ರೈತರ ಧರಣಿ 5ನೇ ದಿನಕ್ಕೆ
ಹಾವೇರಿ: ಕಳಪೆ ಬಿಟಿ ಹತ್ತಿ ಬೀಜದಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಐದನೇ ದಿನಕ್ಕೆ ಕಾಲಿರಿಸಿದೆ.
ಐದನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಬ್ಯಾಡಗಿ ತಾಲೂಕಿನ ರೈತರು ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರ ಮುಖವಾಡ ಧರಿಸಿ, ಧಿಕ್ಕಾರ ಕೂಗಿ, ತಮಟೆ ಬಾರಿಸುವ ಮೂಲಕ ಐದನೇ ದಿನ ರೈತರು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಶುಕ್ರವಾರ ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಬಸವರಾಜ ಹಾದಿಮನಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಬ್ಯಾಡಗಿ ತಾಲೂಕಿನ ಮುಖಂಡರಾದ ರುದ್ರಗೌಡ ಕಾಳನಗೌಡ್ರ, ಗಂಗಣ್ಣ ಎಲಿ, ಮಲ್ಲಿಕಾರ್ಜುನ ಬಳ್ಳಾರಿ, ಎಂ.ವಿ. ಚಿಕ್ಕಳ್ಳಿ, ಎಸ್.ವಿ. ಚಪ್ಪರದಹಳ್ಳಿ, ಶಿವಬಸಪ್ಪ ಭೋವಿ, ಸುರೇಶ ಚಲವಾದಿ, ವೆಂಕಟೇಶ ಕುಂಟೆ, ಅಶೋಕಅಗಡಿ, ನಂಜುಂಡಪ್ಪ ಹಾವೇರಿಮಠ ಇದ್ದರು.