ಆರ್ಥಿಕ ಜ್ಞಾನವಿದ್ದಾಗ ಪ್ರಗತಿ: ಸಂಸದ ಉದಾಸಿ
ಹಾವೇರಿ: ಆರ್ಥಿಕ ಜ್ಞಾನವಿದ್ದಾಗ ದೇಶದ ಪ್ರಗತಿ ಸಾಧ್ಯ. ದುಡ್ಡಿಗೆ ಯಾವುದೇ ಜಾತಿ, ಮತ, ಧರ್ಮ ಎಂಬ ಭೇದ-ಭಾವ ಇಲ್ಲ. ಆರ್ಥಿಕ ಸಮಾನತೆ ಸಾಧಿಸಲು ಅವಕಾಶ ಬೇಕು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಮಾಗಾವಿ ಚೇಂಬರ್ಸ್ನಲ್ಲಿ ಸಿಂಡಿಕೇಟ್ ಬ್ಯಾಂಕ್ ಆಯೋಜಿಸಿದ್ದ ಗ್ರಾಹಕರ ಸಮಾವೇಶ ಮತ್ತು ಸಾಲ ವಿತರಣೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕ್ಗಳು ಹಲವಾರು ಯೋಜನೆಗಳ ಮೂಲಕ ಸಾಲ ನೀಡುತ್ತಿದ್ದು, ರೈತರಿಗೆ ಜೀವನ ಕಟ್ಟಿಕೊಡುತ್ತಿವೆ. ಪ್ರಾಮಾಣಿಕವಾಗಿ ದುಡಿದು ಬ್ಯಾಂಕ್ಗೆ ಸಾಲ ಮರುಪಾವತಿಸಿದರೆ, ಮತ್ತೊಬ್ಬ ರೈತರಿಗೆ ಸಾಲ ನೀಡಲು ಸಹಾಯ ಸಿಗುತ್ತದೆ ಎಂದು ಸಲಹೆ ನೀಡಿದರು. ಹುಬ್ಬಳ್ಳಿ ವಲಯದ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ನಿರ್ದೇಶಕ ನಜೀರ ಅಹಮದ್ ಸಿ.ಆರ್. ಮಾತನಾಡಿದರು. ಜಿಲ್ಲೆಯ 122 ರೈತರಿಗೆ ರು. 3.50 ಕೋಟಿ ಸಾಲದ ಚೆಕ್ ವಿತರಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ಸಹಾಯಕ ಪ್ರಬಂಧಕ ಭರಮಗೌಡ ಎಚ್.ವಿ., ಸ್ಥಳೀಯ ಶಾಖೆ ಪ್ರಬಂಧಕ ಎಸ್.ಎಸ್. ಹಿರೇಮಠ ಇದ್ದರು. ಪ್ರೇಮಕ್ಕ, ಸಂಗಡಿಗರು ಪ್ರಾರ್ಥಿಸಿದರು. ಗೋಪಾಲ ನಾಯಕ ನಿರೂಪಿಸಿದರು.