ಎಆರ್‌ಟಿ ಕೇಂದ್ರ ಬಂದ್: ಎಚ್‌ಐವಿ ಪೀಡಿತರ ಪರದಾಟ
ಹಾವೇರಿ: ವೇತನ ತಾರತಮ್ಯ ವಿರೋಧಿಸಿ ಆರೋಗ್ಯ ಇಲಾಖೆಯ ಎಆರ್‌ಟಿ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ನೌಕರರು ಬೆಂಗಳೂರಿನಲ್ಲಿ ಗುರುವಾರದಿಂದ ಆರಂಭಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿನ ಎಆರ್‌ಟಿ ಕೇಂದ್ರದ ಬಾಗಿಲು ಹಾಕಿದ್ದರಿಂದ ರೋಗಿಗಳು ತೊಂದರೆಗೊಳಗಾದರು.
ಜಿಲ್ಲಾಸ್ಪತ್ರೆ ಹಾಗೂ ವಿವಿಧ ತಾಲೂಕು ಆಸ್ಪತ್ರೆಯಲ್ಲಿ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ 46 ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಇವರೆಲ್ಲ ಆಯಾ ಜಿಲ್ಲೆಯ ಆರೋಗ್ಯಾಧಿಕಾರಿಗಳಿಗೆ ಪ್ರತಿಭಟನೆಗೆ ತೆರಳುವ ಸೂಚನೆ ನೀಡಿ ಎಲ್ಲ 46 ಜನರು ಹೋಗಿದ್ದರು. ಆದರೆ, ಜಿಲ್ಲಾ ಆರೋಗ್ಯ ಇಲಾಖೆ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದಿರುವುದರಿಂದ ಎಆರ್‌ಟಿ ಕೇಂದ್ರದಲ್ಲಿ ಮಾಸಿಕ ಮಾತ್ರೆಗಳು, ಪ್ರತಿದಿನದ ಚಿಕಿತ್ಸೆ, ರಕ್ತ ತಪಾಸಣೆಗೆ ಮಧ್ಯಾಹ್ನದ ವೇಳೆಗೆ 15ಕ್ಕೂ ಹೆಚ್ಚು ರೋಗಿಗಳು ಎಆರ್‌ಟಿ ಕೇಂದ್ರಕ್ಕೆ ಬಂದು ವಿಚಾರಿಸಿದರು. ಆದರೆ, ಅಲ್ಲಿ ಸಿಬ್ಬಂದಿ ಇಲ್ಲದ್ದರಿಂದ ದೂರದ ಊರುಗಳಿಂದ ಬಂದವರು ತೊಂದರೆ ಅನುಭವಿಸುವಂತಾಯಿತು.
ನೌಕರರು ಪ್ರತಿಭಟನೆಗೆ ತೆರಳುತ್ತಿರುವ ಬಗ್ಗೆ ಕೇಂದ್ರದ ಮುಖ್ಯ ದ್ವಾರದ ಬಳಿ ಮಾಹಿತಿ ಪತ್ರ ಅಂಟಿಸಲಾಗಿದೆ. ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದರಿಂದ ಶುಕ್ರವಾರವಾದರೂ ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.