಳಿಗೆ ಮೊರೆ ಹೋಗಿತ್ತು. ಆರಂಭದಲ್ಲಿ ಚಾಲ್ತಿ ಇದ್ದ ವಿಡಿಯೋ ರಿಕಾರ್ಡರ್ ವೀಡಿಯೋ ಕ್ಯಾಸೆಟ್ ಪ್ಲೇಯರ್, ಎಕ್ಸಪೋಸರ್ ಮೀಟರ್, ಟೈಪಿಂಗ್ ಮಷಿನ್, ಗ್ರಾಮಾಫೋನ್, ಕೋಡಾಕ್, ಫಿಲ್ಮ್ ಪ್ರೊಜೆಕ್ಟರ್, ರೇಡಿಯೋ, ಛಾಯಾಚಿತ್ರಗಳ ಸಂಸ್ಕರಣೆಗೆ ಬಳಸುವ ಸಾಧನೋಪಕರಣ, ಎಜಿಲ್ ಬೋರ್ಡ್‌ನಂತಹ ವಸ್ತುಗಳು ವಿದ್ಯಾರ್ಥಿಗಳಲ್ಲಿ ವಿಸ್ಮಯ ಮೂಡಿಸಿದವು. ಧಾರವಾಡದ ಎಲ್ಲ ಪತ್ರಿಕೆಗಳ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ ಇದೇ ಸಂದರ್ಭದಲ್ಲಿ ನಡೆಯಿತು.

ಗ್ರಾಮೀಣ ಸೊಗಡಿನ ಕವಿ ಗೋಗೇರಿ
ಧಾರವಾಡ: ಗ್ರಾಮೀಣ ಸೊಗಡಿನ ಕನ್ನಡ ಉಳಿಸಿ ಬೆಳೆಸಿದ ಹಿರಿಯ ಕವಿ ಎಂ.ಡಿ. ಗೋಗೇರಿ ಅವರ ದತ್ತಿ ಅಂಗವಾಗಿ ನಗರದ ವಿದ್ಯಾವರ್ಧಕ ಸಂಘದಲ್ಲಿ ಗೋಗೇರಿ ಅವರ ಕವನಗಳ ವಚನ ಕಾರ್ಯಕ್ರಮ ಜರುಗಿತು. ಕವಿಗಳಾದ ರಾಮಚಂದ್ರ ಪಾಟೀಲ, ಅನಿಲ ದೇಸಾಯಿ, ಡಾ. ಬಸು ಬೇವಿನಗಿಡದ ಹಾಗೂ ಡಾ. ಜಿನದತ್ತ ಹಡಗಲಿ ಅವರು ಗೋಗೇರಿ ರಚಿಸಿದ ಕವನಗಳ ಸರಳತೆ, ವ್ಯಂಗ್ಯ, ವಿನೋದ, ಲಯ ಭಾವಗಳ ಕುರಿತು ಮಾತನಾಡಿದರು.  ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿಪ್ರಾಸ್ತಾವಿಕ ಮಾತನಾಡಿದದರು. ಡಿಡಿಪಿಐ ಡಾ.ಬಿ.ಕೆ.ಎಸ್. ವರ್ಧನ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಎಂ.ಡಿ. ಗೋಗೇರಿ, ತಮ್ಮ ಹಾಸ್ಯಶೈಲಿಯಲ್ಲಿ ಸ್ವರಚಿತ ಕವನಗಳನ್ನು ಲಯಬದ್ಧವಾಗಿ ವಾಚಿಸಿದರು. ಶಂಕರ ಕುಂಬಿ, ಮೋಹನ ನಾಗಮ್ಮನವರ, ರಾಮಚಂದ್ರ ದೋಗಂಡೆ, ಲಾರೆನ್ಸ್ ಝಳಕಿ, ಸುಲಾಕೆ, ಡಾ. ಶಿವಾನಂದ ಗಾಳಿ, ನಿಂಗಣ್ಣ ಕುಂಟಿ, ವೀರಣ್ಣ ಒಡ್ಡೀನ, ಜಿ. ಬಿ. ಹೊಂಬಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement