ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಧರಣಿ

Lingaraj Badiger
Updated On : 31 Jan 2014, 10:57 am

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 30
ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯನ್ನು ರೈತ ದಿನವನ್ನಾಗಿ ಆಚರಿಸಿದ ಇಲ್ಲಿಯ ಬಿಜೆಪಿ ಘಟಕ, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ನಗರದ ಗಾಂಧಿ ಪ್ರತಿಮೆ ಎದುರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿತು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಿಂಗಪ್ಪ ಚಳಗೇರಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ವಿವಿಧ ಬೇಡಿಕೆಗಳನ್ನು ವಾರದೊಳಗೆ ಪರಿಹರಿಸಬೇಕು. ಇಲ್ಲದಿದ್ದರೆ ವಿಭಾಗ ಮಟ್ಟದಲ್ಲಿ ರೈಲ್ ರೋಖೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೇಡಿಕೆಗಳು: ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಬೆಲೆ ನಿಗದಿ ಅಧಿಕಾರವನ್ನು ರೈತರಿಗೆ ನೀಡಬೇಕು. ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 85 ತಾಲೂಕುಗಳಿಗೆ ಶೀಘ್ರ ಪರಿಹಾರ ನೀಡಬೇಕು. ಬರಪೀಡಿತದಿಂದ ಬಿಟ್ಟು ಹೋಗಿರುವ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ವಿವಿಧ ಬೆಳೆಗಳಿಗೆ ಘೋಷಿಸಿರುವ ಬೆಂಬಲ ಬೆಲೆ ಹೆಚ್ಚಿಸಿ, ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರಿಗೆ ಹೆಚ್ಚು ಬಡ್ಡಿ ದರದಲ್ಲಿ ಸಾಲ ನೀಡುವ ಖಾಸಗಿ ವ್ಯವಹಾರಸ್ಥರ ಚಕ್ರವ್ಯೂಹದಿಂದ ರೈತರನ್ನು ರಕ್ಷಿಸಬೇಕು. ಕಾನೂನು ಬಾಹಿರ ಬಡ್ಡಿ ವ್ಯವಹಾರ ಮಾಡುವವರನ್ನು ಕಾನೂನಿನಡಿಯಲ್ಲಿ ವ್ಯವಹರಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಕಬ್ಬು ಬೆಳೆಗಾರರ ಸಮಸ್ಯೆ ಶೀಘ್ರ ಪರಿಹರಿಸಬೇಕು. ಘೋಷಿಸಿರುವ ಬೆಲೆಯಲ್ಲಿ ಕಬ್ಬನ್ನು ಸರ್ಕಾರವೇ ಖರೀದಿಸಿ, ತಕ್ಷಣ ರೈತರಿಗೆ ಹಣ ಪಾವತಿಸಬೇಕು. ಕಳಪೆ ಹತ್ತಿ ಬೀಜ ಬಿತ್ತಿ ನಷ್ಟ ಅನುಭವಿಸಿದ ರೈತರಿಗೆ ಸಂಬಂಧಪಟ್ಟ ಕಂಪನಿಗಳಿಂದ ಪರಿಹಾರ ಕೊಡಿಸಬೇಕು. ಮೋಸ ಮಾಡುವ ಕಂಪನಿಗಳ ಮೇಲೆ ಕ್ರಮ ಜರುಗಿಸಬೇಕು. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ ರೈತರಿಗೆ ನಿತ್ಯ 12 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಕೇಂದ್ರದ ಅವೈಜ್ಞಾನಿಕ ರಸಗೊಬ್ಬರ ನೀತಿ ಕೈಬಿಟ್ಟು ಮೊದಲಿನಂತೆ ರಸಗೊಬ್ಬರ ಸಬ್ಸಿಡಿ ನೀಡಬೇಕು. ವಿದರ್ಭ ಮಾದರಿಯಲ್ಲಿ ರೈತರ ಸಮಗ್ರ ಅಭಿವೃದ್ಧಿಗಾಗಿ ಪ್ಯಾಕೇಜ್ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೇಡಿಕೆಗಳ ಪಟ್ಟಿಯನ್ನು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ರವಾನಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ನಗರಸಭೆ ಸದಸ್ಯರಾದ ಲಲಿತಾ ಗುಂಡೇನಹಳ್ಳಿ, ನಜಬುನ್ನಿಸಾ ನದಾಫ್, ಜ್ಯೋತಿ ಸಾತೇನಹಳ್ಳಿ, ಪ್ರಭು ಹಿಟ್ನಳ್ಳಿ, ಗುರುಬಸಪ್ಪ ನವಲಿ, ಶಿವಲಿಂಗಪ್ಪ ಕಲ್ಯಾಣಿ, ಪ್ರದೀಪ ಮಳ್ಳೂರ, ಗಂಗಾಧರ ಬಾಣದ, ಮುರಳೀಧರ ಅಧ್ಯಾಪಕ, ಶ್ರೀಪಾದ ಬೆಟಗೇರಿ, ನಾಗಪ್ಪ ದೊಡ್ಮನಿ, ಗೀತಾ ಜುಜಗಾಂವ, ಮಲ್ಲಿಕಾರ್ಜುನ ಸಾತೇನಹಳ್ಳಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement