ಅರಣ್ಯಾಧಿಕಾರಿಗಳ ಸಂಘದಿಂದ ದಿನಚರಿ ಬಿಡುಗಡೆ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 30
ರಾಜ್ಯ ಉಪ ವಲಯ ಅರಣ್ಯ ಅಧಿಕಾರಿಗಳ ಸಂಘದ ಹಾವೇರಿ ವಿಭಾಗ ಮಟ್ಟದ 2014ನೇ ಸಾಲಿನ ದಿನಚರಿ ಬಿಡುಗಡೆ ಸಮಾರಂಭವು ಫೆ. 2ರಂದು ನಗರದ ಮುರುಘರಾಜೇಂದ್ರ ಮಠದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಹಾವೇರಿ ವಿಭಾಗ ಮಟ್ಟದ ಉಪ ವಲಯ ಅರಣ್ಯ ಅಧಿಕಾರಿಗಳ ಸಂಘದ ಅಧ್ಯಕ್ಷ ಜಗದೀಶ ಮಹರಾಜಪೇಟ ವಹಿಸಲಿದ್ದಾರೆ.
ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷ ಎಂ.ಎಸ್. ಕೊಪ್ಪಳ, ರಾಜ್ಯ ದಿನಗೂಲಿ ನೌಕರರ ಮಹಾಮಂಡಳದ ಹಾವೇರಿ ಜಿಲ್ಲಾ ಅಧ್ಯಕ್ಷ ಶಿವಣ್ಣ ಹಟ್ಟಿ, ರಾಜ್ಯ ದಿನಗೂಲಿ ನೌಕರರ ಮಹಾಮಂಡಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಗಿ, ಹಾವೇರಿ ವಿಭಾಗ ಮಟ್ಟದ ಅರಣ್ಯ ರಕ್ಷಕರ ಹಾಗೂ ವೀಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ ಕಚವಿ ಪಾಲ್ಗೊಳ್ಳಲಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು, ಸಂಘದ ಎಲ್ಲ ಪದಾಧಿಕಾರಿಗಳು, ಸರ್ವ ಸದಸ್ಯರು ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹಾವೇರಿ ವಿಭಾಗ ಮಟ್ಟದ ಪ್ರಧಾನ ಕಾರ್ಯದರ್ಶಿ ಜಯಣ್ಣ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--
ಕ್ಷೇಮಾಭಿವೃದ್ಧಿ ಸಂಘಕ್ಕೆ ಅವಿರೋಧ ಆಯ್ಕೆ
ಬ್ಯಾಡಗಿ: ತಾಲೂಕು ಮುದ್ರಣಾಲಯಗಳ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಫಕ್ಕೀರಯ್ಯ ಓದಿಸೋಮಠ, ಕಾರ್ಯದರ್ಶಿಯಾಗಿ ಬಸವರಾಜ ಕಬ್ಬೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಈ ಕುರಿತು ಬನಶಂಕರಿ ರಸ್ತೆಯ ವಿಠ್ಠಲ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಮರಡೆಪ್ಪ ಹೆಡಿಯಾಲ, ಸಹ ಕಾರ್ಯದರ್ಶಿಯಾಗಿ ಉದಯ ಚೌಧರಿ, ಖಜಾಂಚಿಯಾಗಿ ಸುಭಾಸ ಪಾಟೀಲ, ಸದಸ್ಯರಾಗಿ ಎನ್.ಆರ್. ಹಾದಿಮನಿ, ಚನ್ನಬಸಪ್ಪ ಬನ್ನಿಹಟ್ಟಿ, ಗಿರೀಶ ಇಂಡಿಮಠ ಆಯ್ಕೆಯಾಗಿದ್ದಾರೆ.
ಬಳಿಕ ಮಾತನಾಡಿದ ಅಧ್ಯಕ್ಷ ಓದಿಸೋಮಠ, ಮುದ್ರಣದ ದರಗಳನ್ನು ಏಕರೂಪಕ್ಕೆ ತರುವುದು ಸರ್ಕಾರಿ ಕಚೇರಿಗಳ ಮುದ್ರಣ ಕೆಲಸಗಳನ್ನು ತಾಲೂಕಿನ ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಮಾಡಿಸುವ ಕುರಿತಂತೆ ಸರ್ಕಾರದ ಮೇಲೆ ಒತ್ತಡ ತರುವುದು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮುದ್ರಣ ದರದಲ್ಲಿ ಹೆಚ್ಚಳ ಮಾಡುವ ಕುರಿತು ನಿರ್ಧರಿಸಲಾಗುವುದು ಎಂದರು.