29ರ ವಸಂತದಲ್ಲಿ ಹೊನ್ನಮ್ಮದೇವಿ ಕಾಲೇಜು
ರಾಣಿಬೆನ್ನೂರು: ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದ ಗ್ರಾಮಾಂತರ ಪ್ರದೇಶದ ಬಡವರ ಹಾಗೂ ರೈತರ ಮಕ್ಕಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಲೇಜು ಶಿಕ್ಷಣ ನೀಡುವುದಕ್ಕಾಗಿ ರಾಣಿಬೆನ್ನೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ನಾಗಪ್ಪ ಬೆಲ್ಲದ ಅವರು 28 ವರ್ಷಗಳ ಹಿಂದೆ ಹೊನ್ನತ್ತಿ ಗ್ರಾಮದಲ್ಲಿ ಸ್ಥಾಪಿಸಿರುವ ಹೊನ್ನಮ್ಮದೇವಿ ಪ.ಪೂ ಕಾಲೇಜಿಗೀಗ 29ರ ಹರೆಯ.
ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾದ ಗ್ರಾಮ: ತಾಲೂಕು ಕೇಂದ್ರ ಸ್ಥಾನದಿಂದ ಉತ್ತರಕ್ಕೆ ಮಾಸೂರು-ಮುಂಡರಗಿ ರಾಜ್ಯ ಹೆದ್ದಾರಿಯಲ್ಲಿ 18 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಪರಂಪರೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಿಡೆಂಬುದಕ್ಕೆ ಸಾಕಷ್ಟು ಸಾಕ್ಷಾಧಾರಗಳು, ಪುರಾತನ ಶಿಲ್ಪಕಲೆಗಳನ್ನು ಸಾರುವ ಹೊನ್ನಮ್ಮ ದೇವಿ ದೇವಸ್ಧಾನ, ತಾಲೂಕಿನ ಪ್ರೇಕ್ಷಣೀಯ ಸ್ಥಳವೆಂಬ ಖ್ಯಾತಿಗೆ ಪಾತ್ರವಾಗಿದೆ. ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ದೇಶಭಕ್ತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದಿಲ್ಲ ಒಂದು ರೀತಿಯಿಂದ ಸಹಕಾರ ನೀಡಿದ್ದ ಗ್ರಾಮವೆಂಬ ಖ್ಯಾತಿ ಹೊಂದಿದೆ. ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ವೀಳ್ಯದೆಲೆ ಬೆಳೆಯುವ ಪರಿಣಿತ ರೈತರನ್ನು ಹೊಂದಿರುವ ಗ್ರಾಮ ಹೊನ್ನತ್ತಿ.
ದೇಶ ಭಕ್ತರು, ಸಮಾಜ ಸೇವಕರಾದ ದಿ. ಲಿಂಗಪ್ಪ ಚನ್ನಬಸಪ್ಪ ಬೆಲ್ಲದ ಅವರ ಪುತ್ರರಾದ ತಾಲೂಕಿನ ಮಾಜಿ ಶಾಸಕ ನಾಗಪ್ಪ ಬೆಲ್ಲದ ಅವರು ತಮ್ಮ ತಂದೆ-ತಾಯಿಗಳ ಹೆಸರನ್ನು ಅಜರಾಮರವಾಗಿ ಉಳಿಸುವುದಕ್ಕಾಗಿ ಯಾವ ಕಾರ್ಯ ಪ್ರಾರಂಭಿಸಿದರೆ ಸೂಕ್ತವೆಂಬ ಆಲೋಚನೆಯಲ್ಲಿದ್ದರು. ಆ ಸಮಯ ಮನಸ್ಸಿನಲ್ಲಿ ಮೂಡಿ ಬಂದಿರುವ ವಿಚಾರದ ಪ್ರತಿಬಿಂಬವಾಗಿ 28 ವರ್ಷಗಳ ಹಿಂದೆ 1985ರಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದ ಗ್ರಾಮಾಂತರ ಪ್ರದೇಶದ ಬಡವರ ಹಾಗೂ ರೈತರ ಮಕ್ಕಳಿಗೆ ಕಾಲೇಜು ಶಿಕ್ಷಣ ನೀಡುವುದಕ್ಕಾಗಿ ಹೊನ್ನಮ್ಮ ದೇವಿ ಮಹಿಳಾ ಮಂಡಳದವರ ಸಹಕಾರದೊಂದಿಗೆ ಹೊನ್ನಮ್ಮ ದೇವಿಯ ಹೆಸರಿನಲ್ಲಿಯೇ ಪದವಿಪೂರ್ವ ಕಾಲೇಜು ಪ್ರಾರಂಭವಾಯಿತು. ಇಂಗ್ಲಂಡಿನಲ್ಲಿರುವ ಭಾರತೀಯ ಡಾ. ಮೋಹನ. ವಿ. ಮುಂಡಾಸ ಅವರು ಉದ್ಘಾಟಿಸಿದ್ದರೆಂದು ಈಗ ವಿಶ್ರಾಂತಿ ಜೀವನ ನಡೆಸುತ್ತಿರುವ ಮಾಜಿ ಶಾಸಕ ನಾಗಪ್ಪ ಬೆಲ್ಲದ ಹೆಮ್ಮೆಯಿಂದ ನುಡಿಯುತ್ತಾರೆ.
3 ಜಿಲ್ಲೆಯ ಗ್ರಾಮಗಳಿಂದ ಆಗಮಿಸುವ ವಿದ್ಯಾರ್ಥಿಗಳು: ಹಾವೇರಿ, ಗದಗ ಹಾಗೂ ಬಳ್ಳಾರಿ ಜಿಲ್ಲೆಯ ಗಡಿ ಅಂಚಿನಲ್ಲಿ ಹರಿದಿರುವ ತುಂಗಭದ್ರಾ ನದಿ ಸಮೀಪದಲ್ಲಿ ಮಾಸೂರು-ಮುಂಡರಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವುದೇ ಪ್ರೇಕ್ಷಣಿಯ ಸ್ಥಳ ಹೊನ್ನತ್ತಿ ಗ್ರಾಮ. 28 ವರ್ಷಗಳ ಹಿಂದೆ ಪ್ರಾರಂಭಗೊಂಡಿದ್ದ ಹೊನ್ನಮ್ಮದೇವಿ ಪದವಿಪೂರ್ವ ಕಾಲೇಜಿಗೆ ಬಳ್ಳಾರಿ ಜಿಲ್ಲೆಯ ಹಾವನೂರು, ಹರವಿ, ಹೋಳಲು, ಕತ್ತೆಬೆನ್ನೂರು, ಬೂದನೂರು, ಹ್ಯಾಡ್ಲ, ಹಿರೇಕುರುವತ್ತಿ, ಮೈಲಾರ ಗ್ರಾಮಗಳಿಂದ ಹಾವೇರಿ ತಾಲೂಕಿನ ಹೊಸರಿತ್ತಿ, ಗುತ್ತಲ, ಬರಡಿ, ಬಸಾಪುರ, ಕಂಚಾರಗಟ್ಟಿ, ಎಂ.ಜಿ. ತಿಮ್ಮಾಪುರ, ಯಲಗಚ್ಚು, ಗುತ್ತಲ ತಾಂಡಾದಿಂದ, ರಾಣಿಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ, ಮೇಡ್ಲೆರಿ ದೇವರಗುಡ್ಡ, ಗುಡ್ಡದಆನ್ವೇರಿ, ಕಮದೋಡ, ಹುಣಶಿಕಟ್ಟಿ, ಚೌಡಯ್ಯದಾನಪುರ, ಗುಡಗೂರು, ಮೈದೂರು, ಹನುಮಾಪುರ, ನೂಕಾಪುರ, ಕೇರಿಮಲ್ಲಾಪುರ, ಚಿಕ್ಕಅರಳಿಹಳ್ಳಿ, ಗಂಗಾಪುರ ಹಾಗೂ ಬ್ಯಾಡಗಿ ತಾಲೂಕಿನ ಕಲ್ಲೆದೇವರು, ಬುಡಪನಹಳ್ಳಿ, ಮೂಟೆಬೆನ್ನೂರು ಸೇರಿ ನೂರಾರು ಗ್ರಾಮಗಳ ಬಡ ರೈತರ ಮಕ್ಕಳು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಪಡೆದು ಈಗ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆಂದು ಕಾಲೇಜಿನ ಪ್ರಾಚಾರ್ಯ ವೈ.ಯು. ತಳವಾರ ಸಂತಸದ ನುಡಿಗಳನ್ನಾಡಿದರು.
ಸಾಧನೆ: 28 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಹೆಸರಾಂತ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿರುವ ಈ ಕಾಲೇಜಿನಲ್ಲಿ ಓದಿರುವ ವಿದ್ಯಾರ್ಥಿಗಳು ರಾಜ್ಯ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೆ ಛಾಪು ಮೂಡಿಸಿಕೊಂಡಿರುವ 3 ಜಿಲ್ಲೆಗಳಲ್ಲಿ ಹೆಸರು ಗಳಿಸಿರುವ ಹೊನ್ನತ್ತಿಯ ಹೊನ್ನಮ್ಮ ದೇವಿ ಪದವಿಪೂರ್ವ ಕಾಲೇಜು 29 ಹರೆಯಕ್ಕೆ ಕಾಲಿಟ್ಟಿದೆ. 2014 ಜ. 31ರಂದು 28ನೇ ವಾರ್ಷಿಕ ಸ್ನೇಹ ಸಮ್ಮೇಳನ ಆಚರಿಸಿಕೊಳ್ಳುತ್ತಿರುವ ಈ ಕಾಲೇಜಿನಲ್ಲಿ ಸಡಗರ ಸಂಭ್ರಮ ತುಂಬಿದೆ.
-ಸಾಬ್ಜನ್ ಇಟಗಿ