ಸಾಹಿತ್ಯ ಸಮ್ಮೇಳನ ಸ್ಥಳ ನಿಗದಿ: ಒಮ್ಮತಕ್ಕೆ ಕಸಾಪ ವಿಫಲ
ಹಾವೇರಿ: 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಸಬೇಕೋ ಅಥವಾ ರಾಣಿಬೆನ್ನೂರಿನಲ್ಲೋ ಎಂಬ ಕುರಿತು ಚರ್ಚಿಸಲು ಸೋಮವಾರ ಕರೆದಿದ್ದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ ಸಭೆಯನ್ನು ಮುಂದೂಡಲಾಗಿದೆ.
ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಆರಂಭವಾದ ಕಸಾಪ ಕಾರ್ಯಕಾರಿ ಸಮಿತಿ ಸಭೆ ರಾತ್ರಿ 10ರ ತನಕ ನಡೆದರೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ತೀವ್ರ ಗೊಂದಲ ಏರ್ಪಟ್ಟಿದ್ದರಿಂದ ಸಭೆ ಮೊಟಕುಗೊಳಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಮಾತನಾಡಿ, ಸಮ್ಮೇಳನ ಸ್ಥಳ ನಿಗದಿ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಹಾವೇರಿ ಅಥವಾ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಅಭಿಪ್ರಾಯ ಪಡೆಯಲಾಯಿತು. ಸಭೆಯಲ್ಲಿ 16 ಸದಸ್ಯರು ಹಾಜರಿದ್ದರು. ಆದರೆ ಸಮ್ಮೇಳನ ಸ್ಥಳವನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮತ್ತೊಮ್ಮೆ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾವೇರಿ ನಗರದಲ್ಲೇ ಸಮ್ಮೇಳನ ನಡೆಸಬೇಕು ಎಂದು ಪ್ರತಿಭಟನೆ ನಡೆಸಿದರು. ಪೊಲೀಸ್ ಬಿಗು ಬಂದೋಬಸ್ತ್ನಲ್ಲೇ ಸಭೆ ನಡೆಸಲಾಯಿತು. ಕಸಾಪ ಕೇಂದ್ರ ಸಮಿತಿ ಹಾವೇರಿಯಲ್ಲಿ ಸಮ್ಮೇಳನ ನಡೆಸಬೇಕು ಎಂದು ಘೋಷಿಸಿರುವಾಗ ಜಿಲ್ಲಾ ಸಮಿತಿ ಸಭೆ ಸೇರಿ ಮತ್ತೆ ಸ್ಥಳ ನಿಗದಿಪಡಿಸುವ ಔಚಿತ್ಯವನ್ನು ಕಾರ್ಯಕರ್ತರು ಪ್ರಶ್ನಿಸಿದರು. ಕಸಾಪ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಭೆ ಮುಂದೂಡಿ ಹೊರಬಂದ ಕಸಾಪ ಅಧ್ಯಕ್ಷ ಮಾಸಣಗಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಸಮ್ಮೇಳನ ಹಾವೇರಿಯಲ್ಲೇ ನಡೆಸಬೇಕು ಎಂದು ಒತ್ತಾಯಿಸಿದರು. ಒಮ್ಮೆ ಘೋಷಣೆಯಾದ ಮೇಲೆ ಜಿಲ್ಲಾ ಸಮಿತಿ ಸ್ಥಳ ಬದಲಾವಣೆಗೆ ಬೈಲಾದಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಇದಾವುದಕ್ಕೂ ಉತ್ತರಿಸದೆ ಪೊಲೀಸ್ ಭದ್ರತೆಯಲ್ಲಿ ಮಾಸಣಗಿ ಹಾಗೂ ಕೆಲ ಸದಸ್ಯರು ಹೊರನಡೆದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಸಭೆಗೆ ಹಾಜರಾಗದೇ ಉದಾಸೀನತೆ ತೋರಿದ್ದಕ್ಕೂ ಕಸಾಪ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.