ಕಳಪೆ ಕಾಮಗಾರಿ: ಜಯಕರ್ನಾಟಕ ಪ್ರತಿಭಟನೆ
ಹಾವೇರಿ: ನಗರಸಭೆ ವತಿಯಿಂದ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಕಳಪೆಯಾಗಿರುವುದನ್ನು ಖಂಡಿಸಿ ಹಾಗೂ ಈ ಹಿಂದೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಬಿಲ್ ಪಾವತಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಶುಕ್ರವಾರ ಇಲ್ಲಿನ ನಗರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿತು.
ನಗರೋತ್ಥಾನ ಯೋಜನೆಯಡಿ ನಗರದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿ ತೀರಾ ಕಳಪೆಯಾಗಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಉತ್ತರ ನೀಡುತ್ತಿಲ್ಲ. ಈ ವಿಚಾರ ತಮಗೆ ಗೊತ್ತೆ ಇಲ್ಲದಂತೆ ಎಂಜಿನಿಯರ್‌ಗಳು ವರ್ತಿಸುತ್ತಿದ್ದಾರೆ.
ಕಾಮಗಾರಿ ಕಳಪೆಯಾಗಿದ್ದರೂ ಪರಿಶೀಲಿಸದೇ ಸ್ವ-ಹಿತಾಸಕ್ತಿಗಾಗಿ ಬಿಲ್ ಪಾವತಿಸಲು ನೆರವು ನೀಡುತ್ತಿದ್ದಾರೆ. ಇದರಿಂದ ನಗರದ ಅಭಿವೃದ್ಧಿ ಅಧೋಗತಿಗೆ ತಲುಪುತ್ತಿದೆ ಎಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಳಪೆ ಕಾಮಗಾರಿಯ ಬಿಲ್ ಪಾವತಿಸಬಾರದು. ಒಂದು ವೇಳೆ ಪಾವತಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಘಟನೆ ರಾಜ್ಯ ಹಿರಿಯ ಉಪಾಧ್ಯಕ್ಷ ಸದಾನಂದ ಶೆಟ್ಟಿ ಎಚ್ಚರಿಸಿದರು. ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ ಶಿವಣ್ಣ ಹೂಗಾರ, ಜಿಲ್ಲಾಧ್ಯಕ್ಷ ಸತೀಶ ಮಡಿವಾಳರ, ಶಾಹೀದ್ ದೇವಿಹೊಸೂರ, ಸಿದ್ದಲಿಂಗೇಶ್ವರ ಮುಂಡಾಸದ, ಸಂಜಯಗಾಂಧಿ ಸಂಜೀವಣ್ಣನವರ, ರಮೇಶ ಜಾಲಿಹಾಳ, ಸಚಿನ ಉಪ್ಪಾರ, ಶಿವಪುತ್ರಪ್ಪ ಕಳಸದ, ಮೌನೇಶ ಪಾಟೀಲ ಇತರರು ಇದ್ದರು.