ಮಹಿಳೆ, ಮಕ್ಕಳ ಮಾರಾಟ: ಎಚ್ಚರವಾಗಿರಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜ. 31
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಹಾಗೂ ಮಹಿಳೆಯರ ಮಾರಾಟ ಮಾಡುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿರುವ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಸಿಇಎಸ್ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್.ಕೆ. ಲಮಾಣಿ ಹೇಳಿದರು.
ರಾಣಿಬೆನ್ನೂರಿನ ಸೇವಾ ಅಂಧರ ಸಂಸ್ಥೆ ಹಾಗೂ ಸಿಇಎಸ್ ಬಾಲಕಿಯರ ಪ್ರೌಢಶಾಲೆಯ ಆಶ್ರಯದಲ್ಲಿ ಮಹಿಳೆ ಮತ್ತು ಮಕ್ಕಳ ಮಾರಾಟ ತಡೆಗಟ್ಟುವ ಯೋಜನೆಯ ಅಂಗವಾಗಿ ಏರ್ಪಡಿಸಿದ್ದ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಅಮಾಯಕ ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ಕೆಲ ಸಮಾಜ ಘಾತುಕರು ಅವರನ್ನು ಬೇರೆ ಕಡೆಗಳಲ್ಲಿ ಮಾರಾಟ ಮಾಡುವ ಮೂಲಕ ಅವರನ್ನು ಶೋಷಣೆಗೆ ಒಳಪಡಿಸುತ್ತಿದ್ದಾರೆ. ಇಂತಹ ದುಷ್ಟರಿಗೆ ಸಮಾಜದಲ್ಲಿರುವ ಮಹಿಳೆಯರು ತಕ್ಕಪಾಠ ಕಲಿಸಬೇಕು. ಲೈಂಗಿಕ ವೃತ್ತಿಗೆ ಮಹಿಳೆಯರನ್ನು ಪ್ರೋತ್ಸಾಹಿಸುವ ಯಾವುದೇ ಮಹಿಳೆ ಆಗಲಿ ಇಲ್ಲವೆ ಪುರುಷರಾಗಲಿ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಇಲ್ಲವೆ ಸ್ವಯಂಸೇವಾ ಸಂಸ್ಥೆಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ವಿದ್ಯಾರ್ಥಿನಿಯರು ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ರಕ್ಷಣೆಗೆ ತಾವು ಸದಾ ಸಿದ್ಧರಾಗಿರಬೇಕು. ಅಪರಿಚಿತರೊಂದಿಗೆ ಯಾವುದೇ ಸಲುಗೆ ತೋರದಿರಬೇಕು ಎಂದು ತಿಳಿಸಿದರು. ನಂತರ ಮಹಿಳೆಯರ ರಕ್ಷಣೆಗೆ ಪೂರಕವಾದ ಘೋಷಣೆಗಳೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಶಕುಂತಲಾ ಚೌಗಲಾ ಅವರಿಗೆ ಮನವಿ ಸಲ್ಲಿಸಿದರು.
ಜಾಥಾದಲ್ಲಿ ರಾಣಿಬೆನ್ನೂರಿನ ಸೇವಾ ಅಂಧರ ಸಂಸ್ಥೆ ಹಾಗೂ ಸಿಇಎಸ್ ಬಾಲಕಿಯರ ಪ್ರೌಢಶಾಲೆ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.