ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೋದಿ ಪ್ರಧಾನಿಯಾಗೋದು ಅನಿವಾರ್ಯ: ಸಿ.ಎಂ. ಉದಾಸಿ

Vishwanath S
Updated On : 28 Jan 2014, 11:20 am

ಬ್ಯಾಡಗಿ: ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ದೇಶ ಆಂತರಿಕ ಭದ್ರತೆಯ ಸಮಸ್ಯೆ ಎದುರಿಸುತ್ತಿದ್ದು, ನರೇಂದ್ರ ಮೋದಿ ಅವರಂಥ ಸಮರ್ಥ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಒದಗಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಅಭಿಪ್ರಾಯಪಟ್ಟರು.
ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದ್ಧತೆಯಿಲ್ಲದೆ ಆಡಳಿತ ನಡೆಸಿದ ಯುಪಿಎ ಸರ್ಕಾರದಿಂದ ದೇಶ ಸುಧಾರಿಸಿಕೊಳ್ಳಲು ಹಲವು ದಶಕಗಳೇ ಬೇಕು. ಅಭಿವೃದ್ಧಿ ದೃಷ್ಟಿಯಿಂದ ದೇಶವನ್ನು ಮತ್ತೊಮ್ಮೆ ಕಾಂಗ್ರೆಸ್ ಕೈಗೆ ನೀಡಬಾರದು ಎಂಬ ನಿರ್ಧಾರಕ್ಕೆ ಬಂದ ಕೆಜೆಪಿ ಮುಖಂಡರು ಬಿಜೆಪಿಯೊಂದದಿಗೆ ವಿಲೀನ ಮಾಡಿಕೊಂಡರು. ಗುಜರಾತ್‌ನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ವಿಶ್ವಕ್ಕೇ ಮಾದರಿಯಾಗಬಲ್ಲವು. ಮೋದಿ ಪ್ರಧಾನಿಯಾದ ಬಳಿಕ ಅದೇ ಮಾದರಿಯಲ್ಲಿ ದೇಶದ ಅಭಿವೃದ್ಧಿ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉದಾಸಿ, ವಿಲೀನಕ್ಕೂ ಮನ್ನ ಯಾವುದೇ ಒಡಂಬಡಿಕೆಗಳಾಗಿಲ್ಲ, ಸೋಲಿನ ಆತ್ಮಾವಲೋಕನ ಮಾಡಿಕೊಂಡ ಎರಡೂ ಪಕ್ಷದ ನಾಯಕರು ವಿಲೀನ ನಿರ್ಧಾರಕ್ಕೆ ಬಂದಿದ್ದಾರೆ. ಶಿವಮೊಗ್ಗಕ್ಕೆ ಬಿಎಸ್‌ವೈ, ಹಾವೇರಿಗೆ ಸಿ.ಎಂ. ಉದಾಸಿ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ ಎಂದರು.
ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೆಸರು ಅಂತಿಮವಾದ ಬಳಿಕ ಕೆಜೆಪಿಯ ಮುಖಂಡರು ಬಿಜೆಪಿಯಲ್ಲಿ ವಿಲೀನಕ್ಕೆ ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ, ಪರಿಷತ್ ಚುನಾವಣೆಯಲ್ಲಿ ಪ್ರದೀಪ್ ಶೆಟ್ಟರ್‌ಗೆ ಬೆಂಬಲ ಸೂಚಿಸಲಾಯಿತು. ಕೆಜೆಪಿ-ಬಿಜೆಪಿ ವಿಲೀನ ಒತ್ತಾಯದ ಮದುವೆ ಅಲ್ಲ. ಎಲ್ಲರೂ ಚರ್ಚಿಸಿ ತೀರ್ಮಾನಿಸಲಾಗಿದೆ. ಇರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶಗಳಲ್ಲಿ ಚರ್ಚಿಸಿ, ಸರಿಪಡಿಸಲಾಗುವುದು ಎಂದರು. ವಿರೂಪಾಕ್ಷಪ್ಪ ಬಳ್ಳಾರಿ, ಮುರಿಗೆಪ್ಪ ಶೆಟ್ಟರ ರವೀಂದ್ರ ಪಟ್ಟಣಶೆಟ್ಟಿ ಇದ್ದರು.
ಸ್ಪರ್ಧಿಸುವುದಿಲ್ಲ, ನಿವೃತ್ತಿಯೂ ಇಲ್ಲ
ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಿಂದ ತಾವು ಸ್ಪರ್ಧಿಸುವಂತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ನಾನು ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ರಾಜಕೀಯ ನಿವೃತ್ತಿ ಘೋಷಿಸುವ ವಿಚಾರವೂ ಸದ್ಯಕ್ಕಿಲ್ಲ ಎಂದು ಸಿ.ಎಂ. ಉದಾಸಿ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement