ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಟಿಸಿ ಅಳವಡಿಸಲು ರು. 25 ಸಾವಿರ ಲಂಚ

Vishwanath S
Updated On : 29 Jan 2014, 11:11 am

ಬ್ಯಾಡಗಿ: ರೈತರು ಕೊಳವೆ ಬಾವಿಗಳಿಗೆ ಟಿಸಿ ಅಳವಡಿಸಲು ಹೆಸ್ಕಾಂ ಅಧಿಕಾರಿಗಳಿಗೆ ರು. 15ರಿಂದ 25 ಸಾವಿರ ಲಂಚ ನೀಡಬೇಕಾಗಿದೆ ಎಂದು ಆರೋಪಿಸಿ, ಅವರನ್ನು ಸ್ಥಳಕ್ಕೆ ಕರೆಸುವಂತೆ ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ಮಲ್ಲೂರಿನ ಜನಸ್ಪಂದನ ಸಭೆಯಲ್ಲಿ ಸೋಮವಾರ ನಡೆಯಿತು.
ರೈತರಾದ ಉಮ್ರಾನ್ ಅಲಿ ಮಾಳಿ ಹಾಗೂ ಶಕೀಲ್ ಅಹ್ಮದ್ ಮಾಳಿ ಮಾತನಾಡಿ, ಟಿಸಿ ಕೆಟ್ಟು ಹೋಗಿ ಕೊಳವೆ ಬಾವಿ ಸ್ಥಗಿತಗೊಂಡಿದೆ. ಟಿಸಿ ಅಳವಡಿಸಲು ಮನವಿ ಮಾಡಿಕೊಂಡರೆ ರು. 25 ಸಾವಿರ ಲಂಚ ಕೇಳಿದ್ದಾರೆ. ಹಣ ಕೊಡದಿದ್ದರೆ ಕಚೇರಿಗೆ ಅಲೆದಾಡಿಸುತ್ತಾರೆ. ಮನೆಯಲ್ಲಿದ್ದ ಒಡವೆ ಅಡವಿಟ್ಟು ರು.  25 ಸಾವಿರ ಕೂಡಿಸಿಕೊಟ್ಟರೂ 20 ದಿನಗಳ ಬಳಿಕ ಟಿಸಿ ಅಳವಡಿಸಿದರು. ಇದರಿಂದ ನಮ್ಮ ವೀಳ್ಯದೆಲೆ ತೋಟ ಹಾಳಾಗಿ, ಲಕ್ಷಾಂತರ ನಷ್ಟವಾಗಿದೆ ಎಂದು ಆರೋಪಿಸಿದರು. ಲಂಚದ ಹಣ ವಾಪಸ್ ಕೊಡಿಸಿ. ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಿ ಎಂದು ಮನವಿ ಮಾಡಿದರು.
ಹೆಸ್ಕಾಂ ಅಧಿಕಾರಿಗಳು ಗೈರು ಹಾಜರಿದ್ದ ಕಾರಣ, ಲಂಚ ಪಡೆದ ಬಗ್ಗೆ ಲಿಖಿತ ದೂರು ನೀಡಿದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಗ್ರಾಮದ ಮೂರು ಅಂಗನವಾಡಿ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ಹೊಸ ಕಟ್ಟಡ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಲು ಸಿಡಿಪಿಒ ಜೆ.ಟಿ. ಶಿರೋಳಕರ ಹಾಜರಿರಲಿಲ್ಲ. ಇದರಿಂದ ಸಿಟ್ಟಾದ ಶಾಸಕರು, ಅಧಿಕಾರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಹದಿನೈದು ವರ್ಷಗಳ ಹಿಂದೆ ಗ್ರಾಮದ ಫಾತಿಮಾ ಹಾಲಿಗಿ ಎಂಬುವರಿಗೆ ಗ್ರಾಪಂ ಮನೆ ಹಕ್ಕುಪತ್ರ ನೀಡಿದ್ದು, ಈ ವರೆಗೂ ಅಧಿಕಾರಿಗಳು ನಿವೇಶನ ಹಾಗೂ ಮನೆ ನೀಡಿಲ್ಲ ಎಂಬ ದೂರು ಸಭೆಯಲ್ಲಿ ವ್ಯಕ್ತವಾಯಿತು. ಮುಂದಿನ ಗ್ರಾಮಸಭೆಯಲ್ಲಿ ಮನೆ ಮಂಜೂರು ಮಾಡುವಂತೆ ತಹಸೀಲ್ದಾರ್ ಶಿವಶಂಕರ ನಾಯಕ್ ಪಿಡಿಒಗೆ ಸೂಚಿಸಿದರು.
ಗ್ರಾಮದಲ್ಲಿ ಮೂರು ತಿಂಗಳಿಗೊಮ್ಮೆ ನದಿ ನೀರನ್ನು ಪೂರೈಸಲಾಗುತ್ತಿದೆ. ಕೆಲವೊಮ್ಮೆ ಕೊಳವೆ ಬಾವಿ ನೀರನ್ನೂ ಮಿಶ್ರಣ ಮಾಡುವುದರಿಂದ ಜನರು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೂಡಲೇ ಪೈಪ್‌ಲೈನ್ ದುರಸ್ತಿ ಮಾಡಿ, ಶುದ್ಧ ನೀರು ಪೂರೈಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಪ್ರತಿಕ್ರಿಯಿಸಿ, ಗ್ರಾಮದಲ್ಲಿ ಇನ್ನು 15 ದಿನಗಳಲ್ಲಿ ಶುದ್ಧ ನೀರಿನ ಘಟಕಕ್ಕೆ ಚಾಲನೆ ಸಿಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement