ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾವೇರಿಯಲ್ಲಿ ಮೆಡಿಕಲ್ ಕಾಲೇಜು

Vishwanath S
Updated On : 27 Jan 2014, 12:27 pm

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 26
ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಅಗತ್ಯವಿದ್ದು, 2014-15ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು ಎಂದು ಸಕ್ಕರೆ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 65ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,
ವಸತಿ ಯೋಜನೆಗಳ ಅನುಷ್ಠಾನದಲ್ಲಿ ಹಾವೇರಿ ಜಿಲ್ಲೆ 2ನೇ ಸ್ಥಾನದಲ್ಲಿದೆ. ಜಿಲ್ಲೆಯ 25 ಗ್ರಾಪಂ ಕಟ್ಟಡ ಕಾಮಗಾರಿಗಳಿಗೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದ್ದು, ರು. 24.5 ಕೋಟಿ ಬಿಡುಗಡೆಯಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಜಿಲ್ಲೆಯ 59 ಗ್ರಾಮಗಳನ್ನು ಆಯ್ಕೆ ಮಾಡಿ ರು. 10.80 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸವಣೂರು ತಾಲೂಕಿನ ಯಲವಿಗಿ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಸರ್ಕಾರ ಘೋಷಿಸಿದ ಎಲ್ಲ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿ, ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಪ್ರವಾಸಿ ತಾಣಗಳಾಗಿ ಬಾಡ, ಕಾಗಿನೆಲೆ
ಭಾರತ ಜಗತ್ತಿನ ಪ್ರಬುದ್ಧ ಪ್ರಜಾಸತ್ತೆಯಾಗಿ ಬೆಳೆದಿದ್ದು, ಮತದಾನದ ಹಕ್ಕು ಪಡೆದ ಯುವಜನರು ಅಬಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಮುನ್ನಡೆಗೆ ನೆರವಾಗಬೇಕು. ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಕಾಮಗಾರಿ ಕೈಗೊಳ್ಳುತ್ತಿದೆ. 16 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹಾವೇರಿ ಜಿಲ್ಲೆ ಈಗ ಎಲ್ಲ ಸಂಪನ್ಮೂಲ ಹೊಂದಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಜಿಲ್ಲೆ ಕೃಷಿ ಪ್ರಧಾನವಾಗಿರುವಂತೆ ಉದ್ಯಮ ರಂಗದಲ್ಲೂ ಗುರುತಿಸುವ ಕಾರ್ಯ ನಡೆದಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಾಗಿನೆಲೆ ಹಾಗೂ ಬಾಡ ಪ್ರವಾಸಿ ತಾಣವಾಗಿ ಹೊರಹೊಮ್ಮಿವೆ ಎಂದು ಹೇಳಿದರು.
ರೈತರಿಗೆ ಭರಪೂರ ನೆರವು: ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ರು. 65 ಕೋಟಿ ಮೊತ್ತದಲ್ಲಿ ಆಹಾರಧಾನ್ಯ ಖರೀದಿಸಿ, ಅನುಕೂಲ ಕಲ್ಪಿಸಲಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರಗಾಲ ಪೀಡಿತ ಎಂದು ಘೋಷಣೆಯಾಗಿರುವ ಶಿಗ್ಗಾಂವಿ, ಸವಣೂರು, ಹಾವೇರಿ, ಹಾನಗಲ್ಲ ತಾಲೂಕುಗಳಲ್ಲಿ ಪ್ರತಿ ಕುಟುಂಬಕ್ಕೆ 150 ದಿನಗಳ ಕೆಲಸ, ಉಳಿದ ತಾಲೂಕುಗಳಲ್ಲಿ 100 ದಿನಗಳ ಕೆಲಸ ಒದಗಿಸಲಾಗಿದೆ. ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆಯಲ್ಲಿ ಜಿಲ್ಲೆಗೆ 30 ಹೊಸ ಬಸ್ ನೀಡಲಾಗಿದ್ದು, ಹೆಚ್ಚುವರಿಯಾಗಿ 60 ಬಸ್ ಮಂಜೂರಾಗಿವೆ. ಜಿಲ್ಲೆಯ ರಸ್ತೆ, ಒಳಚರಂಡಿ, ನೀರು ಪೂರೈಕೆಗಾಗಿ ರು. 116.05 ಲಕ್ಷ ಅಂದಾಜು ಪತ್ರಿಕೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಕೇಂದ್ರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಹುಕ್ಕೇರಿ ಹೇಳಿದರು.
ನಗರೋತ್ಥಾನಕ್ಕೆ ಅನುದಾನ
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಲ್ಲಿ ರು. 75 ಕೋಟಿ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. 2012-13ನೇ ಸಾಲಿನ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಲ್ಲಿ ರು. 88.85 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಶೇ. 50ರ ರಿಯಾಯತಿಯಲ್ಲಿ ಜಿಲ್ಲೆಯ 2,12,198 ರೈತರಿಗೆ 32 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ 47,244 ಅಂತ್ಯೋದಯ, 2,60,022 ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗಿದ್ದು, ಈ ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಲಾಗುತ್ತಿದೆ. 1485 ಶಾಲೆಗಳ 2,02,436 ವಿದ್ಯಾರ್ಥಿಗಳು ಕ್ಷೀರಭಾಗ್ಯ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಬೆಳೆ ಹಾನಿಗೊಳಗಾದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ರು. 12.62 ಕೋಟಿ ಇನ್‌ಪುಟ್ ಸಬ್ಸಿಡಿ ನೀಡಲಾಗಿದೆ ಎಂದು ಸಚಿವ ಹುಕ್ಕೇರಿ ತಿಳಿಸಿದರು.
ಸಾಧಕರಿಗೆ ಸನ್ಮಾನ: ಇದಕ್ಕೂ ಮುನ್ನ ಸಚಿವರು ತೆರೆದ ವಾಹನದಲ್ಲಿ ತೆರಳಿ ಕವಾಯತು ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್, ಗೌಡ್ಸ್ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಾಲಾ ಮಕ್ಕಳು ರಾಷ್ಟ್ರಭಕ್ತಿ ಸಾರುವ ರೂಪಕಗಳನ್ನು ಪ್ರದರ್ಶಿಸಿದರು. ನಗರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಗಂಗಾಧರ ಹೂಗಾರ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಶಾಸಕ ರುದ್ರಪ್ಪ ಲಮಾಣಿ, ಸಂಸದ ಶಿವಕುಮಾರ ಉದಾಸಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ, ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಎಸ್ಪಿ ಎನ್. ಶಶಿಕುಮಾರ, ಕೊಟ್ರೇಶಪ್ಪ ಬಸೇಗಣ್ಣಿ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಇದ್ದರು.
ವಸತಿ ಯೋಜನೆಗಳ ಅನುಷ್ಠಾನದಲ್ಲಿ ಹಾವೇರಿ ಜಿಲ್ಲೆ 2ನೇ ಸ್ಥಾನದಲ್ಲಿದೆ. ಜಿಲ್ಲೆಯ 25 ಗ್ರಾಪಂ ಕಟ್ಟಡ ಕಾಮಗಾರಿಗಳಿಗೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದ್ದು, ರು. 24.5 ಕೋಟಿ ಬಿಡುಗಡೆಯಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಜಿಲ್ಲೆಯ 59 ಗ್ರಾಮಗಳನ್ನು ಆಯ್ಕೆ ಮಾಡಿ ರು. 10.80 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸವಣೂರು ತಾಲೂಕಿನ ಯಲವಿಗಿ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಸರ್ಕಾರ ಘೋಷಿಸಿದ ಎಲ್ಲ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿ, ಮಾದರಿಯಾಗಿದೆ.
- ಪ್ರಕಾಶ ಹುಕ್ಕೇರಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement