ವೀರಗಾಸೆಗೆ ವ್ಯಾಪಕ ಮನ್ನಣೆ ಸಿಗಲಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 28
ವೀರಭದ್ರನಿಗೆ ಭಾರತೀಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವಿದೆ. ಶಿವ ಸಂಸ್ಕೃತಿಯ ರೂವಾರಿಯಾದ ವೀರಭದ್ರಸ್ವಾಮಿಯ ಪರಂಪರೆಗೆ ಹೊಸಬೆಳಕು ತರುವುದು ಹಾಗೂ ಜಾನಪದ ವೀರಗಾಸೆ ಕಲೆಗೆ ರಾಷ್ಟ್ರೀಯ ಮನ್ನಣೆ ಸಿಗುವಂತೆ ಮಾಡುವುದೇ ಈ ರಾಷ್ಟ್ರೀಯ ವಿಚಾರ ಸಂಕಿರಣದ ಮೂಲ ಗುರಿ ಎಂದು ಬಾಳೆಹೊನ್ನೂರು ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರು ಅಭಿಪ್ರಾಯಪಟ್ಟರು.
ಇಲ್ಲಿಯ ರಂಭಾಪುರೀ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವೀರಶೈವ ಸದ್ಬೋಧನ ಸಂಸ್ಥೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವೀರಭದ್ರ ಪರಂಪರೆ ಮತ್ತು ಜಾನಪದ ಸಂಸ್ಕೃತಿ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇನ್ನಷ್ಟು ಸಂಶೋಧನೆ ಆಗಲಿ
ವೀರಭದ್ರನ ಪರಂಪರೆ ನಾಡಿನೆಲ್ಲೆಡೆ ಬೆಳೆದುಕೊಂಡು ಬಂದಿದೆ. ವೇದಾಗಮಗಳಲ್ಲಿ, ಪುರಾಣ ಪುಣ್ಯಕಥೆಗಳಲ್ಲಿ, ಶಾಸನಶಿಲ್ಪಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿ ವೀರಭದ್ರನ ವಿಶಿಷ್ಟ ಕುರುಹುಗಳನ್ನು ಕಾಣಬಹುದು. ವೀರಭದ್ರನ ಬಗೆಗೆ ಹೆಚ್ಚು ಸಂಶೋಧನೆ ನಡೆಯಬೇಕು. ಮೂರು ದಿನಗಳ ಈ ವಿಚಾರ ಸಂಕಿರಣ ವೀರಭದ್ರ ಪರಂಪರೆಗೆ ಹೊಸ ಆಯಾಮ ತಂದು ಕೊಡಬಲ್ಲುದೆಂಬ ವಿಶ್ವಾಸವಿದೆ. ಸಂಶೋಧಕರು ಮತ್ತು ವಿದ್ವಾಂಸರು ಮಂಡಿಸಿದ ಪ್ರಬಂಧಗಳನ್ನು ಸಂಕಲನಗೊಳಿಸಿ ಮಾ. 14ರಂದು ಜರುಗಲಿರುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಸಂದರ್ಭದಲ್ಲಿ ಪ್ರಕಟಿಸಲಾಗುವುದು ಎಂದರು.
ಕರ್ನಾಟಕದಲ್ಲಿ ಬೆಳೆದು ಬಂದಿರುವ ವೀರಗಾಸೆ, ಪುರವಂತಿಕೆ ಕಲೆಗೆ ಸರ್ಕಾರ ಹಾಗೂ ಅಕಾಡೆಮಿಗಳು ಹೆಚ್ಚಿನ ಮನ್ನಣೆ ನೀಡಬೇಕು. ಕಲಾವಿದರ ಬದುಕಿಗೆ ಆಸರೆಯಾಗಬೇಕೆಂದು ಅವರು ಆಗ್ರಹಿಸಿದರು.
ವಿಶಿಷ್ಟ ಸ್ಥಾನ
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ವೀರಭದ್ರನಿಗೆ ವಿಶಿಷ್ಟ ಸ್ಥಾನವಿದೆ. ವೀರಗಾಸೆ ಕಲೆಗೆ ಪ್ರಾಚೀನ ಇತಿಹಾಸವಿದೆ. ಈ ಕುರಿತು ಹೆಚ್ಚು ಅಧ್ಯಯನ ನಡೆಯಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶಿ ಸಂಸ್ಕೃತಿಯನ್ನು ಕಾಪಾಡುವ ಹೊಣೆ ನಮ್ಮದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಮಾತನಾಡಿ, ಜಾನಪದ ಕ್ಷೇತ್ರ ಜಗತ್ತಿನ ಗಮನ ಸೆಳೆದಿದೆ. ಭಾರತೀಯ ಸಂಸ್ಕೃತಿಯಲ್ಲಿ ಬಹುಮುಖಿಯಾಗಿರುವ ಜಾನಪದ ಕಲೆಗಳು ಹಾಗೂ ಆಚರಣೆಗಳನ್ನು ಅಧ್ಯಯನ ಮಾಡಬೇಕಿದೆ ಎಂದರು.
ಕಲಾವಿದರಿಗೆ ಮಾಸಾಶನ ಕೊಡಿ
ಮಾಜಿ ಸಂಸದ ಮಂಜುನಾಥ ಕುನ್ನೂರು, ವೀರಭದ್ರ ಪರಂಪರೆ ಕುರಿತು ಹತ್ತು ಹಲವು ವಿಚಾರವು ಹೊರಬರಲಿ. ವೀರಗಾಸೆ ಕಲಾವಿದರಿಗೆ ಸರ್ಕಾರ ಮಾಸಾಶನ ನೀಡಿ ಗೌರವಿಸಬೇಕು. ಸಮುದಾಯದ ಒಳಿತಿಗೆ ಇಂತಹ ಕಾರ್ಯಕ್ರಮ ನಡೆಯಲಿ ಎಂದರು.
ಶಂಬಣ್ಣ ಶಿರೂರು, ಡಾ ಸಂಗಮೇಶ ಸವದತ್ತಿಮಠ ಅವರಿಗೆ ಗುರುರಕ್ಷೆ ನೀಡಿ ಗೌರವಿಸಿದರು. ಮಹಾವಿದ್ಯಾಲಯದ ಆಡಳಿತಾಧಿಕಾರಿ ವಿಶ್ವನಾಥ ಕಂಬಾಳಿಮಠ ಸ್ವಾಗತಿಸಿದರು. ಡಾ ಕೊಟ್ಟರು ಬಸವೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ ಸಿ.ಎಚ್. ತಾವರಗೊಂದಿ ವಂದಿಸಿದರು. ಪ್ರೊ ಪಿ.ಸಿ. ಹಿರೇಮಠ ಹಾಗೂ ಗಿರಿಜಾ ದುರ್ಗದಮಠ ನಿರೂಪಿಸಿದರು.
ನಾಡಿನ ವಿವಿಧ ಭಾಗದಿಂದ ನೂರಾರು ವಿದ್ವಾಂಸರು ಹಾಗೂ ವೀರಗಾಸೆ ಕಲಾವಿದರು ಪಾಲ್ಗೊಂಡಿದ್ದರು.