ಕಾಶೀ ಶ್ರೀಗಳ ಅದ್ಧೂರಿ ಸದ್ಭಾವನಾ ಪಾದಯಾತ್ರೆ
ರಾಣಿಬೆನ್ನೂರು: ಲಿಂ. ಉಜ್ಜಯನಿ ಸಿದ್ದಲಿಂಗ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಮತ್ತು ಕಾಶೀ ಪೀಠದ ಜಗದ್ಗುರುಗಳ ಸದ್ಭಾವನಾ ಪಾದಯಾತ್ರೆ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥೋತ್ಸವವು ಗುರುವಾರ ನಗರದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.
ಇಲ್ಲಿನ ಗೌಳಿಗಲ್ಲಿ ದುರ್ಗಾದೇವಿ ದೇವಸ್ಧಾನದಿಂದ ಕಾಶೀ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆ ಪ್ರಾರಂಭಿಸಿದರು. ಪೂಜ್ಯರು ನಡೆಸುತ್ತಿದ್ದ ಪಾದಯಾತ್ರೆಯನ್ನು ಹಾಗೂ ಮುಂದೆ ಸಾಗುತಿದ್ದ 1008 ಪೂರ್ಣ ಕುಂಭಗಳನ್ನು ಹೊತ್ತ ಮಹಿಳೆಯರನ್ನು ಆರತಿ ಹಿಡಿದಿದ್ದ ಮುತ್ತೈದೆಯರನ್ನು ಸಕಲ ವಾದ್ಯ-ಮೇಳದವರನ್ನು ಸ್ವಾಗತಿಸುವುದಕ್ಕಾಗಿ ಓಣಿಗಳಲ್ಲಿ ಭಕ್ತರು ತಮ್ಮ ಮನೆಗಳ ಮುಂದೆ ಹಾಗೂ ಬೀದಿಗಳಲ್ಲಿ ರಂಗೋಲಿಗಳನ್ನು ಬಿಡಿಸಿ ಪುಷ್ಪಗಳನ್ನು ಹಾಕಿ ಸ್ವಾಗತಿಸಿದರು.
ಗೌಳಿಗಲ್ಲಿ ರುಡ್ ಶೆಡ್ ರೋಡ್, ಆನಿಶೆಟ್ಟರ ಓಣಿ, ದೊಡ್ಡಪೇಟೆ, ಬಸವೇಶ್ವರ ನಗರ, ಕುಂಬಾರ ಓಣಿ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಪಾದಯಾತ್ರೆಯು ಕೊಟ್ಟೂರೇಶ್ವರ ನಗರದಲ್ಲಿ ಹಾಯ್ದು ಗಂಗಾಪುರ ರಸ್ತೆಯ ಹಿರೇಮಠದ ಪರಿಸರದಲ್ಲಿರುವ ಶನೈಶ್ವರ ಮಂದಿರ ತಲುಪಿತು.
ಕಾರ್ಯಕ್ರಮದಲ್ಲಿ ಹಿರೇಮಠ ಶನೈಶ್ವರ ಮಂದಿರ ಹಾಗೂ ಮದ್ದರಕಿಯ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಮಾಜಿ ಶಾಸಕ ಜಿ. ಶಿವಣ್ಣ, ನಗರಸಭಾ ಸದಸ್ಯರಾದ ಪ್ರಭುಸ್ವಾಮಿ ಕರ್ಜಗಿಮಠ, ಶಿವರಾಜ ಬ್ಯಾಡಗಿ, ಚಂದ್ರಣ್ಣ ಸೋಪ್ಪಿನ, ಚಂದ್ರಣ್ಣ ರೋಡ್ಡನವರ ಪಾಲ್ಗೊಂಡಿದ್ದರು.
--
ಮತದಾನ ಎಲ್ಲರ ಹಕ್ಕು: ರುದ್ರಗೌಡ
ಶಿಗ್ಗಾಂವಿ: ಭಾರತ ಚುನಾವಣಾ ಆಯೋಗದವರು ಸೂಚಿಸಿರುವಂತೆ ಮತದಾನದಲ್ಲಿ ಸರ್ವರೂ ಪಾಲ್ಗೊಳ್ಳಬೇಕು. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಹಕ್ಕು ಎಂದು ಗ್ರಾಪಂ ಸದಸ್ಯ ರುದ್ರಗೌಡ ಪಾಟೀಲ ಹೇಳಿದರು. ತಾಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದ ಸರ್ಕಾರಿ ಹಿ.ಪ್ರಾ ಶಾಲೆಯಲ್ಲಿ ಜರುಗಿದ ಮತದಾರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಚುನಾವಣಾ ಆಯೋಗದ ಕಾನೂನಿನಡಿ ಮತದಾನ ಮಾಡಲು ಮುಂದಾಗಬೇಕು. ಅಲ್ಲದೆ 18 ವರ್ಷ ಮುಗಿದ ಯುವಕರು ತಮ್ಮ ಮತದಾನದ ಹಕ್ಕನ್ನೂ ಸ್ಥಳೀಯ ಬಿಎಲ್ಒಗಳನ್ನು ಭೇಟಿ ಮಾಡಿ ಅವರು ಹೇಳಿದ ದಾಖಲೆಗಳನ್ನು ನೀಡಿ ಮತದಾನದ ಹಕ್ಕನ್ನು ಪಡೆಯಬೇಕು ಎಂದರು. ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಮಾಂತಣ್ಣವರ ಅಧ್ಯಕ್ಷತೆವಹಿಸಿದ್ದರು. ಶೇಖಣ್ಣ ನೀರಲಗಿ, ನಬಿಸಾಬ ಯಾದುಸಾಬನವರ, ಚಂಬಣ್ಣ ಮ್ಯಾಗೇರಿ, ಯಲ್ಲಪ್ಪ ಮ್ಯಾಗೇರಿ, ಉಮೇಶ ಬೆನಕನಹಳ್ಳಿ, ಹಜ್ಜುಪಟೇಲ ಪಾಟೀಲ ಇನ್ನಿತರರಿದ್ದರು.