ಹಳ್ಳ ಹಿಡಿದ ಗ್ರಾಮೀಣ ಕ್ರೀಡಾಂಗಣ ಕಾಮಗಾರಿ
ಹಾವೇರಿ: ಗ್ರಾಮೀಣ ಮಕ್ಕಳಿಗೆ ಕ್ರೀಡಾ ಉತ್ತೇಜನ ನೀಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಗ್ರಾಮೀಣ ಕ್ರೀಡಾಂಗಣ ಕಾಮಗಾರಿಯೂ ಒಂದು. ಆದರೆ, ಈ ಯೋಜನೆಯಲ್ಲಿ ಬಂದ ಅನುದಾನವೇ ಜಿಲ್ಲೆಯ ಗ್ರಾಮೀಣ ಶಾಲೆಗಳಿಗೆ ಮುಳುವಾಗಿದೆ. ಉತ್ತಮ ಕ್ರೀಡಾಂಗಣ ಸಿದ್ಧವಾಗುತ್ತದೆ ಎಂದುಕೊಂಡಿದ್ದವರು ಈಗ ಭ್ರಮನಿರಸನಗೊಂಡಿದ್ದಾರೆ.
ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ (ಪೈಕಾ) ಯೋಜನೆಯಲ್ಲಿ 2011-12ನೇ ಸಾಲಿನಲ್ಲಿ ಜಿಲ್ಲೆಯ 21 ಗುರುತಿಸಿದ ಗ್ರಾಪಂಗಳ ಪೈಕಿ 16 ಶಾಲೆಗಳ ಕ್ರೀಡಾಂಗಣವನ್ನು ತಲಾ ರು. 70 ಸಾವಿರ ಅನುದಾನದಲ್ಲಿ ಅಭಿವೃದ್ಧಿಪಡಿಸಲು ಒಟ್ಟು ರು. 14.70 ಲಕ್ಷ ಬಿಡುಗಡೆ ಮಾಡಿತ್ತು. ಅದರಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಈ ಕಾಮಗಾರಿಯನ್ನು 2013ರ ಸೆಪ್ಟೆಂಬರ್ ತಿಂಗಳಲ್ಲಿ ಕೆಆರ್ಐಡಿಎಲ್ (ಭೂ ಸೇನಾ ನಿಗಮ)ಗೆ ವಹಿಸಿತ್ತು. ಆದರೆ, ಭೂ ಸೇನಾ ನಿಗಮವು ಕಳಪೆ ಹಾಗೂ ಅಪೂರ್ಣವಾಗಿ ಕಾಮಗಾರಿ ನಿರ್ವಹಿಸಿದ್ದರಿಂದ ಕಾಮಗಾರಿ ಕೈಗೊಂಡಿದ್ದ ಶಾಲೆಗಳಲ್ಲಿ ಹಿಂದಿದ್ದ ಮೈದಾನವೂ ಹಾಳಾದಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಸರ್ಕಾರದ ಅನುದಾನ ಹೇಗೆ ನಿಷ್ಪ್ರಯೋಜಕವಾಗುತ್ತದೆ ಎನ್ನಲು ಇದು ತಾಜಾ ಉದಾಹರಣೆಯಾಗಿದೆ.
ಕಾಟೇನಹಳ್ಳಿಯಲ್ಲಿ ಕಾಟಾಚಾರದ ಕೆಲಸ: ಕೆಲವೆಡೆಗಳಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗಳನ್ನು ಕಾಟಾಚಾರಕ್ಕೆ ಮುಗಿಸಿ ಕೆಆರ್ಐಡಿಎಲ್ ಕೈತೊಳೆದುಕೊಂಡಿದೆ. ಹಾವೇರಿ ತಾಲೂಕಿನ ಕಾಟೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಟಾಚಾರದ ಕಾಮಗಾರಿ ಮಾಡಲಾಗಿದೆ. ಯಾರೂ ಹೇಳವರು ಕೇಳವರಿಲ್ಲ ಎಂಬಂತೆ ಬೇಕಾಬಿಟ್ಟಿಯಾಗಿ ಕೆಲಸ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಆರಂಭಗೊಂಡಿದ್ದ ಈ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಹಳ್ಳ ಹಿಡಿದಿದೆ. ಮೈದಾನದಲ್ಲಿ ಖೋ ಖೋ, ವಾಲಿಬಾಲ್, ಕಬಡ್ಡಿ ಹಾಗೂ ಲಾಂಗ್ ಜಂಪ್ ಅಂಕಣ ನಿರ್ಮಾಣ ಮಾಡಬೇಕಿತ್ತು. ಆದರೆ, ನಿಯಮಾನುಸಾರ ಕಾಮಗಾರಿ ನಿರ್ವಹಿಸದೇ ಕೇವಲ 2 ಇಂಚು ಅಗೆದು 6 ಟ್ರ್ಯಾಕ್ಟರ್ ಮಣ್ಣು ಹಾಕಲಾಗಿದೆ. ಲಾಂಗ್ ಜಂಪ್ ಕೋರ್ಟ್ ಕಾಮಗಾರಿಯನ್ನೇ ಮಾಡಿಲ್ಲ. 8 ಕೂಲಿಯಾಳುಗಳು 2 ದಿನಗಳ ಕಾಲ ಕಾಮಗಾರಿ ಮಾಡಿದ್ದು, 6 ಟ್ರ್ಯಾಕ್ಟರ್ ಮಣ್ಣು ಹಾಕಿದ್ದಕ್ಕೆ ಬರೊಬ್ಬರಿ ರು. 70 ಸಾವಿರ ಖರ್ಚಾಗಿದೆ.
ಬೇರೆಡೆಯೂ ಅಷ್ಟೇ: ಉಳಿದ 15 ಶಾಲೆಗಳ ಪೈಕಿ ಹಾವೇರಿ ತಾಲೂಕಿನ ವರದಾಹಳ್ಳಿಯ ಆಲದಮ್ಮ ಪ್ರೌಢಶಾಲೆಯ ಕ್ರೀಡಾಂಗಣದ ಕಾಮಗಾರಿ ಇನ್ನೂ ಆರಂಭ ಕಂಡಿಲ್ಲ. ಉಳಿದಂತೆ ಹಾನಗಲ್ಲ ತಾಲೂಕಿನ ಚಿಕ್ಕಾಂಶಿ ಹೊಸೂರಿನ ಸರ್ಕಾರಿ ಪ್ರೌಢಶಾಲೆ, ಕೊಪ್ಪರಿಸಿಕೊಪ್ಪ, ಬೈಚವಳ್ಳಿ, ಸವಣೂರು ತಾಲೂಕಿನ ಹೂವಿನಶಿಗ್ಲಿ, ಹೆಸರೂರು, ಇಚ್ಚಂಗಿ, ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಹಾಗೂ ಕಬನೂರು ಪ್ರೌಢಶಾಲೆಗಳು, ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಮತ್ತು ಮಾಸಣಗಿ, ಹಿರೇಕೆರೂರು ತಾಲೂಕಿನ ಶಿರಗಂಬಿ ಹಿರಿಯ ಪ್ರಾಥಮಿಕ ಶಾಲೆ, ಯಡಗೋಡಮಕ್ರಿ, ಚಿಕ್ಕೊಣತಿ, ರಾಣಿಬೆನ್ನೂರಿನ ಅರೇಮಲ್ಲಾಪುರ ಪ್ರೌಢಶಾಲೆಗಳಿಗೆ ಕ್ರೀಡಾಂಗಣಕ್ಕೆ ತಲಾ ರು. 70 ಸಾವಿರ ಅನುದಾನ ಮಂಜೂರಾಗಿದೆ. ಆದರೆ, ಅನುದಾನಕ್ಕೆ ತಕ್ಕಂತೆ ಉತ್ತಮವಾಗಿ ಕಾಮಗಾರಿ ನಡೆದಿಲ್ಲ.
ಇದ್ದದ್ದೂ ಹಾಳು: ಪೈಕಾ ಯೋಜನೆಯಲ್ಲಿ ಕಾಮಗಾರಿ ಕೈಗೊಂಡ ಶಾಲೆಗಳಲ್ಲಿ ಈ ಹಿಂದಿದ್ದ ಕ್ರೀಡಾಂಗಣಗಳೇ ಬಹುಪಾಲು ಉತ್ತಮ ಎಂಬಂತಿತ್ತು. ಆದರೆ, ಸರ್ಕಾರದಿಂದ ಅನುದಾನ ಬಂದಿದೆ ಎಂದರೆ ಅದರಿಂದ ಪ್ರಯೋಜನವಾದೀತು ಎಂದುಕೊಳ್ಳಲಾಗಿತ್ತು. ಆದರೆ, ಕೇವಲ 2 ದಿನಗಳಲ್ಲಿ ಕಾಮಗಾರಿ ಕೈಗೊಂಡು, ಗುಣಮಟ್ಟದ ಮಣ್ಣನ್ನೂ ಹಾಕದೇ, ನಿಯಮದಂತೆ ಕಾಮಗಾರಿ ನಿರ್ವಹಿಸದೇ ಕ್ರೀಡಾಂಗಣ ಹಾಳುಗೆಡವಲಾಗಿದೆ. ಇದರಿಂದ ಗ್ರಾಮೀಣ ಶಾಲಾ ಮಕ್ಕಳು ಆಟವಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಸುಧಾರಣಾ ಸಮಿತಿಗಳು ಸಂಬಂಧಪಟ್ಟವರ ಗಮನಕ್ಕೆ ಈ ವಿಷಯ ತಂದರೂ ಕ್ಯಾರೇ ಎನ್ನುವವರಿಲ್ಲ. ಕಾಟಾಚಾರಕ್ಕೆ ನಡೆಯುತ್ತಿರುವ ಕಾಮಗಾರಿಗಳತ್ತ ದೃಷ್ಟಿ ಹಾಯಿಸದೇ ಯುವಜನ ಕ್ರೀಡಾ ಇಲಾಖೆ ಕೈಕಟ್ಟಿ ಕುಳಿತಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಜಿಪಂ ಸಿಇಒ, ಯುವಜನ ಸೇವಾ ಇಲಾಖೆ, ಭೂಸೇನಾ ನಿಗಮದ ಅಧಿಕಾರಿಗಳಿಗೆ ಸಂಬಂಧಿಸಿದ ಎಸ್ಡಿಎಂಸಿಗಳು ಪತ್ರ ಬರೆದಿವೆ. ಕ್ರೀಡಾಂಗಣ ಕಾಮಗಾರಿಯನ್ನು ನಿಯಮಾನುಸಾರ ಕೈಗೊಂಡಿಲ್ಲ. 3 ತಿಂಗಳಿಂದ ಕಾಮಗಾರಿ ನಿರ್ವಹಿಸಿದ್ದರೂ ಪೂರ್ಣಗೊಳಿಸಿಲ್ಲ. ಇದ್ದ ಮೈದಾನವನ್ನೂ ಹಾಳು ಮಾಡಿದ್ದರಿಂದ ವಿದ್ಯಾರ್ಥಿಗಳ ದೈನಂದಿನ ಕ್ರೀಡಾ ಚಟುವಟಿಕೆಗೆ ತೊಂದರೆಯಾಗಿದೆ ಎಂದು ಕಾಟೇನಹಳ್ಳಿ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ಎಲ್.ಸಿ. ನೇಸರ್ಗಿ ಹೇಳುತ್ತಾರೆ.
- ನಾರಾಯಣ ಹೆಗಡೆ